ಮುಂದಿನ ವರ್ಷಗಳಲ್ಲಿ ಹೆಚ್ಚು ಮಹಿಳೆಯರು ಸಶಸ್ತ್ರ ಸೇನೆಗಳ ಭಾಗವಾಗಲಿದ್ದಾರೆ

Update: 2016-06-14 17:50 GMT

ಹೊಸದಿಲ್ಲಿ, ಜೂ.14: ಮುಂದಿನ ವರ್ಷಗಳಲ್ಲಿ ಸಶಸ್ತ್ರ ಸೇನೆಗಳು ಮಹಿಳೆಯರ ಇನ್ನಷ್ಟು ದೊಡ್ಡ ಭಾಗವಹಿಸುವಿಕೆಯನ್ನು ಕಾಣಲಿವೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದು ಹೇಳಿದ್ದಾರೆ.

ಸಶಸ್ತ್ರ ಪಡೆಗಳಿಗೆ ಹೆಚ್ಚು ಮಹಿಳೆಯರು ಸೇರುವಂತೆ ಉತ್ತೇಜನ ನೀಡಲಾಗುವುದೇ ಎಂಬ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಆರಂಭ ಮಾತ್ರ. ನಿಧಾನವಾಗಿ ದೊಡ್ಡ ಸಂಖ್ಯೆಯ ಮಹಿಳೆಯರು ಸಶಸ್ತ್ರ ಸೇನೆಗಳ ಭಾಗವಾಗಲಿದ್ದಾರೆ ಎಂದರು.
ವೌಂಟ್ ಎವರೆಸ್ಟ್ ಏರಿದ ಮೊತ್ತ ಮೊದಲಿನ ಹುಡುಗಿಯರನ್ನೇ ಒಳಗೊಂಡಿದ್ದ ಎನ್‌ಸಿಸಿ ತಂಡವನ್ನು ಸನ್ಮಾನಿಸಿದ ಬಳಿಕ ಪಾರಿಕ್ಕರ್ ಮಾತನಾಡುತ್ತಿದ್ದರು.
ಅವನಿ ಚತುರ್ವೇದಿ, ಭಾವನಾ ಕಾಂತ್ ಹಾಗೂ ಮೋಹನಾ ಸಿಂಗ್ ಈ ಶನಿವಾರ ಯುದ್ಧ ವಿಮಾನ ಚಾಲಕಿಯರಾಗಿ ನಿಯೋಜಿತರಾಗುವ ಪ್ರಪ್ರಥಮ ಮಹಿಳೆಯರೆಂದು ಭಾರತದ ಚರಿತ್ರೆಯ ಪುಟವನ್ನು ಪ್ರವೇಶಿಸುವ ಹೊಸ್ತಿಲಲ್ಲಿದ್ದಾರೆ.
ಎನ್‌ಸಿಸಿ ಹುಡುಗಿಯರ ಪರ್ವತಾರೋಹಣ ತಂಡವು ಮೇ 21 ಹಾಗೂ 22ರಂದು ವಿಶ್ವದಲ್ಲೇ ಅತ್ಯುನ್ನತವಾದ ವೌಂಟ್ ಎವರೆಸ್ಟನ್ನು ಆರೋಹಿಸಿದೆ.
ಅಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಕ್ಯಾಡೆಲ್ ಹುಡುಗಿಯರಿಗೆ ಉತ್ತೇಜನ ನೀಡುವಂತೆ ಎನ್‌ಸಿಸಿಗೆ ಸೂಚಿಸಲಾಗಿದೆ. ಇದು ಕೇವಲ ಆರಂಭವಷ್ಟೇ. ಇನ್ನೂ ಅನೇಕ ಹುಡುಗಿಯರು ಇಂತಹ ಸಾಹಸಗಳನ್ನು ನಡೆಸಲಿದ್ದಾರೆಂದು ಪಾರಿಕ್ಕರ್ ಹೇಳಿದರು.
ಹುಡುಗಿಯರು ಎರಡು ತಂಡಗಳಾಗಿ, ಕರ್ನಲ್ ಗೌರವ್ ಕರ್ಕಿ ನೇತೃತ್ವದಲ್ಲಿ ಮೊದಲ ತಂಡ ಮೇ 21ರಂದು ಹಾಗೂ ಲೆಫ್ಟಿನೆಂಟ್ ಕರ್ನಲ್ ವಿಶಾಲ್ ಅಹ್ಲವಟ್ ನೇತೃತ್ವದಲ್ಲಿ ಎರಡನೆ ತಂಡ ಮೇ 22ರಂದು ಶಿಖರವನ್ನು ತಲುಪಿದ್ದವು.
ಇದು ಎನ್‌ಸಿಸಿ ಹುಡುಗಿಯರ ತಂಡದ ಮೊದಲ ಯಶಸ್ವಿ ವೌಂಟ್ ಎವರೆಸ್ಟ್ ಆರೋಹಣವಾಗಿದೆ. ತಂಡದ ಎಲ್ಲ 10 ಮಂದಿ ಹುಡುಗಿಯರು 17ರಿಂದ 21ರ ವರೆಗಿನ ವಯೋಮಾನದವರಾಗಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News