×
Ad

ಧಣಿಗಳಿಗೆ ಬಗ್ಗದ ಅಪರೂಪದ ಪತ್ರಕರ್ತ ಇಂದರ್ ಮಲ್ಹೋತ್ರಾ

Update: 2016-06-14 23:00 IST

ಇಂದರ್ ಮಲ್ಹೋತ್ರಾ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮುಂಬೈ ಆವೃತ್ತಿಯ ಸಹಾಯಕ ಸಂಪಾದಕರಾಗಿದ್ದಾಗ ನಾನು ಅವರ ಜತೆ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರು ಸ್ಟೇಟ್ಸ್‌ಮನ್ ಪತ್ರಿಕೆಯಿಂದ ಹಿರಿಯ ಸಹಾಯಕ ಸಂಪಾದಕರಾಗಿ ಸೇರಿದ್ದರು. ಅದು 1975ರ ತುರ್ತು ಪರಿಸ್ಥಿತಿಗಿಂತ ತೀರಾ ಮೊದಲು ಅಲ್ಲ.

ಅವರು ನಮ್ಮ ತಂಡದಲ್ಲಿದ್ದ ವಿದ್ವತ್ ಪ್ರದರ್ಶನ ಅಥವಾ ಬಡಾಯಿ ಕೊಚ್ಚಿಕೊಳ್ಳುವ ಪತ್ರಕರ್ತರಿಗಿಂತ ಭಿನ್ನವಾಗಿದ್ದವರು. ಪ್ರತಿ ದಿನದ ಪತ್ರಿಕೆಯಲ್ಲಿ ಕೂಡಾ ಜನಸಾಮಾನ್ಯರಿಗೆ ಸಂಪಾದಕೀಯ ಪುಟದ ಮೂಲಕ ಶಿಕ್ಷಣ ನೀಡಬೇಕು ಎಂಬ ನಂಬಿಕೆ ಇಟ್ಟಿದ್ದವರಿಗಿಂತ ಅವರು ಭಿನ್ನ.

ತುರ್ತು ಪರಿಸ್ಥಿತಿ
ಇತರ ಬಹುತೇಕ ಸಂಪಾದಕರಂತೆ ಮಲ್ಹೋತ್ರಾ ಕೂಡಾ ಕಿರಿಯ ವರದಿಗಾರರಾಗಿ ರಾಜಧಾನಿಯಲ್ಲಿ ಕೆಲಸ ಆರಂಭಿಸಿದವರು. ಕಠಿಣ ಪರಿಶ್ರಮದಿಂದ ರಾಜಕೀಯ ಬಾತ್ಮೀದಾರ ಹಂತದವರೆಗೂ ಬೆಳೆದರು. ಸ್ವಾತಂತ್ರ್ಯ ಹಾಗೂ ಆನಂತರದ ಪ್ರಕ್ಷುಬ್ಧ ಕಾಲಘಟ್ಟವನ್ನು ಕಂಡವರು. ಘಟನೆಗಳ ಸೂಕ್ಷ್ಮ ವಿವರಗಳ ಬಗ್ಗೆಯೂ ಹದ್ದಿನ ಕಣ್ಣು ಮತ್ತು ಅಗಾಧ ಸ್ಮರಣಶಕ್ತಿಯನ್ನು ಹೊಂದಿದ್ದರು. ಇದರಿಂದಾಗಿ ಅವರು ನಿಧನರಾಗುವ ಕೆಲ ತಿಂಗಳುಗಳ ಹಿಂದಿನವರೆಗೂ ಬರವಣಿಗೆ ಮುಂದುವರಿಸಲು ಸಾಧ್ಯವಾಗಿತ್ತು. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ರಿಯರ್ ವ್ಯೆ ಪ್ರಕಟವಾಗುತ್ತಿತ್ತು.
ಸರಳ ಹಾಗೂ ವಿನಯಶೀಲ ವ್ಯಕ್ತಿತ್ವದ ಮಲ್ಹೋತ್ರಾ, ವರದಿಗಾರಿಕೆ ದಿನಗಳಲ್ಲಿ ನಿಸ್ಸಂದೇಹವಾಗಿ ಒರೆಗಲ್ಲಿನಂತಿದ್ದರು. ಅಗಾಧ ಓದಿನ ಒಲವು ಹೊಂದಿದ್ದ ನಮ್ಮ ಸಂಪಾದಕ ಶ್ಯಾಮ್‌ಲಾಲ್ ಅವರ ತೀಕ್ಷ್ಣ ದೃಷ್ಟಿ ಎಂದೂ ಅಭಿಪ್ರಾಯ ಪುಟದಿಂದ ಚಂಚಲವಾಗುತ್ತಿರಲಿಲ್ಲ. ಆದರೆ ಅವರನ್ನೂ ಮೀರಿಸುವಷ್ಟು ಪ್ರಭುತ್ವ ಮಲ್ಹೋತ್ರಾ ಅವರಲ್ಲಿತ್ತು.

‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಮಲ್ಹೋತ್ರಾ ಅವರಿಗಿಂತ ಹಿರಿಯರಾದ ದಿವಂಗತ ಅಜಿತ್ ಭಟ್ಟಾಚಾರ್ಯ ಅವರು ಪತ್ರಿಕೆಯನ್ನು ತೊರೆದು ‘ಎವೆರಿಮನ್ಸ್ ಜರ್ನಲ್’ ಸೇರಿದಾಗ, ಮಲ್ಹೋತ್ರಾ ಅವರನ್ನು ಹಂಗಾಮಿ ಸಂಪಾದಕರಾಗಿ ಲಾಲ್ ಅವರ ಅನುಪಸ್ಥಿತಿಯಲ್ಲಿ ನಿಯೋಜಿಸಲಾಗುತ್ತಿತ್ತು. ಆದರೆ ತುರ್ತು ಪರಿಸ್ಥಿತಿ ಘೋಷಣೆ ಬಳಿಕ ಮಲ್ಹೋತ್ರಾ ಅವರ ನೈಜ ಸಾಮರ್ಥ್ಯ ಬೆಳಕಿಗೆ ಬಂತು.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ರವಿವಾರದ ಪುರವಣಿಯನ್ನು ನಾನು ಸಂಪಾದಿಸುತ್ತಿದ್ದೆ. ಪ್ರತೀ ಬುಧವಾರ ಅದು ಮುದ್ರಣಕ್ಕೆ ಹೋಗುವ ಮುನ್ನ ಮಲ್ಹೋತ್ರಾ ತೀರಾ ಜಾಗರೂಕರಾಗಿ ಅದರ ಎಲ್ಲ ಲೇಖನಗಳ ಮೇಲೆ ಕಣ್ಣಾಡಿಸುತ್ತಿದ್ದರು. ಒಂದು ಬಾರಿ ಅವರು ಮಿನಾಜ್ ಮರ್ಚಂಟ್ ಅವರ ಲೇಖನವೊಂದನ್ನು ವಾಪಾಸು ಕಳುಹಿಸಿದರು. ಪುಣೆಯ ಓಶೋ ಆಶ್ರಮಕ್ಕೆ ಭೇಟಿ ನೀಡಿದ ಬಗೆಗಿನ ಲೇಖನ ಅದು. ಆದರೆ ಆ ಲೇಖನವನ್ನು ತಿರಸ್ಕರಿಸುವ ನಿರ್ಧಾರವನ್ನು ನನ್ನ ಬಳಿ ಹೇಳುವ ಬದಲು, ನಮ್ಮ ಸಂಪಾದಕ ಲಾಲ್ ಅವರು ಮರಳಿದ ಬಳಿಕ ಅವರಿಂದ ಹೇಳಿಸಿದರು.
ಕ್ರೈಸ್ತರು ಪೋಪ್ ಅವರನ್ನು ಪೂಜಿಸುವಂತೆ, ರಜನೀಶ್ ಅವರಿಗೂ ದೊಡ್ಡ ಪ್ರಮಾಣದ ಅನುಯಾಯಿಗಳಿದ್ದಾರೆ ಎಂದು ನಾಸ್ತಿಕರಾದ ಕಿರಿಯ ಸಹಾಯಕ ಸಂಪಾದಕರಿಗೆ ನಮ್ಮ ಸಂಪಾದಕರು ಹೇಳಿದರು. ಆದರೆ ಪತ್ರಿಕೆಯ ಚೇರ್‌ಮನ್ ಅವರ ಪತ್ನಿ ಇಂದು ಜೈನ್ ಅವರು ಓಶೋ ಅವರ ಭಕ್ತೆ ಎನ್ನುವುದನ್ನು ಹೇಳಿರಲಿಲ್ಲ. ಈ ಸತ್ಯ ನನಗೂ ಗೊತ್ತಿರಲಿಲ್ಲ.

