×
Ad

ಬ್ರೆಝಿಲ್‌ಗೆ ಆಘಾತ ನೀಡಿದ ಪೆರು ಕ್ವಾರ್ಟರ್ ಫೈನಲ್‌ಗೆ

Update: 2016-06-13 23:41 IST

ಕೊಪಾ ಅಮೆರಿಕ ಟೂರ್ನಿ

ಫಾಕ್ಸ್‌ಬೆರಿ, ಜೂ.13: ಕೊನೆಯ ನಿಮಿಷದಲ್ಲಿ ರಾವುಲ್ ರೂಡಿಯಝ್ ಬಾರಿಸಿದ ವಿವಾದಾತ್ಮಕ ಗೋಲು ನೆರವಿನಿಂದ ಬ್ರೆಝಿಲ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿದ ಪೆರು ತಂಡ ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ರವಿವಾರ ನಡೆದ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಪೆರು ತಂಡದ ಪರ 75ನೆ ನಿಮಿಷದಲ್ಲಿ ಆ್ಯಂಡಿ ಪೊಲೊ ನೆರವಿನಿಂದ ರಾವುಲ್ ರೂಡಿಯಝ್ ಗೋಲು ಬಾರಿಸಿದರು. ಆದರೆ, ರಾವುಲ್ ಗೋಲು ಬಾರಿಸುವ ವೇಳೆ ತನ್ನ ಕೈಯನ್ನು ಬಳಸಿದಂತೆ ಕಂಡು ಬಂತು. ಬ್ರೆಝಿಲ್ ಗೋಲ್‌ಕೀಪರ್ ಅಲಿಸನ್ ಸಹಿತ ಎಲ್ಲ ಆಟಗಾರರು ಇದಕ್ಕೆ ಆಕ್ಷೇಪ ಸಲ್ಲಿಸಿದರು. ತಕ್ಷಣವೇ ರೆಫರಿಗೆ ದೂರಿ ಸಲ್ಲಿಸಿದರು.

ದೀರ್ಘ ಸಮಯ ಚರ್ಚಿಸಿದ ರೆಫರಿ ನಾಲ್ಕನೆ ಅಧಿಕಾರಿಯ ಸಲಹೆಯ ಮೇರೆಗೆ ಗೋಲು ಸರಿಯಿದೆ ಎಂದು ತೀರ್ಪು ನೀಡಿದರು. ಪೆರು 1985ರ ಬಳಿಕ ಬ್ರೆಝಿಲ್ ವಿರುದ್ಧ ಮೊದಲ ಜಯ ಸಾಧಿಸಿದೆ.

ಪೆರು ತಂಡ ಈ ತನಕ ಬ್ರೆಝಿಲ್ ವಿರುದ್ಧ 10ರಲ್ಲಿ ಸೋಲು ಹಾಗೂ 6 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ‘ಬಿ’ ಗುಂಪಿನ ಮೂಲಕ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿರುವ ಪೆರು ತಂಡ ಶುಕ್ರವಾರ ಕೊಲಂಬಿಯ ತಂಡವನ್ನು ಎದುರಿಸಲಿದೆ.

ಬ್ರೆಝಿಲ್‌ಗೆ ಕ್ವಾರ್ಟರ್‌ಫೈನಲ್‌ಗೆ ತಲುಪಲು ಪೆರು ವಿರುದ್ಧ ಕನಿಷ್ಠ ಪಕ್ಷ ಡ್ರಾ ಸಾಧಿಸಬೇಕಾಗಿತ್ತು. ಆದರೆ, ರೆಫರಿಯ ವಿವಾದಾತ್ಮಕ ತೀರ್ಪಿನಿಂದಾಗಿ ಟೂರ್ನಿಯಿಂದಲೇ ಹೊರ ನಡೆದಿದೆ. ಬ್ರೆಝಿಲ್ 1993ರ ಬಳಿಕ ಇದೇ ಮೊದಲ ಬಾರಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗಿಂತ ಮೊದಲೇ ನಿರ್ಗಮಿಸಿದೆ.

ಬ್ರೆಝಿಲ್ ತಂಡ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿರುವ ಕಾರಣ ಕೋಚ್ ಡುಂಗ ಹುದ್ದೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಬ್ರೆಝಿಲ್ ಒಂದು ಹಂತದಲ್ಲಿ ಮೇಲುಗೈ ಸಾಧಿಸಿತ್ತು. ಪೆರು ತಂಡದ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿತ್ತು. ಪ್ರತಿ ಪಂದ್ಯದಲ್ಲೂ ಅಲ್ಪ ಪ್ರಮಾಣದ ತಪ್ಪುಗಳು ನಡೆಯುತ್ತವೆ ಎಂದು ವಿವಾದಾತ್ಮಕ ಗೋಲು ಕುರಿತು ಪೆರು ತಂಡದ ಕೋಚ್ ರಿಕಾರ್ಡೊ ಗರೆಕಾ ಪ್ರತಿಕ್ರಿಯಿಸಿದರು.

ಇದೊಂದು ತುಂಬಾ ವಿವಾದಾತ್ಮಕ ಪಂದ್ಯವಾಗಿತ್ತು. ಅಂತಿಮವಾಗಿ ಕೆಲವೊಂದು ವಿಷಯ ಕೋಚ್ ಹಾಗೂ ಆಟಗಾರರನ್ನು ಅವಲಂಭಿಸಿರುವುದಿಲ್ಲ ಎಂದು ಬ್ರೆಝಿಲ್‌ಕೋಚ್ ಡುಂಗಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News