×
Ad

ಉಡ್ತಾ ಪಂಜಾಬ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ : ಆಮಿರ್ ಖಾನ್ ಮನವಿ

Update: 2016-06-16 15:15 IST

ನವದೆಹಲಿ: `ಉಡ್ತಾ ಪಂಜಾಬ್' ಚಿತ್ರದ ಆನ್ ಲೈನ್ ಸೋರಿಕೆ ವಿಚಾರವಾಗಿ ತಮ್ಮ ಕಳವಳ ವ್ಯಕ್ತಪಡಿಸಿರುವ ನಟ ಆಮಿರ್ ಖಾನ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ, ಎಂದು ಜನರಿಗೆ ಮನವಿ ಮಾಡಿದ್ದಾರೆ.
``ನಾವು ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸೋಣ. ನಕಲಿ ವೀಡಿಯೋ ತಯಾರಕರನ್ನು ಸೋಲಿಸೋಣ,'' ಎಂದು ಆಮಿರ್ ಟ್ವೀಟ್ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರ, ಕುಸ್ತಿಪಟು ಮಹಾವೀರ್ ಫೋಗಟ್ ಜೀವನಾಧರಿತ `ದಂಗಲ್' ಚಿತ್ರೀಕರಣಕ್ಕಾಗಿ ಪ್ರಸಕ್ತ ಲುಧಿಯಾನದಲ್ಲಿರುವ ಆಮಿರ್, ಈ ಹಿಂದೆ ಸೆನ್ಸಾರ್ ಮಂಡಳಿ ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಡೆ ಕತ್ತರಿ ಪ್ರಯೋಗ ಮಾಡಲು ಆದೇಶಿಸಿರುವುದರ ವಿರುದ್ಧವೂ ಕೆಂಡ ಕಾರಿದ್ದರು.
``ಇದು ದುರದೃಷ್ಟಕರ. ನನಗೆ ಗೊತ್ತಿರುವ ಹಾಗೆ ಚಿತ್ರ ಅಮಲು ಪದಾರ್ಥ ವ್ಯಸನದ ಕಥೆ ಹೊಂದಿದೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶ ಹೊಂದಿದೆ. ಈ ಚಿತ್ರದಲ್ಲಿ ಕತ್ತರಿ ಪ್ರಯೋಗ ಮಾಡುವಂತಹುದ್ದು ಏನೂ ಇಲ್ಲ ಎಂದು ನನಗನಿಸುತ್ತದೆ,''ಎಂದು ಆಗ ಆಮಿರ್ ಹೇಳಿದ್ದರು.
ಉಡ್ತಾ ಪಂಜಾಬ್ ಚಿತ್ರದ ಪ್ರಮುಖ ತಾರಾಗಣದಲ್ಲಿರುವ ಶಾಹಿದ್ ಕಪೂರ್, ಆಲಿಯಾ ಭಟ್ ಮತ್ತು ಚಿತ್ರರಂಗದ ಇತರರು ಕೂಡ  ಆನ್ ಲೈನ್ ಮೂಲಕ ಚಿತ್ರ ವೀಕ್ಷಿಸದೆ ತಮ್ಮ ಎರಡು ವರ್ಷದ ಶ್ರಮವನ್ನು ವ್ಯರ್ಥಗೊಳಿಸದಂತೆ ಚಿತ್ರ ರಸಿಕರಿಗೆ ಮನವಿ ಮಾಡಿದ್ದಾರೆ.
ಬುಧವಾರ ಟೊರ್ರೆಂಟ್ ಡೌನ್ ಲೋಡ್ ಗಳಲ್ಲಿ ಚಿತ್ರ ಇಂಟರ್ ನೆಟ್ ಬಳಕೆದಾರರಿಗೆ ಲಭ್ಯವಿದ್ದರೂ  ಸ್ವಲ್ಪವೇ ಹೊತ್ತಿನಲ್ಲಿ ಡೌನ್ ಲೋಡ್ ಲಿಂಕ್ ಗಳನ್ನು `ಕಾಪಿರೈಟ್ ದೂರಿನನ್ವಯ' ತೆಗೆದು ಹಾಕಲಾಯಿತು ಎಂದು ಹೇಳಲಾಯಿತು.
ಈ ಹಿಂದೆ ಮರಾಠಿ ಚಿತ್ರ ಸೈರಾತ್ ಮತ್ತು ನವಾಝುದ್ದೀನ್ ಸಿದ್ದೀಖಿ ಅಭಿನಯದ ಮಂಝಿ ಕೂಡ ಆನ್ ಲೈನ್ ನಲ್ಲಿ ಸೋರಿಕೆಯಾಗಿ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News