ಸಿಬಿಐ ತನಿಖೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್
Update: 2016-06-13 23:39 IST
ಲಕ್ನೋ,ಜೂ.13: 29 ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಇತ್ತೀಚಿನ ಮಥುರಾ ಘರ್ಷಣೆ ಕುರಿತಂತೆ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಕೋರಿ ಬಿಜೆಪಿ ನಾಯಕ ಐ.ಪಿ.ಸಿಂಗ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಸೋಮವಾರ ವಜಾಗೊಳಿಸಿದೆ.
ಉತ್ತರ ಪ್ರದೇಶ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬುಲ್‌ಬುಲ್ ಗೋಡಿಯಾಲ್ ಅವರು, ಅರ್ಜಿದಾರರು ರಾಜಕೀಯ ವ್ಯಕ್ತಿಯಾಗಿರುವುದರಿಂದ ಇದೊಂದು ರಾಜಕೀಯ ಪ್ರೇರಿತ ಅರ್ಜಿಯಾಗಿದೆ. ಘಟನೆಯ ತನಿಖೆಗಾಗಿ ನ್ಯಾಯಾಂಗ ಆಯೋಗವೊಂದನ್ನು ರಾಜ್ಯ ಸರಕಾರವು ಈಗಾಗಲೇ ರಚಿಸಿದೆ. ಹೀಗಾಗಿ ಸಿಂಗ್ ಅವರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಅವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಶ್ರೀನಾರಾಯಣ ಶುಕ್ಲಾ ಮತ್ತು ಸುನೀತ್ ಕುಮಾರ್ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿತು.