×
Ad

ಸನಾತನ ಸಂಸ್ಥೆಯಿಂದ ದಾಭೋಲ್ಕರ್ ಹತ್ಯೆ, ಗೋವಾ ಸ್ಫೋಟ: ಸಿಬಿಐ

Update: 2016-06-14 17:03 IST

ಮುಂಬೈ, ಜೂ.14: ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದೆ. 2013ರಲ್ಲಿ ಪುಣೆಯಲ್ಲಿ ಅವರನ್ನು ಗುಂಡಿಕ್ಕಿ ಕೊಂದ ಇಬ್ಬರು ಶೂಟರ್‌ಗಳನ್ನು ಅದು ಗುರುತಿಸಿದೆಯೆಂದು ಸಿಬಿಐನ ಉನ್ನತ ಮೂಲಗಳು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿವೆ ಎನ್ನಲಾಗಿದೆ.

ಈ ಇಬ್ಬರು ಶೂಟರ್‌ಗಳು ಸನಾತನ ಸಂಸ್ಥಾದ ಸದಸ್ಯರಾಗಿದ್ದು, ಇಬ್ಬರೂ 2009ರ ಗೋವಾ ಸ್ಫೋಟ ಪ್ರಕರಣದಲ್ಲೂ ಬೇಕಾದವರಾಗಿದ್ದಾರೆ. ಸಿಬಿಐ ಒಬ್ಬ ಶೂಟರ್‌ನನ್ನು ಸಾಗರ್ ಅಕೋಲ್ಕರ್ ಎಂದು ಗುರುತಿಸಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಇನ್ನೊಬ್ಬ ಶೂಟರ್‌ನ ಗುರುತನ್ನು ತಡೆಹಿಡಿಯಲಾಗಿದೆ ಎಂದು ಅದು ಹೇಳಿದೆ.

ತನಿಖಾ ಸಂಸ್ಥೆಯ ಈ ಮಾಹಿತಿಯು ತನಿಖೆಗಳು, ರೇಖಾಚಿತ್ರಗಳು ಹಾಗೂ ಡಾ. ವೀರೇಂದ್ರ ತಾವಡೆ ಎಂಬ ಬಂಧಿತ ಆರೋಪಿಯ ಲ್ಯಾಪ್‌ಟಾಪ್‌ನಲ್ಲಿ ದೊರೆತಿರುವ ಇ-ಮೇಲ್‌ಗಳನ್ನು ಆಧರಿಸಿದೆ. ತಾವಡೆ, ಸನಾತನ ಸಂಸ್ಥೆಯ ಉಪಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್)ಯ ಸದಸ್ಯನಾಗಿದ್ದು, ಅವನನ್ನು ಶುಕ್ರವಾರ ಬಂಧಿಸಲಾಗಿತ್ತೆಂದು ಮೂಲಗಳು ತಿಳಿಸಿವೆ. ನಾಲ್ವರ ಸಂಯೋಜಿತ ಗುಂಪೊಂದು ದಾಭೋಲ್ಕರ್‌ರ ಹತ್ಯೆಯನ್ನು ನಡೆಸಿದೆಯೆಂಬುದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

ತಾವಡೆ, ಆ ಗುಂಪಿನ ಎರಡನೆ ನಾಯಕನಾಗಿದ್ದರು. ತಾವಡೆ, ತನ್ನ ನಿಯಂತ್ರಕರಿಂದ ಆದೇಶಗಳನ್ನು ಪಡೆದು ಅವುಗಳನ್ನು ಅಕೋಲ್ಕರ್ ಹಾಗೂ ಸನಾತನ ಸಂಸ್ಥೆಯ ಇನ್ನೊಬ್ಬ ಸದಸ್ಯನಿಗೆ ರವಾನಿಸುತ್ತಿದ್ದನು. ಆ ಕೊನೆಯ ಇಬ್ಬರು ಕೊಲೆಗಾರರು ಹಾಗೂ ತಾವಡೆ ಮತ್ತಾತನ ನಿಯಂತ್ರಕ ಪ್ರಧಾನ ಸೂತ್ರಧಾರರಾಗಿದ್ದಾರೆಂಬುದು ತಮ್ಮ ನಂಬಿಕೆಯಾಗಿದೆಯೆಂದು ತನಿಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ವಿವರಿಸಿದ್ದಾರೆ.

