×
Ad

ಬಿಡುಗಡೆಗೊಂಡ ಬೆನ್ನಿಗೇ ಮತ್ತೆ ಯಾಸಿನ್ ಮಲಿಕ್ ಬಂಧನ

Update: 2016-06-12 20:46 IST

ಶ್ರೀನಗರ,ಜೂ.12: 1987ರ ಚುನಾವಣೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಒಂದು ವಾರ ಬಂಧನದಲ್ಲಿದ್ದು ಶನಿವಾರವಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್‌ರನ್ನು ನಿನ್ನೆ ತಡರಾತ್ರಿ ಅವರ ಮೈಸುಮಾ ನಿವಾಸದಿಂದ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಕಾಶ್ಮೀರಿ ಪಂಡಿತರು ಮತ್ತು ಯೋಧರಿಗಾಗಿ ಕಣಿವೆಯಲ್ಲಿ ಸೈನಿಕ ಕಾಲನಿಯ ನಿರ್ಮಾಣವನ್ನು ವಿರೋಧಿಸಲು ರವಿವಾರ ಕಟ್ಟರ್ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಸೈಯದ್ ಅಲಿ ಗೀಶಾನಿಯವರ ನಿವಾಸದಲ್ಲಿ ಜಂಟಿ ವಿಚಾರಗೋಷ್ಠಿಯೊಂದು ನಡೆದಿದ್ದು, ಇದಕ್ಕೆ ಜಮ್ಮು-ಕಾಶ್ಮೀರ ಸರಕಾರವು ಅನುಮತಿ ನೀಡಿತ್ತು.

ಪ್ರತ್ಯೇಕತಾವಾದಿಗಳ ನಡುವೆ ಒಗ್ಗಟ್ಟಿಗಾಗಿ ಹೊಸದಾಗಿ ನಡೆಯುತ್ತಿರುವ ಪ್ರಯತ್ನಗಳ ಮುಂಚೂಣಿಯಲ್ಲಿರುವ ಯಾಸಿನ್‌ರನ್ನು ವಿಚಾರಗೋಷ್ಠಿಗೆ ಕೆಲವೇ ಗಂಟೆಗಳ ಮೊದಲು ಬಂಧಿಸಲಾಗಿದೆ.

ಕಣಿವೆಯಲ್ಲಿ ಪಂಡಿತರಿಗೆ ಪ್ರತ್ಯೇಕ ಬಡಾವಣೆಗಳ ಸ್ಥಾಪನೆ ಮತ್ತು ಸೈನಿಕ ಕಾಲನಿಗಳ ನಿರ್ಮಾಣದ ವಿರುದ್ಧ ಜಾಗೃತಿ ಅಭಿಯಾನವೊಂದನ್ನು ಆರಂಭಿಸಲು ಪ್ರತ್ಯೇಕತಾವಾದಿ ಗುಂಪುಗಳು ಕಳೆದ ವಾರ ನಿರ್ಧರಿಸಿದ್ದವು.

ಗೀಲಾನಿ ನಿವಾಸದಲ್ಲಿ ನಡೆದ ವಿಚಾರಗೋಷ್ಠಿಯು ಪ್ರತ್ಯೇಕತಾವಾದಿ ಗುಂಪುಗಳು ಅಳವಡಿಸಿಕೊಂಡಿರುವ ಕಾರ್ಯತಂತ್ರದ ಭಾಗವಾಗಿತ್ತು.

ರಾಜ್ಯದಲ್ಲಿ ಕಾಶ್ಮೀರಿ ಪಂಡಿತರು ಅಥವಾ ನಿವೃತ್ತ ಸೇನಾ ಸಿಬ್ಬಂದಿಗಳಿಗೆ ಬಡಾವಣೆಗಳನ್ನು ಸ್ಥಾಪಿಸುವ ಸರಕಾರದ ಯಾವುದೇ ಕ್ರಮದ ವಿರುದ್ಧ ಜೂನ್ 15ರಂದು ವೌನ ಧರಣಿ ನಡೆಸಲು ಪ್ರತ್ಯೇಕತಾವಾದಿ ಗುಂಪುಗಳು ಯೋಜಿಸಿವೆ.

ರಾಜ್ಯದಲ್ಲಿಯ ಜನಸಂಖ್ಯಾ ಸ್ವರೂಪವನ್ನು ಬದಲಿಸುವ ಹುನ್ನಾರವಾಗಿ ಭಾರತದ ಇತರ ಭಾಗಗಳ ಜನರನ್ನು ನೆಲೆಗೊಳಿಸಲು ಈ ಬಡಾವಣೆಗಳು ಮತ್ತು ಕಾಲನಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಈ ಗುಂಪುಗಳು ಆರೋಪಿಸಿವೆ. ಆದರೆ ಸರಕಾರವು ಇದನ್ನು ನಿರಾಕರಿಸಿದ್ದು,ಪಂಡಿತರಿಗಾಗಿ ಪ್ರತ್ಯೇಕ ಬಡಾವಣೆಗಳ ಸ್ಥಾಪನೆಯ ವಿಚಾರವಿಲ್ಲ,ಆದರೆ ಅವರು ತಮ್ಮ ಹುಟ್ಟೂರುಗಳಿಗೆ ಮರಳಲು ಭದ್ರತಾ ಸ್ಥಿತಿಯು ಉತ್ತಮಗೊಳ್ಳುವವರೆಗೆ ಅವರಿಗೆ ತಾತ್ಕಾಲಿಕ ಆಶ್ರಯಯನ್ನು ಕಲ್ಪಿಸಲಾಗುತ್ತದೆ ಮತ್ತು ಭೂಮಿಯ ಕೊರತೆಯಿಂದಾಗಿ ಸೈನಿಕ ಕಾಲನಿಗಳನ್ನು ಸ್ಥಾಪಿಸಲಾಗುವುದಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News