×
Ad

ಹೊಸ ವಿಮಾನಯಾನ ನೀತಿಗೆ ಸಂಪುಟ ಅಸ್ತು

Update: 2016-06-15 23:58 IST

ಹೊಸದಿಲ್ಲಿ, ಜೂ.15: ವಿಮಾನಯಾನ ಸಂಸ್ಥೆಗಳ ಸಾಗರೋತ್ತರ ಹಾರಾಟ ನಿಯಮ ಸರಳೀಕರಣ, ಪ್ರಾದೇಶಿಕ ವಿಮಾನ ಸಂಪರ್ಕ ಹೆಚ್ಚಳ ಹಾಗೂ ಹೆಚ್ಚು ಜನರು ವಿಮಾನ ಬಳಸುವಂತೆ ಉತ್ತೇಜನವನ್ನು ಬಯಸಿದ್ದ ಬಹು ವಿಳಂಬಿತ ನಾಗರಿಕ ವಿಮಾನ ಯಾನದ ಹೊಸ ನೀತಿಯೊಂದಕ್ಕೆ ಕೇಂದ್ರ ಸಂಪುಟವು ಬುಧವಾರ ಬೆಳಗ್ಗೆ ಅನುಮೋದನೆ ನೀಡಿದೆ.

ಸಣ್ಣ ನಗರಗಳು ಹಾಗೂ ಪಟ್ಟಣಗಳ ನಡುವಿನ ಒಂದು ತಾಸಿನೊಳಗಿನ ಪ್ರಯಾಣಕ್ಕೆ ರೂ.2,500ರ ಶುಲ್ಕ ಮಿತಿಯನ್ನು ನೀತಿಯು ಪ್ರಸ್ತಾವಿಸಿದೆ. ಪ್ರಯಾಣ ದರವನ್ನು ಅಗ್ಗಗೊಳಿಸಿ, ಹೆಚ್ಚು ಜನರು ವಿಮಾನ ಯಾನ ಕೈಗೊಳ್ಳುವಂತಹ ವ್ಯವಸ್ಥೆಯೊಂದನ್ನು ಸರಕಾರ ಯೋಜಿಸಿದೆ. ವಿಮಾನ ಸಂಸ್ಥೆಗಳಿಗೆ ಸಹಾಯ ಹಾಗೂ ಉತ್ತೇಜಕಗಳನ್ನು ನೀಡಿ ಸಣ್ಣ ಪಟ್ಟಣಗಳು ಹಾಗೂ ನಗರಗಳ ನಡುವಿನ ಮಾರ್ಗಗಳಲ್ಲಿ ಸಂಪರ್ಕ ಹೆಚ್ಚಿಸುವುದನ್ನು ನೀತಿ ಪ್ರಸ್ತಾವಿಸಿದೆ.

ಸರಕಾರವು ದೇಶಿ ವಲಯದಲ್ಲಿ 2022ರೊಳಗೆ ವರ್ಷಕ್ಕೆ 30 ಕೋಟಿ ಹಾಗೂ 2025ರೊಳಗೆ 50 ಕೋಟಿ ವಿಮಾನ ಟಿಕೆಟ್‌ಗಳ ಮಾರಾಟವನ್ನು ಕಾಣುವ ಆಶಾವಾದದಲ್ಲಿದೆ. ಅಂತಹ ಮಾರ್ಗಗಳಲ್ಲಿ ಹಾರಾಟದ ಮೂಲಕ ವಿಮಾನ ಸಂಸ್ಥೆಗಳಿಗಾಗುವ ನಷ್ಟದ ಶೇ.80ನ್ನು ಕೇಂದ್ರವು ಮರುಪಾವತಿಸುವುದೆಂದು ಅದು ಹೇಳಿದೆ.

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಾರ್ಷಿಕ ಟಿಕೆಟ್ ಮಾರಾಟದ ಗುರಿ 2027ರೊಳಗೆ 20 ಕೋಟಿಯಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟಗಳಲ್ಲಿ ಪ್ರಾದೇಶಿಕ ಸಂಪರ್ಕ ನಿಧಿಗೆ ಶೇ.2 ತೆರಿಗೆ ವಿಧಿಸುವ ಪ್ರಸ್ತಾವ ಕರಡು ನೀತಿಯಲ್ಲಿದೆ.