ದಾಭೋಲ್ಕರ್ ತಮ್ಮ ಗುರಿಯೆಂದು 2010ರಲ್ಲಿ ಅಕೋಲ್ಕರ್‌ಗೆ ಕಳುಹಿಸಿದ್ದ ಇ-ಮೇಲ್‌ಗಳಲ್ಲಿ ತಾವಡೆ ಬರೆದಿದ್ದನೆಂದು ಮೂಲಗಳು ಹೇಳಿವೆ. ದಾಭೋಲ್ಕರ್ ರ ಹತ್ಯೆಯ ಹೊಣೆಯನ್ನು ಎಚ್‌ಜೆಎಸ್‌ನ ಹಿರಿಯ ಸದಸ್ಯನೊಬ್ಬನು ಒಪ್ಪಿಸಿದ್ದನು. ಅದನ್ನು ತಾವಡೆ, ಅಕೋಲ್ಕರ್‌ಗೆ ವಹಿಸಿದ್ದನು. ತಾವಡೆ, ಅಕೋಲ್ಕರ್‌ಗೆ ಹಲವು ಇ-ಮೇಲ್‌ಗಳನ್ನು ಕಳುಹಿಸಿದ್ದು, ಅವುಗಳಲ್ಲಿ ‘ಗುರಿ’ ಹಾಗೂ ‘ಹತ್ಯೆ’ಗಳಂತಹ ಶಬ್ದಗಳನ್ನು ಬಳಸಿದ್ದನೆಂದು ತನಿಖೆಗೆ ಸಂಬಂಧಿಸಿದ ಇನ್ನೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸಿಬಿಐ ಕಳೆದ ವರ್ಷ ಸಿದ್ಧಪಡಿಸಿದ್ದ ರೇಖಾಚಿತ್ರಗಳಲ್ಲೊಂದು ಅಕೋಲ್ಕರ್‌ನ ಚಿತ್ರವನ್ನು ನಿಕಟವಾಗಿ ಹೋಲುತ್ತಿದೆಯೆಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಈ ಹಿಂದೆಯೇ ವರದಿ ಮಾಡಿತ್ತು.

ಅಕೋಲ್ಕರ್‌ಗೆ ತಾವಡೆ ಕಳುಹಿಸಿದ್ದ ಗುಪ್ತಭಾಷೆಯ ಇ-ಮೇಲ್ ಒಂದು ಲಭ್ಯವಾಗುವುದರೊಂದಿಗೆ ಪ್ರಕರಣದಲ್ಲಿ ಸಿಬಿಐ ಮೊದಲ ದೊಡ್ಡ ಮುನ್ನಡೆ ಸಾಧಿಸಿದೆ. ಇದು ಅವರಿಬ್ಬರ ನಡುವೆ 2008ರಿಂದ 2013ರವರೆಗೆ ವಿನಿಮಯವಾಗಿರುವ ಹಲವು ಇ-ಮೇಲ್‌ಗಳ ಭಾಗವಾಗಿದೆಯೆಂದು ಭಾವಿಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಜೂ.1ರಿಂದ ಸಿಬಿಐಯ ನವಿ ಮುಂಬೈ ಕಚೇರಿಯಲ್ಲಿ ವಿಚಾರಣೆಗೊಳಗಾಗುತ್ತಿರುವ ತಾವಡೆ, ‘ದೇಶಿ ಹಾಗೂ ವಿದೇಶಿ ಸಾಹಿತ್ಯಕ್ಕಾಗಿ ನಾವು ಕಾರ್ಖಾನೆಗಳನ್ನೇ ಸ್ಥಾಪಿಸಬೇಕಾದೀತು ಎಂದು ಇ-ಮೇಲೊಂದರಲ್ಲಿ ಬರೆದಿದ್ದನೆಂದು ಮೂಲಗಳು ಹೇಳಿವೆ.

