×
Ad

ಚುನಾವಣಾ ಆಯೋಗದ ಸದಸ್ಯರಿಗೆ ಸಂವಿಧಾನಾತ್ಮಕ ರಕ್ಷಣೆ: ಕೇಂದ್ರ ನಕಾರ

Update: 2016-06-12 19:56 IST

ಹೊಸದಿಲ್ಲಿ: ಚುನಾವಣಾ ಆಯೋಗದ ಎಲ್ಲ ಸದಸ್ಯರಿಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು ಮಾಡಿ, ಆಯೋಗ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರಕಾರ ಮೂಲೆಗುಂಪು ಮಾಡಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿರುವುದರಿಂದ ತಕ್ಷಣಕ್ಕೆ ಯಾವ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ ಎಂದು ಪ್ರಸ್ತಾವವನ್ನು ತಳ್ಳಿಹಾಕಿದೆ.

ಸಂವಿಧಾನದ 324(5)ನೆ ವಿಧಿ ತಿದ್ದುಪಡಿಗೆ ಎಲ್ಲ ರಾಜಕೀಯ ಪಕ್ಷಗಳ ಒಮ್ಮತ ಅಗತ್ಯ. ಆಗ ಮಾತ್ರ ಎಲ್ಲ ಚುನಾವಣಾ ಆಯುಕ್ತರಿಗೆ ಅವರ ಪದಚ್ಯುತಿಯ ವಿರುದ್ಧ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಕಾನೂನು ಸಚಿವಾಲಯ ಆಯೋಗಕ್ಕೆ ಮಾಹಿತಿ ರವಾನಿಸಿದೆ ಎಂದು ತಿಳಿದುಬಂದಿದೆ.

ಚುನಾವಣಾ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರನ್ನು ಒಮ್ಮೆ ನೇಮಕ ಮಾಡಿದರೆ, ಅವರ ಅಧಿಕಾರಾವಧಿ ಮುಗಿಯುವವರೆಗೂ ಅವರನ್ನು ಹುದ್ದೆಯಿಂದ ಕಿತ್ತುಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಶಿಪಾರಸ್ಸಿನ ಮೇರೆಗೆ ಮಾತ್ರ ವಜಾ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ಕಾನೂನು ಸಚಿವಾಲಯದ ಶಿಫಾರಸಿನ ಮೇಲೆ ನೇಮಕ ಮಾಡುತ್ತಾರೆ.

ಮುಖ್ಯ ಚುನಾವಣಾ ಆಯುಕ್ತರನ್ನು ಸಂಸತ್ತಿನ ವಾಗ್ದಂಡನೆ ಪ್ರಕ್ರಿಯೆ ಅನ್ವಯ ಮಾತ್ರ ಕಿತ್ತುಹಾಕಲು ಅವಕಾಶ ಇದೆ. ಆದರೆ ಚುನಾವಣಾ ಆಯುಕ್ತರನ್ನು ಕೇಂದ್ರ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಪದಚ್ಯುತಿಗೊಳಿಸಬಹುದಾಗಿದೆ.

ಜನವರಿ 5ರಂದು ಮುಖ್ಯ ಚುನಾವಣಾ ಆಯುಕ್ತ ನಝೀಂ ಜೈದಿ ಹಾಗೂ ಕಾನುನು ಸಚಿವಾಲಯದ ಹಿರಿಯ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಇರುವ ಪ್ರಕ್ರಿಯೆಯನ್ನೇ ಎಲ್ಲ ಆಯುಕ್ತ ಪದಚ್ಯುತಿಗೂ ಅನುಸರಿಸುವಂತೆ ಸರಕಾರ ಕಡ್ಡಾಯ ಮಾಡಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಬೆಯಲ್ಲಿ ಚುನಾವಣಾ ಆಯುಕ್ತ ಓ.ಪಿ.ರಾವತ್ ಕೂಡಾ ಹಾಜರಿದ್ದರು.

ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು, ಈ ಪ್ರಸ್ತಾವ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ಅನಿವಾರ್ಯ ಎನ್ನುವುದನ್ನು ಆಯೋಗದ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News