ಉತ್ತರಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ: ಆರೆಸ್ಸೆಸ್‌ಗೆ ವಹಿಸಿದ ಬಿಜೆಪಿ
ಅಲಹಾಬಾದ್,ಜೂನ್ 13: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ತೀರ್ಮಾನಿಸುವ ಕುರಿತು ಬಿಜೆಪಿಯಲ್ಲಿ ಅನಿಶ್ಚಿತತೆ ಉಂಟಾಗಿದ್ದು ವರುಣ್ ಗಾಂಧಿ,ಸ್ಮತಿ ಇರಾನಿ, ಸ್ವಾಮಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿತ್ವಕ್ಕೆ ಬಿಜೆಪಿ ವರಿಷ್ಠರ ಮುಂದೆ ಇವರ ಅನುಯಾಯಿಗಳು ಶಿಫಾರಸು ಮಾಡುತ್ತಿದ್ದಾರೆ. ಅಲಹಾಬಾದ್‌ನಾದ್ಯಂತ ಈ ನಾಯಕರ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಆದ್ದರಿಂದ ಈ ಅನಿಶ್ಚಿತತೆಯನ್ನು ಶಮನಿಸಲಿಕ್ಕಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತೀರ್ಮಾನಿಸುವ ಹೊಣೆಯನ್ನು ಆರೆಸ್ಸೆಸ್‌ಗೆ ವಹಿಸಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಬಿಜೆಪಿಯ ಕಾರ್ಯಕಾರಿಣಿ ನಿರ್ಧರಿಸುವುದಿಲ್ಲ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್‌ನಾಥ್ ಸಿಂಗ್ ಮುಖ್ಯಮಂತ್ರಿಯಾಗುವ ಬಗ್ಗೆ ನಿರಾಸಕ್ತಿ ಬಹಿರಂಗವಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯನಾಯಕರು ಆರೆಸ್ಸೆಸ್ ಅಂಗಳಕ್ಕೆ ಚೆಂಡನ್ನು ದಾಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿಯ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ರಿಗೆ ಸವಾಲಾಗಬಲ್ಲ ನಾಯಕರು ಬಿಜೆಪಿಯಲ್ಲಿಲ್ಲ. ಆದ್ದರಿಂದ ರಾಜ್‌ನಾಥ್‌ಸಿಂಗ್‌ರನ್ನು ಉತ್ತರ ಪರದೇಶಕ್ಕೆ ಕರೆತರಲು ಮೋದಿ ಮತ್ತು ಶಾ ಆಲೋಚಿಸಿದ್ದರು. ಆದರೆ ರಾಜ್‌ನಾಥ್‌ಸಿಂಗ್‌ರ ಹಿಂದೆ ಸರಿದಿದ್ದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರವನ್ನು ಆರೆಸ್ಸೆಸ್‌ಗೆ ವಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.