ತಾವಡೆಯೆಂದಿರುವ ‘ದೇಶಿ ಸಾಹಿತ್ಯ’ ಎಂದರೆ ನಾಡಪಿಸ್ತೂಲು ‘ವಿದೇಶಿ ಸಾಹಿತ್ಯ’ ಎಂದರೆ ವಿದೇಶಿ ನಿರ್ಮಿತ ಆಯುಧಗಳೆಂದು ಅರ್ಥವೆಂದು ಅವು ವಿವರಿಸಿವೆ. 2009 ಮತ್ತು 2010ರ ನಡುವಿನ ಇ-ಮೇಲ್‌ಗಳಲ್ಲಿ ಇಬ್ಬರೂ ದೇಶೀ ಸಾಹಿತ್ಯ (ನಾಡ ಪಿಸ್ತೂಲು) ಹಾಗೂ ವಿದೇಶಿ ಸಾಹಿತ್ಯದ( ವಿದೇಶಿ ಆಯುಧಗಳು) ಬಗ್ಗೆ ಚರ್ಚಿಸಿದ್ದರು. ಅದು ಅವರು ಸನಾತನ ಸಂಸ್ಥೆಯ ‘ನಿರೀಕ್ಷೆಯಲ್ಲಿದ್ದಾರೆ’ ಎಂದು ಭಾವಿಸುವಂತೆ ಮಾಡಿತ್ತು. ಆದರೆ ಒಂದು ಇ-ಮೇಲ್‌ನಲ್ಲಿ ತಾವಡೆ ‘ಕಾರ್ಖಾನೆ’ಯ ಬಗ್ಗೆ ಹೇಳಿದ್ದನು. ಆದರೆ, ಕಾರ್ಖಾನೆ ಸ್ಥಾಪಿಸುವುದಕ್ಕೂ, ಸಾಹಿತ್ಯಕ್ಕೂ ಸಂಬಂಧವೇ ಇಲ್ಲದ ಕಾರಣ ಈ ಶಬ್ದ ನಮ್ಮನ್ನು ಗಲಿಬಿಲಿಗೊಳಿಸಿತ್ತು. ಇನ್ನೊಂದು ಇ-ಮೇಲ್‌ನಲ್ಲಿ ದೇಸಿ ಸಾಹಿತ್ಯವು ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ದೊರೆಯುತ್ತದೆ. ವಿದೇಶಿ ಸಾಹಿತ್ಯವು ಅಸ್ಸಾಂನಲ್ಲಿ ಸಿಗುತ್ತದೆಂದು ಹೇಳಲಾಗಿತ್ತೆಂದು ಹಿರಿಯಾಧಿಕಾರಿ ತಿಳಿಸಿದ್ದಾರೆ.

ಹಿಂದೂ ರಾಷ್ಟ್ರವೊಂದಕ್ಕಾಗಿ 15 ಸಾವಿರ ಸೇವಕರ ಸೇನೆಯೊಂದನ್ನು ಸ್ಥಾಪಿಸುವ ದೊಡ್ಡ ಯೋಜನೆಯೊಂದರ ಕುರಿತು ತಾವಡೆ ತನಿಖೆದಾರರಿಗೆ ತಿಳಿಸಿದ್ದಾನೆಂದು ಮೂಲಗಳು ಹೇಳಿವೆ.

ಎಚ್‌ಜೆಎಸ್‌ನ ಪಶ್ಚಿಮ ಮಹಾರಾಷ್ಟ್ರದ ಕಮಾಂಡರ್ ಆಗಿರುವ ತಾವಡೆ, ಅಕೋಲ್ಕರ್‌ಗೆ ಕಳುಹಿಸಿದ ಅನೇಕ ಇ-ಮೇಲ್‌ಗಳಲ್ಲಿ ಈ ‘ಸೇನೆ’ಯನ್ನು ಉಲ್ಲೇಖಿಸಿದ್ದನೆಂದು ಅಧಿಕಾರಿ ತಿಳಿಸಿದ್ದಾರೆ.

ಅದಾಗ್ಯೂ, ವಿಚಾರಣೆಯ ವೇಳೆ ತಾವಡೆ, ತಾನು ದಾಭೋಲ್ಕರ್‌ರ ಹತ್ಯೆಯ ಯೋಜನೆ ಅಥವಾ ಜಾರಿಯಲ್ಲಿ ಒಳಗೊಂಡಿರಲಿಲ್ಲವೆಂದು ಪದೇ ಪದೇ ಹೇಳುತ್ತಿದ್ದನೆಂದು ಮೂಲಗಳು ಹೇಳಿವೆ.