ಸ್ಥಾನಿಕ ಸಂಪಾದಕರಾಗಿ
1970ರ ದಶಕದ ಕೊನೆಯಲ್ಲಿ ಶ್ಯಾಮ್‌ಲಾಲ್ ನಿವೃತ್ತರಾದಾಗ, ದಿಲ್ಲಿಯಲ್ಲಿ ಸ್ಥಾನಿಕ ಸಂಪಾದಕರಾಗುವುದು ಯಾರು ಎನ್ನುವ ಬಗ್ಗೆ ಮಲ್ಹೋತ್ರಾ ಹಾಗೂ ಕೆ.ಸಿ.ಖನ್ನಾ ಅವರ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಸಾಮಾನ್ಯವಾಗಿ ದಿಲ್ಲಿ ಸ್ಥಾನಿಕ ಸಂಪಾದಕರಾದವರು ಮುಂದಿನ ಸಂಪಾದಕರಾಗುತ್ತಾರೆ ಎಂದು ಪರಿಗಣಿಸಲಾಗುತ್ತಿತ್ತು.
ಕೊನೆಗೂ ಮಲ್ಹೋತ್ರಾ ಗೆದ್ದರು. ಖನ್ನಾ ಮುಂಬೈನ ಸ್ಥಾನಿಕ ಸಂಪಾದಕ ಹುದ್ದೆಗೆ ತೃಪ್ತಿಪಡಬೇಕಾಯಿತು. ಖನ್ನಾ ಬಳಿಕ ‘ಇಲ್ಯೂಸ್ಟ್ರೇಟೆಡ್ ವೀಕ್ಲಿ’ಯ ಸಂಪಾದಕರಾದರು. ಕೊನೆಗೆ ಅವರ ಸಹಾಯಕನಿಂದಲೇ ಹತ್ಯೆಗೀಡಾದರು.
1979ರಲ್ಲಿ ನಾನು ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾನಿಕ ಸಂಪಾದಕ ಹುದ್ದೆ ಪಡೆದದ್ದರಿಂದ ಟೈಮ್ಸ್ ಆಫ್ ಇಂಡಿಯಾ ತೊರೆದೆ. ಆ ಬಳಿಕ 1985ರಿಂದ ಮಲ್ಹೋತ್ರಾ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಹೊಸ ಮಾಲಕ ಅಶೋಕ್ ಜೈನ್ ಹಾಗೂ ಸಮೀರ್ ಜೈನ್ ಇಬ್ಬರ ನಡುವೆ ಸರಿದೂಗಿಸಿಕೊಂಡು ಹೋಗಬೇಕಿತ್ತು. ಆಗ ನಡೆದ ಒಂದು ಘಟನೆಯನ್ನು ಪತ್ರಿಕೆಯ ಹಿರಿಯ ಸಂಪಾದಕರೊಬ್ಬರು ನೆನಪಿಸಿಕೊಳ್ಳುತ್ತಾರೆ.
ಸಂಸ್ಥೆಯ ಉಪಾಧ್ಯಕ್ಷರಾಗಿ ಸಮೀರ್ ಜೈನ್ ಆಗಮಿಸಿದಾಗ ಒಬ್ಬ ಮಲ್ಹೋತ್ರಾ ಅವರಿಗೆ ಕರೆ ಕಳುಹಿಸಿದರು. ಸ್ಥಾನಿಕ ಸಂಪಾದಕ, ಜೈನ್ ಕಚೇರಿಗೆ ಹೋದರು. ಜೈನ್ ಅವರಿಗೆ ಹೆಚ್ಚಿನದೇನೂ ಮಾತನಾಡಲು ಇರಲಿಲ್ಲ ಎನ್ನುವುದು ಮಲ್ಹೋತ್ರಾ ಅವರಿಗೆ ತಿಳಿಯಿತು. ಸ್ವಲ್ಪಸಮಯ ಉಭಯ ಕುಶಲೋಪರಿ ಚರ್ಚೆ ನಡೆದ ಬಳಿಕ ಮಲ್ಹೋತ್ರಾ, ‘‘ಸಮೀರ್‌ಜೀ ನಿರ್ದಿಷ್ಟ ವಾಗಿ ಹೇಳುವುದು ಏನಾದರೂ ಇದೆಯೇ, ನಾನು ಸಂಪಾದಕೀಯ ಬರೆಯಬೇಕಿದೆ’’ ಎಂದು ಸೂಚ್ಯವಾಗಿ ಹೇಳಿದರು. ಇದಾದ ಎರಡು ಮೂರು ದಿನಗಳಲ್ಲಿ, ಮತ್ತೆ ಉಪಾಧ್ಯಕ್ಷರ ಕಚೇರಿಗೆ ಹೋಗಲು ಸಮನ್ಸ್ ಬಂತು. ಆಗ ಮಲ್ಹೋತ್ರಾ, ‘‘ನಾನು ಇದೀಗ ಸಂಪಾದಕೀಯ ಸಭೆ ನಡೆಸುತ್ತಿದ್ದೇನೆ. ತಕ್ಷಣ ಬರಲು ಸಾಧ್ಯವಿಲ್ಲ. ಆ ಬಳಿಕ ಬರುತ್ತೇನೆ’’ ಎಂದು ಹೇಳಿದರು. ಈ ಘಟನೆಯನ್ನು ನೆನಪಿಸಿಕೊಂಡ ಹಿರಿಯ ಸಂಪಾದಕರು, ಮಲ್ಹೋತ್ರಾ ಅವರ ಸಂದೇಶವನ್ನು ಉಪಾಧ್ಯಕ್ಷರಿಗೆ ತಲುಪಿಸಿದ್ದರು. ಸ್ಥಾನಿಕ ಸಂಪಾದಕರನ್ನು ಭೇಟಿ ಮಾಡಬೇಕಾದರೆ, ನೀವೇ ಕೆಳಗೆ ಬರಬೇಕು ಎಂಬ ಸಂದೇಶ ಅದಾಗಿತ್ತು. ನನಗೆ ತಿಳಿದಿರುವಂತೆ ಆ ದಿನದಿಂದಲೇ ಸಮೀರ್ ಆ ಹುದ್ದೆಗೆ ಹೊಸ ಹುಡುಕಾಟ ಆರಂಭಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ.

ಹಲವು ವರ್ಷಗಳ ಬಳಿಕ ಮಲ್ಹೋತ್ರಾ ತಮ್ಮ ಸಮಸ್ಯೆಗಳನ್ನು ನೆನಪಿಸಿಕೊಂಡರು. ದಿಲ್ಲಿಯ ಸಾಕೇತದಲ್ಲಿರುವ ಪತ್ರಕರ್ತರ ಕಾಲನಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ, 2005ರಲ್ಲಿ ಅವರು ನನ್ನ ಜೊತೆ ಸುದೀರ್ಘವಾಗಿ ಮಾತನಾಡಿದ್ದರು. ತಮ್ಮ ತೀಕ್ಷ್ಣ ನೆನಪಿನ ಶಕ್ತಿಯಿಂದ, 1985ರ ಜನವರಿ 3ರ ಘಟನೆಯನ್ನು ನೆನಪಿಸಿಕೊಂಡರು. ‘‘ಅಂದು ಸಮೀರ್ ಜೈನ್ ನನ್ನನ್ನು ಉಪಾಹಾರಕ್ಕೆ ಆಹ್ವಾನಿಸಿದರು. ಪತ್ರಿಕೆಯನ್ನು ಹೇಗೆ ನಿರ್ವಹಿಸಬೇಕು ಮತ್ತು ಹೇಗೆ ಉತ್ತಮಪಡಿಸಬೇಕು ಎಂದು ನಾನು ಸಲಹೆ ಪಡೆಯಬಯಸುತ್ತೇನೆ. ಯಾರು ಬೇಕಾದರೂ ಬರೆಯಬಹುದು. ಬರೆಯಲು ನಾವು ಇತರರನ್ನೂ ನೇಮಕ ಮಾಡಿಕೊಳ್ಳಬಹುದು ಎನ್ನುವುದು ಅವರ ಅಭಿಪ್ರಾಯವಾಗಿತ್ತು.’’
‘‘ಪತ್ರಿಕೆಯನ್ನು ಹೇಗೆ ರೂಪಿಸಬೇಕು ಎನ್ನುವ ನಿಮ್ಮ ಕಲ್ಪನೆ ಬಗ್ಗೆ ಸಂಪಾದಕರ ಜೊತೆ ಚರ್ಚಿಸಿ. ನೀವು ನನಗೆ ಯಾವ ಸೂಚನೆಗಳನ್ನು ನೀಡಬೇಕು ಅಂದುಕೊಂಡಿದ್ದೀರೋ ಅದನ್ನು ಸಂಪಾದಕರ ಮೂಲಕ ನನಗೆ ಕೊಡಿ. ಅದು ನನಗೆ ಸ್ವೀಕಾರಾರ್ಹವಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾನು ಮತ್ತೆ ನಿಮ್ಮ ಬಳಿಗೆ ಬಂದು, ನನಗೆ ಹೋಗಲು ಅವಕಾಶ ನೀಡಿ ಎಂದು ಕೇಳಬೇಕಾಗುತ್ತದೆ’’ ಎಂದು ನಾನು ಪ್ರತಿಕ್ರಿಯಿಸಿದೆ. ಸಮೀರ್ ಜೈನ್ ಅವರು, ‘‘ಇಲ್ಲ..ಇಲ್ಲ..ನಿಮ್ಮನ್ನು ಹೋಗಲು ನಾನು ಅವಕಾಶ ಕೊಡುವುದಿಲ್ಲ’’ ಎಂದರು.
ಆಗ ನಾನು, ‘‘ವಿಷಯ ಅದಲ್ಲ, ನಾನು ಬರೆಯುವುದಿಲ್ಲ ಎಂದಾದರೆ, ನಾನು ಇಲ್ಲಿ ಇರಲು ಯೋಗ್ಯನಲ್ಲ. ಆಗ ನಾನು ಪತ್ರಕರ್ತನೇ ಆಗಿರುವುದಿಲ್ಲ’’ ಎಂದು ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘‘ನೀವು ಒಂದು ಹಂತವನ್ನು ತಲುಪಿದ್ದೀರಿ’’ ಎಂದು ಹೇಳಿದರು ಎನ್ನುವುದಾಗಿ ಮಲ್ಹೋತ್ರಾ ಮಾತುಕತೆ ವೇಳೆ ಬಹಿರಂಗಪಡಿಸಿದ್ದರು.

