ಒರ್ಲ್ಯಾಂಡೊ ಹತ್ಯಾಕಾಂಡಕ್ಕೂ ಇಸ್ಲಾಮಿಗೂ ಸಂಬಂಧವಿಲ್ಲ: ಒಬಾಮ
ವಾಷಿಂಗ್ಟನ್, ಜೂ.15: ಒರ್ಲ್ಯಾಂಡೊ ಹತ್ಯಾಕಾಂಡಕ್ಕೂ ಇಸ್ಲಾಮಿಗೂ ಯಾವ ಸಂಬಂಧವೂ ಇಲ್ಲ. ಇಸ್ಲಾಂ ಕ್ರಾಂತಿಯ ಸುತ್ತ ನಡೆಯುತ್ತಿರುವ ಚರ್ಚೆಗಳು ರಾಜಕೀಯ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ. ಭಯೋತ್ಪಾದನೆ ಬಗ್ಗೆ ಮಾತನಾಡುವುದಾದರೆ ಜೊತೆಗೇ ಮಾತನಾಡೋಣ. ಮುಸ್ಲಿಮರು ದೇಶಕ್ಕೆ ಬರುವುದನ್ನು ತಡೆದಲ್ಲಿ, ಅದು ಅಮೆರಿಕದ ಮುಸ್ಲಿಂ ಸಮುದಾಯಕ್ಕೆ ಸರಕಾರ ದ್ರೋಹ ಬಗೆದಿದೆ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅಮೆರಿಕ ಭದ್ರತಾ ಮಂಡಳಿ ಸಭೆಯ ಬಳಿಕ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಮರಿಗೆ ಈ ಹಣೆಪಟ್ಟಿ ಕಟ್ಟುವುದರಿಂದ, 49 ಮಂದಿಯನ್ನು ಬಲಿಪಡೆದ ಒರ್ಲ್ಯಾಂಡೊ ಹತ್ಯಾಕಾಂಡ ಅಥವಾ ಐಸಿಸ್‌ನ ಇತರ ಯಾವುದೇ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಂತಕ ಕೋಪ, ಪ್ರಕ್ಷುಬ್ಧ ಮನೋಭಾವದ, ಅಸ್ಥಿರ ಯುವಕ. ಆತನನ್ನು ಹಿಂಸಾಕೃತ್ಯಕ್ಕೆ ಪ್ರಚೋದಿಸಲಾಗಿದೆ. ಈ ದಾಳಿಗೂ ಇಸ್ಲಾಂಗೂ ಯಾವ ಸಂಬಂಧವೂ ಇಲ್ಲ ಎಂದು ನುಡಿದರು.
ಅಮೆರಿಕದ ಗುಪ್ತಚರ ವಿಭಾಗ ಹಾಗೂ ಸೇನೆಗೆ ಯಾರು ಶತ್ರುಗಳು ಎನ್ನುವುದು ಖಚಿತವಾಗಿ ತಿಳಿದಿದೆ. ಟ್ವೀಟ್ ಮಾಡುವ, ಸುದ್ದಿವಾಹಿನಿಗಳಲ್ಲಿ ಬಿಂಬಿಸಿಕೊಳ್ಳುವ ರಾಜಕಾರಣಿಗಳೂ ಸೇರಿದಂತೆ ಎಲ್ಲ ಅಮೆರಿಕನ್ನರನ್ನು ರಕ್ಷಿಸಲು ಅವರು ಅಹರ್ನಿಶಿ ದುಡಿಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಮುಸ್ಲಿಮರನ್ನು ಉಗ್ರರೆಂದು ಹಣೆಪಟ್ಟಿ ಕಟ್ಟುವುದರಿಂದ ಅಥವಾ ಇಡೀ ಧರ್ಮದ ವಿರುದ್ಧ ಸಮರ ಸಾರುವುದರಿಂದ, ಉಗ್ರಗಾಮಿಗಳು ನಿಜವಾಗಿಯೂ ಅವರ ಪರವಾಗಿ ಕೆಲಸ ಮಾಡುವಂತೆ ಮಾಡಲು ಕಾರಣವಾಗುತ್ತದೆ ಎಂದು ಹೇಳಿದರು.