ನಂಬರ್ 1 ಸಿಗಲು ಈತ 18 ಮಿಲಿಯನ್ ದಿರಹಂ ಖರ್ಚು ಮಾಡಿದ !
ದುಬೈ: ಅರಿಫ್ ಅಹಮದ್ ಅಲ್ ಝರೌನಿ ಯಾವತ್ತೂ ನಾಯಕನಾಗಬೇಕೆಂದು ಬಯಸಿದವರು. ಆದರೆ ನಾಯಕತ್ವದೊಂದಿಗೆ ಜವಾಬ್ದಾರಿಯೂ ಬರುವುದೆಂಬ ಅರಿವು ಅವರಿಗಿತ್ತು. ಇತ್ತೀಚೆಗೆ ಆತ ಶಾರ್ಜಾದಲ್ಲಿ ನಡೆದ ಎಮಿರೇಟ್ಸ್ ಹರಾಜಿನಲ್ಲಿ ನಂ. 1 ಕಾರು ನಂಬರ್ ಪ್ಲೇಟ್ ಖರೀದಿಸಿದಾಗ ಆತ ಅದಕ್ಕಾಗಿ ಬರೋಬ್ಬರಿ 18 ಮಿಲಿಯನ್ ದಿರಹಂ ಖರ್ಚು ಮಾಡಿದ್ದಾರೆಂದು ತಿಳಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.
``ಈ ನಂಬರ್ ಪ್ಲೇಟನ್ನು ಖರೀದಿಸಲು ನಾನು ಖರ್ಚು ಮಾಡಿದ ಹಣ ಚ್ಯಾರಿಟಿಗೆ ಹೋಗುತ್ತದೆ. ಮೇಲಾಗಿ ಇದರಿಂದ ದುಬೈ ಹಾಗೂ ಸಂಯುಕ್ತ ಅರಬ್ ಎಮಿರೇಟ್ಸ್ ಹೆಸರು ಕೂಡ ಖ್ಯಾತಿ ಪಡೆಯುತ್ತದೆ. ಇದರಿಂದ ನನಗೆ ಸಂತಸವಾಗುತ್ತದೆ,'' ಎಂದು ಉದ್ಯಮಿಯಾಗಿರುವ ಝರೌನಿ ತಮ್ಮ ದುಬೈ ಕಚೇರಿಯಲ್ಲಿ ಕುಳಿತುಕೊಂಡು ಹೇಳುತ್ತಾರೆ.
ಈ ನಂಬರ್ ಪ್ಲೇಟ್ ಹರಾಜನ್ನು ಶಾರ್ಜಾ ಪೊಲೀಸರು ಎಮಿರೇಟ್ಸ್ ಹರಾಜು ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದರು. ಹರಾಜಿನಲ್ಲಿ ನಂ.1 ನಂಬರ್ ಪ್ಲೇಟಿಗೆ ಮೊದಲು ಒಂದು ಮಿಲಿಯನ್ ದಿರಹಂ ಮೊತ್ತ ಸೂಚಿತವಾಗಿತ್ತು.
``ನನ್ನ ಪತ್ನಿ ಈ ಹರಾಜು ಬಗ್ಗೆ ಕೇಳಿದಾಗ ಮೊದಲು ಆಶ್ಚರ್ಯ ಪಟ್ಟರೂ ನಂತರ ಆಕೆ ಹಾಗೂ ನನ್ನ ಮಕ್ಕಳು ಸಂತಸ ಪಟ್ಟರು. ನನ್ನ ಕುಟುಂಬದ ಹೊರಗಿನವರೆಲ್ಲಾ ಈ ವಿಚಾರ ಕೇಳಿದಾಗ `ದೇವರು ನಿನ್ನನ್ನು ಆಶೀರ್ವದಿಸಲಿ,'' ಎಂದು ನನ್ನನ್ನು ಹರಸಿದರು. ಆದರೆ ``ಇಷ್ಟು ಹಣವನ್ನು ನಂಬರ್ ಪ್ಲೇಟ್ ಒಂದರ ಮೇಲೆ ಏಕೆ ಸುರಿದಿರಿ?'' ಎಂದು ಕೇಳಿದವರೂ ಇದ್ದಾರೆ, ಎಂದು ಝರೌನಿ ಹೇಳಿದರು.
ವಿಶ್ವದೆಲ್ಲೆಡೆಯಿಂದ ತನಗೆ ಕರೆಗಳು ಬರುತ್ತಿವೆಯೆಂದು ಹೇಳುವ ಅವರು ತಾವು ಅಗರ್ಭ ಶ್ರೀಮಂತರೇ ಎಂಬ ಪ್ರಶ್ನೆಗೆ ಉತ್ತರಿಸಲು ಸ್ವಲ್ಪ ಸಂಕೋಚ ಪಟ್ಟರು. ಹಲವಾರು ಐಷಾರಾಮಿ ಕಾರುಗಳು ಅವರ ಬಳಿಯಿದೆಯೇ ಎಂದು ಕೇಳಿದಾಗ ತಾನು ಕೇವಲ ಪೊರ್ಷೆ ಕಾರು ಓಡಿಸುವುದಾಗಿಯೂ ತನ್ನ ಬಳಿ ಏಳು ಕಾರುಗಳಿವೆಯೆಂದೂ ತಿಳಿಸಿದರು.
ಆದರೆ ತನ್ನ ಬಳಿಯಿರುವ ಇತರ ಕಾರುಗಳ ಮಾಡೆಲ್ ಬಗ್ಗೆ ತಿಳಿಸಲು ನಿರಾಕರಿಸಿದ ಅವರು ಪ್ರಸಕ್ತ ತಾನು ನಂ.1 ನಂಬರ್ ಪ್ಲೇಟ್ ಉಪಯೋಗಿಸುವುದಿಲ್ಲವೆಂದೂ ಭವಿಷ್ಯದಲ್ಲಿ ಅದನ್ನು ಉಪಯೋಗಿಸುವ ಇರಾದೆಯಿದೆಯೆಂದೂ ಹೇಳಿದರು.
``ನಾನು ಎಲ್ಲಾ ವಿಷಯದಲ್ಲೂ ಮುಂಚೂಣಿಯಲ್ಲಿರ ಬಯಸುತ್ತೇನೆ. ಅದು ಕಾರು ಖರೀದಿಸುವುದೇ ಆಗಿರಬಹುದು ಅಥವಾ ಪುಣ್ಯ ಕಾರ್ಯಗಳಿಗೆ ಸಹಾಯ ಮಾಡುವುದೇ ಆಗಿರಬಹುದು, ಆದರೆ ನಂಬರ್ ಒನ್ ಆಗುವುದು ಅಷ್ಟೊಂದೇನೂ ಸುಲಭವಲ್ಲ. ಅದಕ್ಕಾಗಿ ಬಹಳಷ್ಟು ಶ್ರಮ ಅಗತ್ಯ,''ಎನ್ನುತ್ತಾರವರು.