×
Ad

ವೀಡಿಯೊ ಅಥವಾ ಮಾಂಸವನ್ನು ಬದಲಿಸುವುದರಿಂದ ದೇಶ ಬದಲಾಗದು:ಪ್ರಧಾನಿ ಮೋದಿಗೆ ಕನ್ಹಯ್ಯ ಸಲಹೆ

Update: 2016-06-14 11:40 IST

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ರಾಷ್ಟ್ರದ ವಿಶ್ವವಿದ್ಯಾನಿಲಯಗಳಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣವು ಸೃಷ್ಟಿಯಾಗಿದೆ ಮತ್ತು ಮಾಂಸ ಅಥವಾ ವೀಡಿಯೊಗಳನ್ನು ಬದಲಿಸುವುದರಿಂದ ದೇಶದಲ್ಲಿ ವಾಸ್ತವದಲ್ಲಿ ಬದಲಾವಣೆಯಾಗದು ಎಂದೂ ಅವರು ಹೇಳಿದ್ದಾರೆ.
 
 ಪ್ರಧಾನಿ ಮೋದಿ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಕನ್ಹಯ್ಯ ದಾದ್ರಿ ಕೊಲೆ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದಾರೆ. ಕುಟುಂಬವೊಂದು ಮನೆಯಲ್ಲಿ ದನದ ಮಾಂಸ ಇಟ್ಟಿದ್ದಾರೆ ಮತ್ತು ತಿಂದಿದ್ದಾರೆ ಎನ್ನುವ ಸಂಶಯದಲ್ಲಿ ಮನೆಯ ವ್ಯಕ್ತಿಯನ್ನೇ ಕೊಲೆ ಮಾಡಲಾಗಿತ್ತು. ಅಲ್ಲದೆ ಜೆಎನ್‌ಯುನಲ್ಲಿ ಫೆಬ್ರವರಿ 9ರಂದು ನಡೆದ ವಿವಾದಾತ್ಮಕ ಕಾರ್ಯಕ್ರಮದ ನಕಲಿ ವೀಡಿಯೋಗಳು ಪ್ರಸಾರವಾದ ಬಗ್ಗೆಯೂ ಅವರು ಪತ್ರದಲ್ಲಿ ಬರೆದಿದ್ದಾರೆ. ಮೋದಿಯವರೇ, ಮಾಂಸ ಅಥವಾ ವೀಡಿಯೋವನ್ನು ಬದಲಿಸುವುದರಿಂದ ದೇಶ ಬದಲಾಗದು. ದೇಶದ ಜನರ ಜೀವನ ಸುಧಾರಿಸಿದಾಗಲೇ ದೇಶ ಬದಲಾಗುತ್ತದೆ. ನಿಮ್ಮ ಅಧಿಕಾರಾವಧಿಯಲ್ಲಿ ಪರಿಸ್ಥಿತಿ ಅಧೋಗತಿಗಿಳಿದಿದೆ. ಯುವಕರು ಮತ್ತು ವಿದ್ಯಾರ್ಥಿಗಳು ನಿಮ್ಮನ್ನು ಬಹಳ ನಿರೀಕ್ಷೆಗಳಿಂದ ಆರಿಸಿದ್ದರು. ಪ್ರತೀ ವಿಶ್ವವಿದ್ಯಾಲಯದಲ್ಲಿಯೂ ತುರ್ತು ಪರಿಸ್ಥಿತಿ ನಿರ್ಮಾಣವಾದಂತಿದೆ. ದೇಶದ ಉದ್ದಗಲಕ್ಕೂ ತಿರುಗಾಡಿ ಅಚ್ಛೇದಿನ್ ಎನ್ನುವ ಘೋಷಣೆ ಕೂಗಿದಾಗ ನೀವು ಭರವಸೆ ನೀಡಿರುವ ಪರಿಸ್ಥಿತಿ ಇದೇ ಏನು? ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಫೆಬ್ರವರಿಯಲ್ಲಿ ಜೆಎನ್‌ಯುನಲ್ಲಿ ನಡೆದ ಅಫ್ಝಲ್ ಗುರು ಸಂಬಂಧಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿರುವುದಕ್ಕೆ ಸಂಬಂಧಿಸಿ ದೇಶದ್ರೋಹದ ಆರೋಪದಲ್ಲಿ ಕನ್ಹಯ್ಯ ಜಾಮೀನು ಪಡೆದು ಹೊರಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನೀವು ಅಭಿವೃದ್ಧಿ ಮಾಡಿದ್ದಲ್ಲಿ ಅದರ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ಹಾಕುವ ಅಗತ್ಯವಿರಲಿಲ್ಲ. ನಾನು ಇಲ್ಲಿ ವಿದ್ಯಾರ್ಥಿಯಾಗಿ ನಿಮ್ಮನ್ನು ಪ್ರಶ್ನಿಸುತ್ತೇನೆ. ನೀವು ರೂ. 200 ಕೋಟಿಯನ್ನು ಜಾಹೀರಾತುಗಳಿಗೆ ಖರ್ಚು ಮಾಡಿದ್ದೀರಿ. ಆದರೆ ಸಂಶೋಧನಾ ವಿದ್ಯಾರ್ಥಿಗಳಿಗೆ ನಾನ್-ಎನ್‌ಇಟಿ ಸ್ಕಾಲರ್ಶಿಪ್ ಕೊಡಲು ನಿಮ್ಮ ಬಳಿ ರೂ. 99 ಕೋಟಿ ಇಲ್ಲ. ಹೊಸ ಉದ್ಯೋಗಗಳು ಸೃಷ್ಟಿಯಾಗಿಲ್ಲ. ರೈತರು ಹತಾಶೆಯಿಂದ ಮತ್ತು ಸಾಲಗಾರರ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯೆ ಸಿಗುತ್ತಿಲ್ಲ. ವಿವಿಧ ವಿಶ್ವವಿದ್ಯಾಲಯಕ್ಕೆ ಭಡ್ತಿ ಹೊಂದಿದರೂ ಜಾತಿ ಆಧಾರಿತ ಅವಹೇಳನೆ ಮತ್ತು ತಾರತಮ್ಯ ಎದುರಿಸುತ್ತಿದ್ದಾರೆ. ಕೆಲವೊಂದು ಅಚ್ಚರಿಯ ಪರಿಣಾಮಗಳಿಂದ ಅವರು ಅವೆಲ್ಲವನ್ನೂ ಎದುರಿಸಲು ಶಕ್ತರಾದರೂ ಅವರ ಉನ್ನತ ವ್ಯಾಸಂಗಕ್ಕೆ ಅಡ್ಡಿ ಮಾಡಲು ಫೆಲೋಶಿಪ್ ಗಳನ್ನು ತಡೆಹಿಡಿಯಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News