ಪಿಸ್ಟೋರಿಯಸ್ ಮಾನಸಿಕ ಸ್ಥಿತಿ ಹದಗೆಟ್ಟಿದೆ: ನ್ಯಾಯಾಲಯಕ್ಕೆ ಮನೋವೈದ್ಯರಿಂದ ಮನವರಿಕೆ
ಪ್ರಿಟೋರಿಯ, ಜೂ.13: ಕೊಲೆ ಆರೋಪಿ ಆಸ್ಕರ್ ಪಿಸ್ಟೋರಿಯಸ್ ಮಾನಸಿಕವಾಗಿ ಬಳಲಿದ್ದು, ಅವರನ್ನು ಜೈಲಿನ ಬದಲಿಗೆ ಆಸ್ಪತ್ರೆಗೆ ದಾಖಲಿಸಬೇಕಾದ ಎಂದು ಮನೋವೈದ್ಯರು ದಕ್ಷಿಣ ಆಫ್ರಿಕದ ನ್ಯಾಯಾಲಯಕ್ಕೆ ಸೋಮವಾರ ತಿಳಿಸಿದ್ದಾರೆ.
ಪ್ಯಾರಾಲಿಂಪಿಕ್ ಅಥ್ಲೀಟ್ ಪಿಸ್ಟೋರಿಯಸ್ ವಿರುದ್ಧ ಮೂರು ವರ್ಷಗಳ ಹಿಂದೆ ಗೆಳತಿ ರೀವಾ ಸ್ಟೀನ್‌ಕ್ಯಾಂಪ್‌ರನ್ನು ಕೊಲೆಗೈದ ಆರೋಪ ವಿದ್ದು, ಅವರ ವಿರುದ್ಧ ಅಂತಿಮ ವಿಚಾರಣೆ ಸೋಮವಾರ ನ್ಯಾಯಾಲಯದಲ್ಲಿ ಆರಂಭವಾಗಿದೆ. ವಿಚಾರಣೆಯ ಬಳಿಕ ಪಿಸ್ಟೋರಿಯಸ್‌ಗೆ ಶಿಕ್ಷೆಯ ಪ್ರಮಾಣ ಘೋಷಿಸುವ ಸಾಧ್ಯತೆಯಿದೆ.
ಪ್ರಿಟೋರಿಯದ ಹೈಕೋರ್ಟ್‌ನಲ್ಲಿ ಸೋಮವಾರ ಆರಂಭವಾದ ಶಿಕ್ಷೆ ವಿಚಾರಣೆಯ ಮೊದಲ ದಿನ ಕುಟುಂಬ ಸದಸ್ಯರೊಂದಿಗೆ ಹಾಜರಾದ ಬ್ಲೇಡ್ ರನ್ನರ್ ಪಿಸ್ಟೋರಿಯಸ್ ದಣಿದವರಂತೆ ಕಂಡು ಬಂದರು. ಕೆಲವೊಮ್ಮೆ ಕೈ ಮೇಲೆ ತಲೆ ಇಟ್ಟುಕೊಂಡ ದೃಶ್ಯ ಕಂಡು ಬಂತು.
ಪಿಸ್ಟೋರಿಯಸ್ ಗಂಭೀರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಅವರ ಸ್ಥಿತಿ ಬಿಗಡಾಯಿಸಿದೆ. ಈಗಿನ ಅವರ ಪರಿಸ್ಥಿತಿಯಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಿದರೆ ಅವರ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಮಾನಸಿಕ ತಜ್ಞರಾದ ಜೋನಾಥನ್ ಸ್ಕೋಲ್ಟ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇತ್ತೀಚೆಗೆ ಪಿಸ್ಟೋರಿಯಸ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅರಿವಾಗಿದ್ದು, ಅವರು ಇದೀಗ ಸ್ಥಿತಿ ಗಂಭೀರವಾಗಿದೆ. ಅವರ ಮಾನಸಿಕವಾಗಿ ಕುಗ್ಗಿಹೋಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎಂದು ಜೋನಾಥನ್ ತಿಳಿಸಿದರು.
ಪಿಸ್ಟೋರಿಯಸ್ ಕೊಲೆ ಆರೋಪದಲ್ಲಿ ಕನಿಷ್ಠ 15 ವರ್ಷ ಶಿಕ್ಷೆ ಎದುರಿಸುವ ಸಾಧ್ಯತೆಯಿದೆ. ಈಗಾಗಲೇ ಜೈಲು ಶಿಕ್ಷೆ ಅನುಭವಿಸಿರುವ ಅವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ.