×
Ad

ತಾಲಿಬಾನ್ ವರಿಷ್ಠನಿಗೆ ಝವಾಹಿರಿ ಬೆಂಬಲ

Update: 2016-06-12 22:55 IST

 ದುಬೈ,ಜೂ.11: ಅಫ್ಘಾನಿಸ್ತಾನದ ನೂತನ ತಾಲಿಬಾನ್ ನಾಯಕ ಹಬೀಬತುಲ್ಲಾ ಅಖುಂಡ್‌ಝಾದಾಗೆ, ಅಲ್‌ಖಾಯಿದಾ ವರಿಷ್ಠ ಐಮನ್ ಅಲ್ ಝವಾಹಿರಿ ಬೆಂಬಲ ಘೋಷಿಸಿದ್ದಾನೆ.
ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿರುವ 14 ನಿಮಿಷಗಳ ವೀಡಿಯೊ ಹಾಗೂ ಆಡಿಯೊ ಸಂದೇಶವೊಂದರಲ್ಲಿ ಝವಾಹಿರಿಯು, ನೂತನ ತಾಲಿಬಾನ್ ನಾಯಕನಿಗೆ ಬೆಂಬಲವನ್ನು ಪ್ರಕಟಿಸಿರುವುದಾಗಿ ಅಮೆರಿಕದ ಆನ್‌ಲೈನ್ ಬೇಹುಗಾರಿಕಾ ಸಂಸ್ಥೆ ಎಸ್‌ಐಟಿಇ ಶನಿವಾರ ತಿಳಿಸಿದೆ.
  ‘‘ಕಶ್ಗಾರ್‌ನಿಂದ ಅಲ್ ಅಂದಾಲುಸ್‌ವರೆಗೆ, ಕಾಕಸಸ್‌ನಿಂದ ಸೊಮಾಲಿಯ ಹಾಗೂ ಮಧ್ಯ ಆಫ್ರಿಕವರೆಗೆ, ಕಾಶ್ಮೀರದಿಂದ ಜೆರುಸಲೇಂ ತನಕ, ಫಿಲಿಪ್ಪೀನ್ಸ್‌ನಿಂದ ಕಾಬೂಲ್‌ವರೆಗೆ, ಬುಖಾರದಿಂದ ಸಮರ್‌ಖಂಡ್ ತನಕ ಆಕ್ರಮಣಕ್ಕೊಳಗಾದ ಹಾಗೂ ಕದಿಯಲಾದ ಮುಸ್ಲಿಮರ ಇಂಚಿಂಚೂ ಜಾಗವನ್ನೂ ವಿಮೋಚನೆಗೊಳಿಸುವ ಜಿಹಾದ್‌ಗಾಗಿ ನಾವು ನಿಮಗೆ ನಿಷ್ಠೆಯನ್ನು ಘೋಷಿಸುತ್ತೇವೆ’’ ಎಂದು ಝವಾಹಿರಿಯ ಹೇಳಿಕೆಯನ್ನು ಉಲ್ಲೇಖಿಸಿ ಸೈಟ್ ತಿಳಿಸಿದೆ. 2011ರಲ್ಲಿ ಪಾಕ್‌ನಲ್ಲಿ ಅಮೆರಿಕ ಪಡೆಗಳಿಂದ ಹತನಾದ ಅಲ್‌ಖಾಯಿದಾ ಸ್ಥಾಪಕ ಉಸಾಮಾ ಬಿನ್ ಲಾದೆನ್‌ನ ಭಾವಚಿತ್ರಗಳು ಕೂಡಾ ಈ ಸಂದೇಶದಲ್ಲಿ ಒಳಗೊಂಡಿದ್ದವು ಎಂದು ಅದು ಹೇಳಿದೆ.
ಕಳೆದ ತಿಂಗಳು ಬಲೂಚಿಸ್ತಾನದಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಅಫ್ಘಾನ್ ತಾಲಿಬಾನ್ ವರಿಷ್ಠ ಮುಲ್ಲಾ ಮನ್ಸೂಫ್ ಬಲಿಯಾದ ಬಳಿಕ ಈ ಉಗ್ರಗಾಮಿ ಸಂಘಟನೆಯ ವರಿಷ್ಠನಾಗಿ ಅಖುಂಡ್‌ಝಾದಾ ನೇಮಕಗೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News