ಪಾಕ್ ವಿರುದ್ಧ ಹಗೆತನದಲ್ಲಿ ಅಮೆರಿಕ ಭಾರತಕ್ಕಿಂತಲೂ ಮುಂದಿದೆ: ಜೆಯುಡಿ ವರಿಷ್ಠ ಹಾಫೀಝ್ ಸಯೀದ್ ಕಿಡಿ
ಲಾಹೋರ್, ಜೂ.12: ಪಾಕಿಸ್ತಾನದ ವಿರುದ್ಧ ಹಗೆತನ ಸಾಧಿಸುವಲ್ಲಿ ಅಮೆರಿಕವು ಭಾರತಕ್ಕಿಂತಲೂ ಮುಂದಿದೆ ಎಂದು ಉಗ್ರಗಾಮಿ ಸಂಘಟನೆ ಜಮಾತುದ್ದುಲ್ ದಾವಾದ ವರಿಷ್ಠ ಹಾಫೀಝ್ ಸಯೀದ್ ಕಿಡಿಕಾರಿದ್ದಾನೆ. ಅಮೆರಿಕವು ಪಾಕಿಸ್ತಾನದ ಅಣುಶಕ್ತಿ ಕಾರ್ಯಕ್ರಮವನ್ನು ಹಾಳುಗೆಡವಲು ಬಯಸುತ್ತಿದೆಯೆಂದು ಅವರು ಆಪಾದಿಸಿದ್ದಾರೆ.
‘‘ಪಾಕ್ ಜೊತೆಗಿನ ಹಗೆತನ ಬೆಳೆಸುವಲ್ಲಿ ಅಮೆರಿಕವು ಭಾರತಕ್ಕಿಂತಲೂ ಮುಂದೆ ಸಾಗಿದೆ. ಪಾಕಿಸ್ತಾನವು ಯಾವುದೇ ಪ್ರತಿಕ್ರಿಯೆ ನೀಡುವುದೇ ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಅಮೆರಿಕವು ಅಫ್ಘಾನಿಸ್ತಾನದ ತಾಲಿಬಾನ್ ನಾಯಕ ಮುಲ್ಲಾ ಅಖ್ತರ್ ಮನ್ಸೂರ್‌ನನ್ನು ಹತ್ಯೆಗೈಯಲು ಬಲೂಚಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸಿತ್ತು’’ ಎಂದು ಸಯೀದ್ ಹೇಳಿದ್ದಾನೆ.
‘‘ವಾಸ್ತವಿಕವಾಗಿ, ಅಮೆರಿಕವು ಪಾಕಿಸ್ತಾನದ ಅಣುಶಕ್ತಿ ಕಾರ್ಯಕ್ರಮದ ಮೇಲೆ ಗುರಿಯಿಟ್ಟಿದ್ದು, ಇಸ್ರೇಲ್ ಹಾಗೂ ಭಾರತದ ನೆರವಿನೊಂದಿಗೆ ಅದನ್ನು ಹಾಳುಗೆಡವಲು ಬಯಸಿದೆ’’ ಎಂದು ಸಯೀದ್ ತಿಳಿಸಿದ್ದಾನೆ.
ಪಾಕಿಸ್ತಾನದ ಚೌಬರ್ಜಿಯಲ್ಲಿರುವ ಜಮತುದ್ದುಲ್ ದಾವಾದ ಮುಖ್ಯ ಕಾರ್ಯಾಲಯದಲ್ಲಿ ಸಹಸಂಘಟನೆಯಾದ ಫಲಾಹೆ ಇನ್ಸಾನಿಯತ್ ಪ್ರತಿಷ್ಠಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮೇ 21ರಂದು ನಡೆದ ಡ್ರೋನ್ ದಾಳಿಯ ಬಗ್ಗೆ ಪಾಕಿಸ್ತಾನವು ಇಸ್ಲಾಮಾಬಾದ್‌ಗೆ ಭೇಟಿ ನೀಡಿರುವ ಅಮೆರಿಕದ ಉನ್ನತ ನಿಯೋಗದ ಮುಂದೆ ಶನಿವಾರ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಇದಾದ ಮರು ದಿನವೇ ಸಯೀದ್ ಈ ಹೇಳಿಕೆ ನೀಡಿದ್ದಾನೆ.
ಬಲೂಚಿಸ್ತಾನದಲ್ಲಿ ಡ್ರೋನ್ ದಾಳಿಯನ್ನು ನಡೆಸುವ ಮೂಲಕ ಅಮೆರಿಕವು ದ್ವಿಪಕ್ಷೀಯ ಬಾಂಧವ್ಯವನ್ನು ಹದಗೆಡಿಸಿದೆಯೆಂದು ಪಾಕ್, ನಿಯೋಗದ ಮುಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಅಫ್ಘಾನ್ ಹಾಗೂ ಪಾಕ್ ವಿಭಾಗದ ಹಿರಿಯ ನಿರ್ದೇಶಕ ಪೀಟರ್ ಲಾವೊಯ್ ಹಾಗೂ ಅಫ್ಘಾನ್ ಹಾಗೂ ಪಾಕ್‌ಗಾಗಿನ ಅಮೆರಿಕದ ಹಿರಿಯ ಪ್ರತಿನಿಧಿ ರಿಚರ್ಡ್ ಒಲ್ಸನ್ ನಿಯೋಗದಲ್ಲಿದ್ದರು