×
Ad

ಯುರೋ ಕಪ್: ಉಕ್ರೇನ್ ವಿರುದ್ಧ ಜರ್ಮನಿ ಜಾದೂ

Update: 2016-06-13 23:43 IST

ಪ್ಯಾರಿಸ್, ಜೂ.13: ಇಲ್ಲಿ ನಡೆಯುತ್ತಿರುವ ಯುರೋ ಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಉಕ್ರೇನ್ ವಿರುದ್ಧ ಜಾದೂ ಮಾಡಿದರೆ, ಇನ್ನೆರಡು ಪಂದ್ಯಗಳಲ್ಲಿ ಪೊಲೆಂಡ್ ಹಾಗೂ ಕ್ರೊಯೇಷಿಯ ತಂಡಗಳು ಜಯ ಸಾಧಿಸಿವೆ.

ರವಿವಾರ ಇಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಜರ್ಮನಿ ತಂಡ ಉಕ್ರೇನ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ನಾಲ್ಕನೆ ಬಾರಿ ಯುರೋ ಚಾಂಪಿಯನ್‌ಶಿಪ್ ಗೆಲ್ಲುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

19ನೆ ನಿಮಿಷದಲ್ಲಿ ಗೋಲು ಬಾರಿಸಿದ ಶಕೊದ್ರನ್ ಮುಸ್ತಾಫಿ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದು ಮುಸ್ತಾಫಿ ಬಾರಿಸಿದ ಮೊದಲ ಅಂತಾರಾಷ್ಟ್ರೀಯ ಗೋಲಾಗಿತ್ತು.

ಮಾರ್ಚ್ ತಿಂಗಳಲ್ಲಿ ಗಂಭೀರವಾದ ಮಂಡಿನೋವಿಗೆ ತುತ್ತಾಗಿದ್ದ ಜರ್ಮನಿಯ ಸ್ಟಾರ್ ಆಟಗಾರ ಬೆಸ್ಟಿಯನ್ ಸ್ವೆನ್‌ಸ್ಟೆಗರ್ ಕೊನೆಯ ಕ್ಷಣದಲ್ಲಿ ಕಣಕ್ಕಿಳಿದರು. ಇಂಜುರಿ ಟೈಮ್‌ನಲ್ಲಿ(90+2) ಗೋಲು ಬಾರಿಸಿದ ಅವರು ತಂಡ 2-0 ಗೋಲುಗಳ ಅಂತರದಿಂದ ಜಯ ಸಾಧಿಸಲು ನೆರವಾದರು.

 ಗೋಲು ಕೀಪರ್ ಮ್ಯಾನ್ಯುಯೆಲ್ ನೇಯರ್ ಎರಡು ಬಾರಿ ಎದುರಾಳಿ ತಂಡಕ್ಕೆ ಗೋಲನ್ನು ನಿರಾಕರಿಸುವ ಮೂಲಕ ಜರ್ಮನಿ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಲು ನೆರವಾದರು.

ಜೊಕಿಮ್ ಲಾ ಕೋಚಿಂಗ್‌ನಲ್ಲಿ ಪಳಗಿರುವ ಜರ್ಮನಿ ಇದೀಗ ಸತತ 5ನೆ ಬಾರಿ ಗೋಲು ಬಿಟ್ಟಕೊಡದೇ ಆರಂಭಿಕ ಪಂದ್ಯವನ್ನು ಜಯಿಸಿದ ಸಾಧನೆ ಮಾಡಿದೆ. ಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಜರ್ಮನಿ ಗುರುವಾರ ನಡೆಯಲಿರುವ ತನ್ನ 2ನೆ ಗ್ರೂಪ್ ಪಂದ್ಯದಲ್ಲಿ ಪೊಲೆಂಡ್ ತಂಡವನ್ನು ಎದುರಿಸದೆ. ಪೊಲೆಂಡ್ ತಂಡ ಯುರೋ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜರ್ಮನಿಯನ್ನು ಮಣಿಸಿತ್ತು.

ಪೊಲೆಂಡ್‌ಗೆ ಜಯ: ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪೊಲೆಂಡ್ ತಂಡ ನಾರ್ಥರ್ನ್ ಐರ್ಲೆಂಡ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.

ನಾರ್ಥರ್ನ್ ಐರ್ಲೆಂಡ್ 1986ರ ಬಳಿಕ ಪ್ರಮುಖ ಟೂರ್ನಿಯಲ್ಲಿ ಭಾಗವಹಿಸಿತು. ಐರ್ಲೆಂಡ್ ತಂಡದ ಮೊದಲಾರ್ಧದ ತನಕ ಎದುರಾಳಿ ಪೊಲೆಂಡ್‌ಗೆ ಗೋಲು ನೀಡಲಿಲ್ಲ.

ಆದರೆ, 51ನೆ ನಿಮಿಷದಲ್ಲಿ ಆರ್ಕ್‌ಡಿಯಸ್ ಮಿಲಿಕ್ ಬಾರಿಸಿದ ಗೋಲು ಸಹಾಯದಿಂದ ಪೊಲೆಂಡ್ 1-0 ಅಂತರದಿಂದ ರೋಚಕ ಜಯ ಸಾಧಿಸಿತು. ಪೊಲೆಂಡ್ ಯುರೋ-2016ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿದ್ದ ಎಲ್ಲ 12 ಪಂದ್ಯಗಳನ್ನು ಜಯಿಸಿತ್ತು.

ಪೊಲೆಂಡ್ ಮುಂದಿನ ಸುತ್ತಿನಲ್ಲಿ ಉಕ್ರೇನ್ ತಂಡದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ. ಚಾಂಪಿಯನ್ ಜರ್ಮನಿ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಡಿ ಗುಂಪಿನ ಪಂದ್ಯದಲ್ಲಿ ಕ್ರೊಯೇಷಿಯ ತಂಡ ಟರ್ಕಿ ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿತು.

 ರಿಯಲ್ ಮ್ಯಾಡ್ರಿಡ್ ಕ್ಲಬ್ ಪ್ರತಿನಿಧಿಸುತ್ತಿರುವ ಲುಕಾ ಮೊಡ್ರಿಝ್ 41ನೆ ನಿಮಿಷದಲ್ಲಿ ಕ್ರೊಯೇಷಿಯ ತಂಡ ಗೋಲು ಖಾತೆ ತೆರೆಯಲು ನೆರವಾದರು.

*ಶಕೊದ್ರನ್ ಮುಸ್ತಾಫಿ ತಾನಾಡಿದ 11ನೆ ಪಂದ್ಯದಲ್ಲಿ ಜರ್ಮನಿ ಪರ ಚೊಚ್ಚಲ ಗೋಲು ಬಾರಿಸಿದರು.

*ಜೊಕಿಮ್ ಲಾ ಜರ್ಮನಿಯ ಕೋಚ್ ಆಗಿ 88ನೆ ಜಯ ಸಾಧಿಸಿದರು. ಸೆಪ್ ಹೆರ್ಬಗೆರ್ ಕೋಚ್ ಆಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು(94) ಜಯಿಸಿದ್ದರು.

*ಜರ್ಮನಿ(ಪಂದ್ಯ 12-ಜಯ 7-ಡ್ರಾ 5) ಯುರೋ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಆರಂಭಿಕ ಪಂದ್ಯವನ್ನು ಈ ತನಕ ಸೋತಿಲ್ಲ. ಇತರ ಎಲ್ಲ ದೇಶಗಳಿಗಿಂತ ಹೆಚ್ಚು ಅರಂಭಿಕ ಪಂದ್ಯಗಳನ್ನು ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News