×
Ad

ಪಿಸ್ಟೋರಿಯಸ್‌ಗೆ ಮತ್ತೆ ಜೈಲು ಪಾಲಾಗುವ ಭೀತಿ

Update: 2016-06-11 23:42 IST

 ಜೋಹಾನ್ಸ್‌ಬರ್ಗ್, ಜೂ.11: ಮೂರು ವರ್ಷಗಳ ಹಿಂದೆ ಪ್ರೇಯಸಿಯನ್ನು ಹತ್ಯೆಗೈದು ಪ್ರಸ್ತುತ ಗೃಹಬಂಧನದಲ್ಲಿರುವ ದಕ್ಷಿಣ ಆಫ್ರಿಕದ ‘ಬ್ಲೇಡ್ ರನ್ನರ್’ ಖ್ಯಾತಿಯ ಪ್ಯಾರಾಲಿಂಪಿಕ್ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲಿದ್ದು, ಮತ್ತೊಮ್ಮೆ ಜೈಲು ಪಾಲಾಗುವ ಭೀತಿ ಎದುರಿಸುತ್ತಿದ್ದಾರೆ.

ಪಿಸ್ಟೋರಿಯಸ್ 2013ರಲ್ಲಿ ಪ್ರೇಮಿಗಳ ದಿನದಂದೇ ರೂಪದರ್ಶಿ ಹಾಗೂ ಕಾನೂನು ಪದವೀಧರೆ ರೀವಾ ಸ್ಟೀನ್‌ಕ್ಯಾಂಪ್ ಎಂಬಾಕೆಯನ್ನು ಬೆಡ್‌ರೂಮ್‌ನ ಶೌಚಗೃಹದಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆಗೈದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಮನೆಗೆ ಅಪರಿಚಿತ ವ್ಯಕ್ತಿನುಗ್ಗಿದ ಕಾರಣ ಪ್ರಾಣರಕ್ಷಣೆಗೆ ತಾನು ಗುಂಡು ಹಾರಿಸಿದ್ದಾಗಿ ನ್ಯಾಯಾಲಯಕ್ಕೆ ಪಿಸ್ಟೋರಿಯಸ್ ಹೇಳಿಕೆ ನೀಡಿದ್ದರು.

ಪಿಸ್ಟೋರಿಯಸ್ ನರಹತ್ಯೆಯ ಆರೋಪದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಈಗಾಗಲೇ ಒಂದು ವರ್ಷ ಜೈಲು ಸಜೆ ಅನುಭವಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಪಿಸ್ಟೋರಿಯಸ್ ಪ್ರಿಟೋರಿಯದಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ಗೃಹಬಂಧನದಲ್ಲಿದ್ದರು. ಅನುಮತಿಯಿಲ್ಲದೆ 12 ಮೈಲಿಗಿಂತ ದೂರ ಹೋಗದಂತೆ ನಿರ್ಬಂಧವಿಧಿಸಲಾಗಿದೆ.

29ರ ಹರೆಯದ ಪಿಸ್ಟೋರಿಯಸ್ ಹತ್ಯೆಯ ಆರೋಪದಲ್ಲಿ ಕನಿಷ್ಠ 15 ವರ್ಷ ಜೈಲು ಶಿಕ್ಷೆ ಎದುರಿಸಲಿದ್ದಾರೆ. ಈಗಾಗಲೇ ಜೈಲಿನಲ್ಲಿ ಕೆಲವು ಸಮಯ ಕಳೆದಿರುವ ಪಿಸ್ಟೋರಿಯಸ್‌ಗೆ ವಿಕಲಚೇತನ ಎಂಬ ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News