ನೇಪಾಳದ ಈ ವಿದ್ಯಾರ್ಥಿಗೆ ಕೇವಲ 68 ವರ್ಷ!

Update: 2016-06-15 12:09 GMT

ಕಠ್ಮಂಡು: ಬಿಳಿಗಡ್ಡವನ್ನು ಬ್ರಷ್ ಮಾಡಿಕೊಂಡು, ಯೂನಿಫಾರ್ಮ್‌ ಹಾಕಿಕೊಂಡು, ವಾಕಿಂಗ್ ಸ್ಟಿಕ್ ಸಹಾಯದಿಂದ ಒಂದು ಗಂಟೆ ಪ್ರಯಾಸದ ಪ್ರಯಾಣ ಮುಗಿಸಿಕೊಂಡು ಬರುವುದು ಈ ನೇಪಾಳಿ ’ಯುವಕನ’ ದಿನಚರಿ.

ಈ ಕಲಿಕಾಕಾಂಕ್ಷಿ ದುರ್ಗಾ ಕಮಿ ಅವರಿಗೆ ಇನ್ನೂ ಕೇವಲ 68ರ ವಯಸ್ಸು. ಕಿತ್ತು ತಿನ್ನುವ ಬಡತನದ ಕಾರಣದಿಂದ, ಶಿಕ್ಷಣ ಪೂರೈಸಿ ಶಿಕ್ಷಕನಾಗಬೇಕು ಎಂಬ ಬಯಕೆ ಕನಸಾಗಿಯೇ ಉಳಿಯಿತು. ಇದೀಗ ಆರು ಮಕ್ಕಳ ತಂದೆ ಹಾಗೂ ಎಂಟು ಮಕ್ಕಳ ತಾತ, ವಾರದ ಆರು ದಿನವೂ ನಿಯತ್ತಿನಿಂದ ಶಾಲೆಗೆ ತೆರಳುತ್ತಾರೆ. ಪತ್ನಿಯ ಸಾವಿನ ನೋವು ಮರೆಯಲು ಕೂಡಾ ಇವರಿಗೆ ಶಿಕ್ಷಣ ಸಂಗಾತಿಯಾಗಿದೆ.

ಕಾಲಭೈರವ ಹೈಯರ್ ಸೆಕೆಂಡರಿ ಶಾಲೆಯಲ್ಲಿ 200 ಮಕ್ಕಳ ಒಡನಾಟ ಇವರಿಗೆ ಒಂಟಿ ಕೋಣೆಯ ಮನೆಗಿಂತ ಹೆಚ್ಚು ಆಪ್ಯಾಯಮಾನ. ಮಳೆ ಬಂದರೆ ಸೋರುವ ಹಾಗೂ ಪದೇ ಪದೇ ವಿದ್ಯುತ್ ಕಡಿತದ ಸಮಸ್ಯೆ ಇರುವ ಮನೆಗಿಂತ ಈ ಚಿರಯುವಕನಿಗೆ ಶಾಲೆಯೇ ಇಷ್ಟ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ 250 ಕಿಲೋಮೀಟರ್ ದೂರದ ಸ್ಯಾಂಜಿಯಾ ಜಿಲ್ಲೆಯಲ್ಲಿ ದುರ್ಗಾ ವಾಸವಾಗಿದ್ದಾರೆ.

"ನನ್ನ ದುಃಖ ಮರೆಯಲು ನಾನು ಶಾಲೆಗೆ ಬರುತ್ತೇನೆ" ಎನ್ನುವ ಕಮಿಗೆ ದೇಶದ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. 14-15ರ ಮಕ್ಕಳ ಜತೆಗೆ ತರಗತಿಯಲ್ಲಿ ಪಾಠ ಕೇಳುತ್ತಾರೆ. ಬೆಟ್ಟದ ಮೇಲಿನ ಮನೆಯನ್ನು ಬಿಟ್ಟು ಎಲ್ಲ ಮಕ್ಕಳೂ ಬೇರೆಡೆ ತೆರಳಿದ ಬಳಿಕ ಮೊದಲು ಕಹರೇ ಪ್ರಾಥಮಿಕ ಶಾಲೆಗೆ ಹೋಗಿ ಓದು- ಬರಹ ಕಲಿತರು. ಹನ್ನೊಂದು ವರ್ಷಗಳಲ್ಲಿ 5ನೇ ತರಗತಿ ಉತ್ತೀರ್ಣರಾದರು. ಇದು ಏಳೆಂಟು ವರ್ಷ ಹಿಂದಿನ ಮಾತು.

ಕಾಲಭೈರವೇಶ್ವರ ಶಾಲೆಯ ಶಿಕ್ಷಕ ಡಿ.ಆರ್.ಕೋಯಿರಾಲಾ, ಕಮಿಯನ್ನು ತಮ್ಮ ಶಾಲೆಗೆ ಕರೆದರು. ಪಸ್ತಕ ಹಾಗೂ ಯೂನಿಫಾರ್ಮ್ ತೆಗೆಸಿಕೊಟ್ಟರು. "ನನ್ನ ತಂದೆಯ ವಯಸ್ಸಿನವರಿಗೆ ಪಾಠ ಮಾಡುವುದು ವಿಶಿಷ್ಟ ಅನುಭವ" ಎಂದು ಕೋಯಿರಾಲಾ ಹೇಳುತ್ತಾರೆ. ಶಾಲಾ ವೇಳೆಯಲ್ಲಿ ಆಹಾರದ ವ್ಯವಸ್ಥೆ ಇಲ್ಲ. ಅಂದರೆ ಬೆಳಗ್ಗೆ ಅನ್ನ ಮತ್ತು ಹಸಿರು ತರಕಾರಿಯ ಗುಂಡ್ರುಕ್ ಸೇವಿಸಿ ಬಂದರೆ ರಾತ್ರಿವರೆಗೂ ಹಸಿವಿನಲ್ಲೇ ಕಳೆಯಬೇಕು. ಇದೀಗ 10ನೇ ತರಗತಿಯಲ್ಲಿರುವ ಸಹಪಾಠಿಗಳು ಇವರನ್ನು ತಂದೆ ಎಂದು ಕರೆಯುತ್ತಾರೆ. ಆದರೆ ಸಹಪಾಠಿಗಳ ಜತೆ ಇತರರಂತೆ ವಾಲಿಬಾಲ್ ಸೇರಿ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾಯುವವರೆಗೂ ಕಲಿಯುವ ಹಂಬಲ ಅವರದ್ದು. ಕಲಿಕೆಗೆ ವಯಸ್ಸು ಅಡ್ಡಿ ಎಂಬ ಮನೋಭಾವವನ್ನು ತೊಡೆದುಹಾಕುವುದು ಅವರ ಬಯಕೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News