20 ವಿಮಾನಗಳಿರುವ ಹೊಸ ವಿಮಾನ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಡೆಸಲು ಅವಕಾಶ ನೀಡುವ ಪ್ರಸ್ತಾವವೊಂದನ್ನು ವಾಯು ಯಾನ ಉದ್ಯಮವು ನೀತಿಯಲ್ಲಿ ಎದುರು ನೋಡುತ್ತಿದೆ. ಪ್ರಸ್ತುತ, ಕೇವಲ 20 ವಿಮಾನ ಗಳಿಸುವುದು ಮಾತ್ರವಲ್ಲದೆ, ದೇಶೀಯ ಹಾರಾಟದಲ್ಲಿ ಕನಿಷ್ಠ 5 ವರ್ಷ ಅನುಭವವಿರುವ ವಿಮಾನ ಸಂಸ್ಥೆಗಳಿಗಷ್ಟೇ ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಅವಕಾಶವಿದೆ.

ಈ ನೀತಿಯ ಬಗ್ಗೆ ಕಳೆದ 18 ತಿಂಗಳುಗಳಲ್ಲಿ ವಿವಿಧ ಸಚಿವಾಲಯಗಳ ನಡುವೆ ಹಲವು ಸುತ್ತುಗಳ ಚರ್ಚೆ ನಡೆದಿದೆ. 2015ರಲ್ಲಿ ಈ ಕರಡು ನೀತಿಯನ್ನು ಪರಿಷ್ಕರಿಸಲಾಗಿತ್ತು.


ಹೊಸ ವಾಯುಯಾನ ನೀತಿಯ ಮುಖ್ಯಾಂಶಗಳು

1. ಯಾವುದೇ ಸಂದರ್ಭದಲ್ಲಿ ಟಿಕೆಟ್ ರದ್ದತಿ ಶುಲ್ಕ ಮೂಲ ಪ್ರಯಾಣದರಕ್ಕಿಂತ ಹೆಚ್ಚಾಗಬಾರದು. ಪ್ರಯಾಣಿಕರ ಹಣ ವಾಪಸಾತಿಗೆ ಯಾವುದೇ ಶುಲ್ಕ ವಿಧಿಸಬಾರದು.

2. ವಿಮಾನ ರದ್ದಾದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆ ವಿಧಿಸಿದ್ದ ಎಲ್ಲ ಕಾಯ್ದೆಬದ್ಧ ತೆರಿಗೆಗಳನ್ನು ಹಿಂದಿರುಗಿಸಬೇಕು.

3. ಚೆಕ್ಡ್-ಇನ್ ಬ್ಯಾಗೇಜ್ ಪ್ರಕರಣಗಳಲ್ಲಿ 15 ಕಿ.ಗ್ರಾಂ ಗಿಂತ ಹೆಚ್ಚಿನ ಪ್ರತೀ ಕಿ.ಗ್ರಾಂ ತೂಕಕ್ಕೆ 20 ಕಿ.ಗ್ರಾಂ ವರೆಗೆ ರೂ. 100 ಶುಲ್ಕ ವಿಧಿಸಬಹುದು. ಈಗ ಪ್ರತೀ ಹೆಚ್ಚುವರಿ ಕಿ.ಗ್ರಾಂ ಗೆ ರೂ. 300 ವಿಧಿಸಲಾಗುತ್ತಿದೆ.

4. ಆದಾಗ್ಯೂ, 20 ಕಿ.ಗ್ರಾಂಗೆ ಹೆಚ್ಚಿನ ಬ್ಯಾಗೇಜ್‌ಗೆ ಯಾವುದೇ ಶುಲ್ಕ ವಿಧಿಸಲು ವಿಮಾನ ಯಾನ ಸಂಸ್ಥೆ ಮುಕ್ತವಾಗಿದೆ.

5. ವಿಮಾನದ ಸಾಮರ್ಥ್ಯಕ್ಕಿಂತ ಹೆಚ್ಚು ಟಿಕೆಟ್ ನೀಡಿದ್ದ ಸಂದರ್ಭದಲ್ಲಿ ಬಾಕಿಯುಳಿದ ಪ್ರಯಾಣಿಕರಿಗೆ ಹೊಟೇಲ್ ಕೊಠಡಿಗಳನ್ನು ನಿರಾಕರಿಸಿದರೆ, ನಿರ್ದಿಷ್ಟ ಶರ್ತಗಳ ಮೇರೆಗೆ ರೂ. 20 ಸಾವಿರದ ವರೆಗೆ ಪರಿಹಾರವನ್ನು ಸರಕಾರ ಪ್ರಸ್ತಾವಿಸಿದೆ.

