ಮಿತದರದ ಕೃತಕ ಹೃದಯ ಸೃಷ್ಟಿಗೆ ಸೈಬಿರಿಯಾ ವೈದ್ಯರ ಯತ್ನ
Update: 2016-06-12 21:51 IST
ನೆವಸ್‌ಬಿರಿಕ್ಸ್,ಜೂ.12: ಯುರೋಪ್ ಹಾಗೂ ರಶ್ಯಾದಲ್ಲಿ ಹೃದಯದ ಕಸಿ ಶಸ್ತ್ರಚಿಕಿತ್ಸೆ ಭಾರೀ ದುಬಾರಿ. ಬರೋಬ್ಬರಿ 1 ಕೋಟಿ ರೂ.ವರೆಗೂ ಖರ್ಚು ತಗಲುತ್ತದೆ. ಈ ಹಿನ್ನೆಲೆಯಲ್ಲಿ, ಹೆಚ್ಚೇನೂ ದುಬಾರಿಯಲ್ಲದ ಕೃತಕ ಹೃದಯವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಸೈಬೀರಿಯದ ವೈದ್ಯರು ನಿರತರಾಗಿದ್ದಾರೆ. ಯುರೋಪ್ ದೇಶಗಳಲ್ಲಿ ಲಭ್ಯವಿರುವ ಕೃತಕ ಹೃದಯಕ್ಕಿಂತ ಐದು ಪಟ್ಟು ಕಡಿಮೆ ಬೆಲೆಯ ಕೃತಕ ಹೃದಯವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಅವರು ಪ್ರಗತಿ ಸಾಧಿಸಿದ್ದಾರೆ.
ಒಂದು ವೇಳೆ ಅವರ ಪ್ರಯತ್ನ ಯಶಸ್ವಿಯಾದಲ್ಲಿ, ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆಯೆನ್ನಲಾಗಿದೆ. ನೆವಾಸ್‌ಬಿರಿಕ್ಸ್ ಸ್ಟೇಟ್ ರಿಸಚ್ ಇನ್ಸ್‌ಟ್ಯೂಟ್ ಆಫ್ ಸರ್ಕ್ಯುಲೇಶನ್ ಪೆಥಾಲಜಿಯ, ವೈದ್ಯರ ತಂಡವೊಂದು ಈ ಕೃತಕ ಹೃದಯದ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಮೊದಲು ಈ ಕೃತಕ ಹೃದಯವನ್ನು ಪ್ರಾಣಿಗಳ ಮೇಲೆ ಪರೀಕ್ಷಿಸಿದ ಬಳಿಕ ಅದನ್ನು ಮಾನವರ ಮೇಲೆ ಪ್ರಯೋಗಿಸುವುದು ಈ ವೈದ್ಯರ ಯೋಜನೆಯಾಗಿದೆ.