‘‘ಇದು ಮೂರು- ನಾಲ್ಕು ದಿನಗಳ ಕಾಲ ನಡೆಯಿತು. ಅಂತಿಮವಾಗಿ ಜನವರಿ 8ರಂದು ನಾನು ರಾಜೀನಾಮೆ ಪತ್ರ ನೀಡಿದೆ. ಆಗ ನನಗೆ 55 ವರ್ಷ. ಗಿರಿರಾಜ ಜೈನ್ ಮತ್ತೆ ಎರಡು ವರ್ಷ ಉಳಿಯುವಂತೆ ಪರಿಪರಿಯಾಗಿ ಕೇಳಿಕೊಂಡರು. ನಾವು ಜತೆಗೇ ಹೋಗೋಣ ಎಂದು ಕೋರಿದರು.’’
‘‘ಬಳಿಕ ಮಲ್ಹೋತ್ರಾ ರಾಜೀನಾಮೆ ಸ್ವೀಕರಿಸಲು ಒತ್ತಡ ತರಲಿಲ್ಲ. ಎರಡನೆ ಬಾರಿ ನಾನು ರಾಜೀನಾಮೆ ನೀಡಿದ್ದು, 1985ರಲ್ಲಿ ಅಮೆರಿಕಕ್ಕೆ ಹೋಗುವ ಮೊದಲು. ಸಮೀರ್ ಜೈನ್ ನನ್ನ ಜತೆ ಮಾತನಾಡಲು ಬಯಸಿದರು. ಇದು ಅವರು ಉಪಾಧ್ಯಕ್ಷರಾಗುವ ಮುನ್ನ. ನಾನು ಏಳುತ್ತಿದ್ದಾಗ ಅವರು ಕೈಕುಲುಕಿ, ನಾನೊಂದು ಸಲಹೆ ನೀಡಬಹುದೇ ಎಂದು ಕೇಳಿದರು. ಪತ್ರಿಕೆಯ ಉತ್ಪಾದನಾ ವಿಭಾಗದ ಮುಖ್ಯಸ್ಥರು ತಮ್ಮ ಬಳಿಗೆ ಬರುವಾಗ ಒಂದು ಪುಸ್ತಕದೊಂದಿಗೆ ಬರುತ್ತಾರೆ. ನಾನು ಹೇಳಿದ ಪ್ರತೀ ಅಂಶವನ್ನು ಟಿಪ್ಪಣಿ ಮಾಡಿಕೊಳ್ಳುತ್ತಾರೆ ಎಂದು ಸಮೀರ್‌ಜೈನ್ ಹೇಳಿದರು.’’
‘‘ಸಮೀರ್, ಮೊದಲನೆಯದಾಗಿ ನಾನು ಇದನ್ನು ಮಾಡಬೇಕಿಲ್ಲ. ನೀವು ನನಗೆ ನೇರವಾಗಿ ಮಾತನಾಡಬಹುದು. ನೀವು ಹೇಳಿದ ಎಲ್ಲ ಕೆಲಸವೂ ಆಗುತ್ತದೆ. ಇಲ್ಲದಿದ್ದರೆ, ನೀವು ನನ್ನ ಜೊತೆ ಮತ್ತೆ ಮಾತನಾಡಬಹುದು. ನಾನು ನೋಟ್‌ಬುಕ್ ಹಿಡಿದುಕೊಂಡು ಬರಲು ಸಾಧ್ಯವಿಲ್ಲ’’ ಎಂದು ಮಲ್ಹೋತ್ರಾ ಉತ್ತರಿಸಿದ್ದರು.
ಅಂತಿಮವಾಗಿ ಮಲ್ಹೋತ್ರಾ 1986ರಲ್ಲಿ ರಾಜೀನಾಮೆ ನೀಡಿದರು.
ಕೃಪೆ: scroll.in

Writer - ಡೆರಿಲ್ ಡಿ’ ಮೊಂಟ್

contributor

Editor - ಡೆರಿಲ್ ಡಿ’ ಮೊಂಟ್

contributor

Similar News