6. ವಿಮಾನದ ನಿಗದಿತ ಪ್ರಯಾಣದ ಕನಿಷ್ಠ 2 ವಾರ ಮೊದಲು ವಿಮಾನ ರದ್ದಾದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದರೆ ಪರಿಹಾರ ಪಾವತಿಸಬೇಕಾಗಿಲ್ಲ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಮಾನ ಸಂಸ್ಥೆ ಬೇರೆ ವಿಮಾನದ ವ್ಯವಸ್ಥೆ ಮಾಡಿದರೂ ಪರಿಹಾರ ನೀಡಬೇಕಾಗಿಲ್ಲ. ಇದು 2 ವಾರಗಳಿಗಿಂತ ಕಡಿಮೆ ಹಾಗೂ ವಿಮಾನ ಹೊರಡುವ 24 ತಾಸು ಮೊದಲು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದರೂ ಶರ್ತಗಳನುಸಾರ ಅನ್ವಯವಾಗುತ್ತದೆ.

7. ವಿಮಾನಗಳು 1 ತಾಸಿನ ತಡೆಯ ಅವಧಿಯಿದ್ದಾಗ, ಪ್ರಯಾಣ ರದ್ದತಿಗೆ ರೂ. 5 ಸಾವಿರ ಅಥವಾ ಒಂದು ಕಡೆಯ ಮೂಲ ಪ್ರಯಾಣದರ ಹಾಗೂ ಇಂಧನವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಹಾರವಾಗಿ ನೀಡಬೇಕು.

8. ಇದು ವಿಮಾನದ ತಡೆಯ ಅವಧಿ 1ರಿಂದ 2 ತಾಸು ಇದ್ದಾಗ 7,500 ಆಗುತ್ತದೆ. 2 ತಾಸುಗಳಿಗಿಂತಲೂ ಹೆಚ್ಚು ತಡೆಯಿದ್ದಾಗ ಪರಿಹಾರದ ಮೊತ್ತ ರೂ. 10 ಸಾವಿರವಾಗುತ್ತದೆ.

9. ಪರಿಹಾರ ಮೊತ್ತವನ್ನು ವಿಮಾನ ಸಂಸ್ಥೆಗಳೇ ಇರಿಸಿಕೊಳ್ಳುವ ಆಯ್ಕೆ ಪ್ರಯಾಣಿಕರದಾಗಿರುತ್ತದೆ.

10. ಟ್ರಾವೆಲ್ ಏಜೆಂಟ್ ಅಥವಾ ಮೋರ್ಟಲ್ ಮೂಲಕ ಖರೀದಿಸಲಾದ ಟಿಕೆಟ್‌ಗಳ ಹಣ ಮರುಪಾವತಿಯ ಹೊಣೆ ವಿಮಾನಸಂಸ್ಥೆಯದೇ ಆಗಿದೆ.

11. ಮರು ಪಾವತಿ ಪ್ರಕ್ರಿಯೆ ದೇಶೀಯ ಯಾನದ ಸಂದರ್ಭದಲ್ಲಿ 15 ಕೆಲಸದ ದಿನಗಳೊಳಗೆ ಹಾಗೂ ಅಂತಾರಾಷ್ಟ್ರೀಯ ಯಾನದ ಸಂದರ್ಭದಲ್ಲಿ 30 ಕೆಲಸದ ದಿನದೊಳಗೆ ಪೂರೈಸಬೇಕು.

12. ವಿದೇಶಿ ವಿಮಾನ ಸಂಸ್ಥೆಗಳಿಗೆ ಹಣ ಮರು ಪಾವತಿಯು ಸಂಬಂಧಿಸಿದ ದೇಶಗಳ ನಿಯಮಗಳಿಗೆ ಒಳಪಟ್ಟಿರಬೇಕು. ಮರುಪಾವತಿಯ ವಿಧಾನವು ಭಾರತೀಯ ನಿಯಮಗಳಿಗೊಳಪಟ್ಟಿರುತ್ತವೆ.

13. ವಿಮಾನಸಂಸ್ಥೆಗಳು ಸ್ಟ್ರೆಜರ್‌ಗಳ ಮುಂಗಡ ಬೇಡಿಕೆಗಾಗಿ ವಿಧಾನವನ್ನು ಅಭಿವೃದ್ಧಿಪಡಿಸಬೇಕು ಹಾಗೂ ಅದನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News