ಇದೇವೇಳೆ, ಸಿಬಿಐ ಸನಾತನ ಸಂಸ್ಥೆಯ ಪನ್ವೇಲ್ ಕಚೇರಿಗೆ ದಾಳಿ ನಡೆಸಿ, ಹಾರ್ಡ್ ಡಿಸ್ಕೊಂದನ್ನು ವಶಪಡಿಸಿಕೊಂಡಿದೆ. ಅದರಲ್ಲೇನಿದೆ ಎಂಬುದರ ಅಧ್ಯಯನಕ್ಕಾಗಿ ಹಾರ್ಡ್‌ಡಿಸ್ಕ್‌ನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗುವುದು. ಸಂಘಟನೆಯ ವಿರುದ್ಧ ಮಾತನಾಡುವವರ ವಿರುದ್ಧ ಅವರು ಯಾವ ರೀತಿಯ ಸಾಹಿತ್ಯವನ್ನು ಒಟ್ಟುಗೂಡಿಸಿದ್ದರೆಂಬುದನ್ನು ತಿಳಿಯಲು ಪ್ರಯತ್ನಿಸಲಾಗುವುದು. ಇದು, ದಾಬೋಲ್ಕರ್ ಒಬ್ಬರೇ ಅವರ ಗುರಿಯಾಗಿರಲಿಲ್ಲವೆಂಬ ತಮ್ಮ ವಿವರಣೆಯನ್ನು ಖಚಿತಗೊಳಿಸಲು ನೆರವಾಗಲಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.

2013ರ ಆ.20ರಂದು ಮುಂಜಾನೆ 7:30ರ ವೇಳೆ ಪುಣೆಯ ಓಂಕಾರ್ ಸೇತುವೆಯ ಮೇಲೆ ಇಬ್ಬರು ಅಜ್ಞಾತ ಮೋಟಾರ್ ಸೈಕಲ್ ಸವಾರರು ದಾಬೋಲ್ಕರ್‌ರನ್ನು ಗುಂಡಿಕ್ಕಿ ಕೊಂದಿದ್ದರು. ಒಂದು ತಿಂಗಳ ಬಳಿಕ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ದಾಭೋಲ್ಕರ್‌ರ ಹತ್ಯೆಯ ಪಿತೂರಿಯನ್ನು 2013ರ ಜೂನ್‌ನಲ್ಲಿ ಹೆಣೆಯಲಾಗಿತ್ತು. 2009ರ ಗೋವಾ ಸ್ಫೋಟದಲ್ಲಿ ಹೆಸರು ಮುನ್ನಡೆಗೆ ಬಂದಾಗಿನಿಂದ ಅಕೋಲ್ಕರ್ ತಲೆಮರೆಸಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ. 2013ರ ಜೂನ್‌ನಲ್ಲಿ ಅಕೋಲ್ಕರ್ ಪುಣೆಯಲ್ಲಿದ್ದನೆಂಬುದನ್ನು ಸಾಬೀತುಪಡಿಸುವ ‘ತಾಂತ್ರಿಕ ಸಾಕ್ಷ’ ಸಿಬಿಐನಲ್ಲಿದೆ. ಈ ತಿಂಗಳು ಆತನ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿ ಅದಕ್ಕೆ ದೊರೆತಿತ್ತು. ಅದರ ಆಧಾರದಲ್ಲಿ ತನಿಖೆ ಸಂಸ್ಥೆ ಜೂ.1ರಂದು ಅಕೋಲ್ಕರ್‌ನ ಪುಣೆಯ ನಿವಾಸಕ್ಕೆ ದಾಳಿ ನಡೆಸಿತ್ತಾದರೂ, ಅವನು ಅದಕ್ಕೆ ಚಳ್ಳೆಹಣ್ಣು ತಿನ್ನಿಸಲು ಸಮರ್ಥನಾದನೆಂದು ಅವು ಹೇಳಿವೆ.

 ತಾವಡೆಯ ರಿಮ್ಯಾಂಡ್‌ನ ಅವಧಿ ಜೂ.16ಕ್ಕೆ ಮುಕ್ತಾಯವಾಗಲಿದ್ದು, ಆತನನ್ನು ಬ್ರೈನ್ ಮ್ಯಾಪಿಂಗ್, ನಾರ್ಕೊ ಅನಾಲಿಸಿಸ್‌ನಂತಹ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಲು ಸಿಬಿಐ ಅನುಮತಿ ಕೇಳಬಹುದು. ಅದಕ್ಕೆ ಆರೋಪಿಯ ಸಮ್ಮತಿಯಿರಬೇಕು. ಆದರೆ, ಅಂತಹ ಪರೀಕ್ಷೆಗಳು ಸಾಮಾನ್ಯವಾಗಿ ತನಿಖೆಗೆ ಸ್ಪಷ ದಿಕ್ಕನ್ನು ಒದಗಿಸುತ್ತವೆಯೆಂದು ಅಧಿಕಾರಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News