ತ್ರಿಕೋನ ಸರಣಿ: ಡೇವಿಡ್ ವಾರ್ನರ್ ಅಲಭ್ಯ
ಮೆಲ್ಬೋರ್ನ್, ಜೂ.13: ದಕ್ಷಿಣ ಆಫ್ರಿಕ ವಿರುದ್ಧ ಶನಿವಾರ ನಡೆದ ತ್ರಿಕೋನ ಏಕದಿನ ಪಂದ್ಯದ ಫೀಲ್ಡಿಂಗ್‌ನ ವೇಳೆ ಎಡಮಧ್ಯ ಬೆರಳಿನ ಮುರಿತಕ್ಕೆ ಒಳಗಾಗಿದ್ದ ಆಸ್ಟ್ರೇಲಿಯದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸರ್ಜರಿಗೆ ಒಳಪಡಲಿದ್ದು, ತ್ರಿಕೋನ ಸರಣಿಯಿಂದ ದೂರ ಉಳಿಯಲಿದ್ದಾರೆ.
ಸ್ಟೀವ್ ಸ್ಮಿತ್ ಬಳಗ ತ್ರಿಕೋನ ಸರಣಿಯ ಉಳಿದ ಪಂದ್ಯಗಳಲ್ಲಿ ವಾರ್ನರ್ ಸೇವೆಯಿಂದ ವಂಚಿತವಾಗಲಿದೆ. ಅವರು ಸಂಪೂರ್ಣ ಫಿಟ್‌ನೆಸ್ ಪಡೆದು ಜುಲೈಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡವನ್ನು ಸೇರಿಕೊಳ್ಳಲಿದ್ದಾರೆ.
ವಾರ್ನರ್ ತ್ರಿಕೋನ ಸರಣಿಯಲ್ಲಿ ಈ ತನಕ ಆಡಿರುವ ಮೂರು ಪಂದ್ಯಗಳಲ್ಲಿ ಔಟಾಗದೆ ಅರ್ಧಶತಕ ಹಾಗು ಶತಕವನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆಲ್ಲಲು ಕಾಣಿಕೆ ನೀಡಿದ್ದರು.
‘‘ವಾರ್ನರ್‌ಗೆ ಸರ್ಜರಿಯ ಅಗತ್ಯಬೀಳದಿದ್ದರೆ ಅವರ ಚೇತರಿಕೆಗೆ ಎರಡರಿಂದ ಆರು ವಾರಗಳ ಅಗತ್ಯವಿದೆ. ಎಕ್ಸ್‌ರೇಯಲ್ಲಿ ಅವರ ಬಲಗೈ ಬೆರಳು ಬಿರುಕು ಬಿಟ್ಟಿದ್ದು ಗೊತ್ತಾಗಿದೆ. ಅವರಿಗೆ ಸರ್ಜರಿಯ ಅಗತ್ಯವಿದೆಯೇ ಎಂದು ಸೂಕ್ಷ್ಮವಾಗಿ ಗಮನಿಸಲಿದ್ದೇವೆ’’ ಎಂದು ಆಸ್ಟ್ರೇಲಿಯದ ತಂಡದ ವೈದ್ಯ ಜೆಫ್ರಿ ವೆರ್ರಾಲ್ ಹೇಳಿದ್ದಾರೆ.