ವೀಣಾ ಮಲಿಕ್: ಐಟಂ ಸಾಂಗ್ ನಿಂದ ಹಮ್ದ್ ಹಾಡುವವರೆಗೆ..
ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಚರ್ಚೆಯಲ್ಲಿದ್ದ ಪಾಕಿಸ್ತಾನಿ ಟಿವಿ ನಟಿ ವೀಣಾ ಮಲಿಕ್ ಇದೀಗ ಬೇರೆಯೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಧಾರ್ಮಿಕ ಮನೋಭಾವವನ್ನು ಬೆಳೆಸಿಕೊಂಡಿರುವ ವೀಣಾ ಇಸ್ಲಾಂ ಧರ್ಮವನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿಮಾಡಿವೆ. ತನ್ನ ಜೀವನದಲ್ಲಿ ಧರ್ಮದ ಅನುಪಸ್ಥಿತಿ ಹೇಗೆ ಕಾಡಿತ್ತು ಎಂದು ಆಕೆ ಇತ್ತೀಚಿಗೆ ವಿವರಿಸಿದ್ದರು. 2013ರ ರಮಝಾನ್ ಸಂದರ್ಭ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಕಾರಣ ಸಂತೃಪ್ತಿ ಇದೆ ಎಂದೂ ವೀಣಾ ಹೇಳಿದ್ದರು.
ತನ್ನ ಗುರುಗಳಾದ ಮುಫ್ತಿ ನಯೀಮ್, ಮೌಲಾನ ತಾರಿಕ್ ಜಮೀಲ್ ಮತ್ತು ಜುನೈದ್ ಜಮ್ಶೀದ್ ಅವರ ಮಾತುಗಳನ್ನು ಕೇಳಿದ ಮೇಲೆ ವೀಣಾಳ ಜೀವನವೇ ಬದಲಾಗಿದೆ. ದಿಕ್ಕು ತಪ್ಪಿ ಅಲೆದಾಡಲು ಮನಸ್ಸು ಯಾವಾಗಲೂ ಪ್ರಚೋದನೆಗೆ ಒಳಗಾಗುತ್ತಿದ್ದರೂ, ಈ ಹಿರಿಯರ ಮಾರ್ಗದರ್ಶನದಿಂದ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ವರ್ಷ ವೀಣಾ ಮತ್ತು ಅವರ ಪತಿ ಅಸದ್ ಬಶೀರ್ ಹಮ್ದ್ (ಭಕ್ತಿಗೀತೆ)ಯೊಂದನ್ನು ಹಾಡಿದ್ದಾರೆ. ಇದು ತನ್ನ ಅಭಿಮಾನಿಗಳು ಮತ್ತು ವೀಕ್ಷಕರಿಗೆ ರಮಝಾನ್ ಉಡುಗೊರೆ ಎಂದೂ ವೀಣಾ ಹೇಳಿದ್ದಾರೆ. ಖೈಸರ್ ನದೀಂ ನಿರ್ಮಾಣದ ಈ ವೀಡಿಯೊ ಇನ್ನೂ ಬಿಡುಗಡೆಯಾಗಬೇಕಿದೆ. ಆದರೆ ದಂಪತಿ ಇದರಲ್ಲಿ ಜೊತೆಯಾಗಿ ಕೆಲಸ ಮಾಡಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ. ವೀಣಾರಿಗೆ ಈ ಅವಕಾಶ ಸಿಕ್ಕ ಕೂಡಲೇ ಅವರು ತಕ್ಷಣ ಖುಷಿಯಾಗಿ ಒಪ್ಪಿಕೊಂಡಿದ್ದರು ಎಂದು ಬಶೀರ್ ಹೇಳಿದ್ದಾರೆ.
ಕೃಪೆ: khaleejtimes.com