ಎರಡು ವರ್ಷದ ಮಗುವನ್ನು ನೀರಿಗೆಳೆದುಕೊಂಡು ಹೋದ ಮೊಸಳೆ
ಫ್ಲೊರಿಡಾ, ಜೂ.15: ಒರ್ಲಾಂಡೋದ ವಾಲ್ಟ್ ಡಿಸ್ನಿ ರೆಸಾರ್ಟ್‌ನ ಹೊಟೇಲ್ ಒಂದರಲ್ಲಿ ಮೊಸಳೆಯೊಂದು ಎರಡು ವರ್ಷದ ಗಂಡು ಮಗುವೊಂದರಮೇಲೆ ದಾಳಿ ನಡೆಸಿ ಆತನನ್ನು ನೀರಿಗೆಳೆದುಕೊಂಡು ಹೋದ ಘಟನೆ ನಡೆದಿದ್ದು ಮಗುವಿಗಾಗಿ ಹುಡುಕಾಟ ನಡೆದಿದೆ.
ಮಗು ನೀರಿನಲ್ಲಿ ಆಟವಾಡುತ್ತಿದ್ದಾಗ ಮೊಸಳೆ ದಾಳಿ ನಡೆಸಿದೆ. ಮಗುವಿನ ತಂದೆ ಹಾಗೂ ತಾಯಿ ನೀರಿಗೆ ಹಾರಿ ಮಗುವನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಗುವಿಗಾಗಿ ಹಲವಾರು ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿದೆ.
ನಬ್ರಾಸ್ಕಾ ಡೆಮಿಂಗ್ಸ್‌ನ ನಾಲ್ಕು ಮಂದಿಯ ಕುಟುಂಬವೊಂದು ರಜೆಯಲ್ಲಿ ಇಲ್ಲಿಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಹಿಂದೆ ಮೊಸಳೆಗಳ ಕಾಟ ವರದಿಯಾಗಿಲ್ಲದಿದ್ದರೂ ಫ್ಲೊರಿಡಾದ ನೀರಿನ ಕೊಳಗಳಲ್ಲಿ ಮೊಸಳೆಗಳ ಇರುವಿಕೆಯನ್ನು ಅಲ್ಲಗಳೆಯಲಾಗುವುದಿಲ್ಲ. ಘಟನೆ ನಡೆದಾಗ ನೀರಿನಲ್ಲಿ ಯಾರೂ ಈಜಾಡುತ್ತಿರಲಿಲ್ಲ.
ಸರ್ಚ್ ಲೈಟ್ ಹೊಂದಿರುವ ಹೆಲಿಕಾಪ್ಟರ್ ಸಹಿತ ರಕ್ಷಣಾ ಕಾರ್ಯಾಚರಣೆಗೆ ಹಲವಾರು ಉಪಕರಣಗಳನ್ನು ಉಪಯೋಗಿಸಲಾಗುತ್ತಿದ್ದರೂ ಇಲ್ಲಿಯವರೆಗೆ ಮಗು ಪತ್ತೆಯಾಗಿಲ್ಲ.