ಒರ್ಲಾಂಡೊ: ನೈಟ್ ಕ್ಲಬ್‌ನಲ್ಲಿ ಶೂಟೌಟ್: ಕನಿಷ್ಠ 50 ಬಲಿ
ಒರ್ಲಾಂಡೊ,ಜೂ.12: ಅಮೆರಿಕದ ಒರ್ಲಾಂಡೊ ನಗರದ ಸಲಿಂಗಿಗಳ ನೈಟ್‌ಕ್ಲಬ್ ಒಂದರಲ್ಲಿ ರವಿವಾರ ರಕ್ತದೋಕುಳಿ ಹರಿದಿದೆ. ನಸುಕಿನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ 50 ಮಂದಿ ಬಲಿಯಾಗಿದ್ದಾರೆ ಹಾಗೂ ಇತರ 53 ಮಂದಿ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ. ಒರ್ಲಾಂಡೊ ನಗರದ ‘ಪಲ್ಸ್’ ನೈಟ್ ಕ್ಲಬ್‌ನಲ್ಲಿ ಮುಂಜಾನೆ 2:00 ಗಂಟೆಯ ವೇಳೆಗೆ ದುಷ್ಕರ್ಮಿಯು ಮನಬಂದಂತೆ ಗುಂಡುಹಾರಿಸಿದ್ದ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ನೈಟ್ ಕ್ಲಬ್‌ನ್ನು ಸುತ್ತುವರಿದಿದ್ದರು. ಹಂತಕನು ಅಸಾಲ್ಟ್ ರೈಫಲ್ ಹಾಗೂ ಹ್ಯಾಂಡ್‌ಗನ್ ಒಂದನ್ನು ಹೊಂದಿದ್ದನೆಂದು ಅವರು ಹೇಳಿದ್ದಾರೆ.
ಶೂಟೌಟ್ ನಡೆದ ಕೆಲವೇ ನಿಮಿಷಗಳ ಬಳಿಕ ಹಂತಕನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧೂಕುದಾರಿಯು 40ಕ್ಕೂ ಅಧಿಕ ಗುಂಡುಗಳನ್ನು ಹಾರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ ಎರಡು ಗಂಟೆಯ ವೇಳೆಗೆ ನೈಟ್‌ಕ್ಲಬ್ ಮುಚ್ಚುವ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಗುಂಡಿನ ಹಾರಾಟ ಆರಂಭಗೊಂಡಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ,
ಶೂಟೌಟ್ ನಡೆದ ಬೆನ್ನಲ್ಲೇ ನೈಟ್‌ಕ್ಲಬ್‌ನ ಹಿಂದೆ ಭದ್ರತಾ ಕಾವಲು ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಧಾವಿಸಿ ಬಂದು ಶಂಕಿತ ಹಂತಕನೊಂದಿಗೆ ಗುಂಡಿನ ಚಕಮಕಿ ನಡೆಸಿದರು. ಕೆಲವೇ ನಿಮಿಷಗಳಲ್ಲಿ ಧಾವಿಸಿ ಬಂದ ಪೊಲೀಸ್ ಅಧಿಕಾರಿಗಳ ತಂಡವೊಂದು ನೈಟ್‌ಕ್ಲಬ್‌ನೊಳಗೆ ನುಗ್ಗಿ, ಬಂದೂಕುಧಾರಿಯನ್ನು ಹತ್ಯೆಗೈಯಿತೆಂದು.
ಇದೊಂದು ‘ಆಂತರಿಕ ಭಯೋತ್ಪಾದನಾ ಕೃತ್ಯ’ ಅಮೆರಿಕದ ಭದ್ರತಾ ಅಧಿಕಾರಿಗಳು ಬಣ್ಣಿಸಿದ್ದಾರೆ. ಹಂತಕನನ್ನು ಅಫ್ಘಾನ್ ಮೂಲದ ಉಮರ್ ಮಾಂತಿನ್ ಎಂದು ಗುರುತಿಸಲಾಗಿದೆಯೆಂದು ಅವರು ಹೇಳಿದ್ದಾರೆ.ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಘಟನೆಯ ಬಗ್ಗೆ ತನಿಖೆಗೆೆ ಆದೇಶಿಸಿದ್ದಾರೆ.
ಶೂಟೌಟ್ ನಡೆದ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆಯೆಂದು ಒರ್ಲಾಂಡೊ ಮೇಯರ್ ಬಡ್ಡಿ ಡೈಯರ್ ತಿಳಿಸಿದ್ದಾರೆ.
ಹಂತಕನ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಕನಿಷ್ಠ 30 ಮಂದಿಯ ಪ್ರಾಣವುಳಿದಿದೆಯೆಂದು ಒರ್ಲಾಂಡೊದ ಪೊಲೀಸ್ ವರಿಷ್ಠ ಜಾನ್ ಮಿನಾ ತಿಳಿಸಿದ್ದಾರೆ.
ಒರ್ಲಾಂಡೊದ ನೈಟ್‌ಕ್ಲಬ್‌ನಲ್ಲಿ ನಡೆದ ಶೂಟೌಟ್ ಘಟನೆಯು ಅಮೆರಿಕದಲ್ಲಿ ಕಳೆದ ಮೂರು ದಿನಗಳಲ್ಲಿ ಎರಡನೇ ಭೀಕರ ಗುಂಡಿನ ದಾಳಿಯಾಗಿದೆ. ಶುಕ್ರವಾರ ರಾತ್ರಿ ಫ್ಲೋರಿಡಾ ನಗರದಲ್ಲಿ ನಡೆದ ಪಾಪ್ ಸಂಗೀತಗೋಷ್ಠಿಯೊಂದರಲ್ಲಿ ಖ್ಯಾತ ಗಾಯಕಿ ಕ್ರಿಸ್ಟಿನಾ ಗ್ರಿಮಿಯವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದನು. ಕಾರ್ಯಕ್ರಮದ ಬಳಿಕ ಕ್ರಿಸ್ಟಿನಾ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದ ಸಂದರ್ಭದಲ್ಲಿ ಆತ ಗಾಯಕಿಗೆ ಗುಂಡಿಕ್ಕಿದ್ದ. ಆ ಬಳಿಕ ಹಂತಕನು ತನಗೆ ತಾನೇ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದ.