×
Ad

ಇಷ್ರತ್ ಜಹಾನ್ ಪ್ರಕರಣ : ಪ್ರಮಾಣಪತ್ರಗಳ ಕುರಿತಂತೆ ನಕಲಿ ವಿವಾದ ಸೃಷ್ಟಿ: ಚಿದಂಬರಂ

Update: 2016-06-16 18:52 IST

ಹೊಸದಿಲ್ಲಿ,ಜೂ.16: ಇಷ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎರಡು ಪ್ರಮಾಣಪತ್ರಗಳ ಕುರಿತಂತೆ ಮೋದಿ ಸರಕಾರವು ‘ನಕಲಿ ವಿವಾದ’ವೊಂದನ್ನು ಸೃಷ್ಟಿಸುತ್ತಿದೆ ಮತ್ತು ನಾಪತ್ತೆಯಾಗಿರುವ ಕಡತಗಳ ಕುರಿತಂತೆ ‘ತಿರುಚಿದ’ ವರದಿಯೊಂದನ್ನು ಸಿದ್ಧಗೊಳಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಗುರುವಾರ ಆರೋಪಿಸಿದ್ದಾರೆ.
ಇಷ್ರತ್ ಪ್ರಕರಣಕ್ಕೆ ಸಂಬಂಧಿಸಿದ ನಾಪತ್ತೆಯಾಗಿರುವ ಕಡತಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿರುವ ಸಮಿತಿಯು ಸಾಕ್ಷಿಯೋರ್ವನನ್ನು ಏನು ಹೇಳಬೇಕು ಎಂದು ತಿಳಿಸಿತ್ತು ಎಂಬ ವರದಿಯ ಹಿನ್ನೆಲೆಯಲ್ಲಿ ಹೇಳಿಕೆಯನ್ನು ನೀಡಿರುವ ಚಿದಂಬಂರಂ, ಪ್ರಕರಣದಲ್ಲಿ ಕೇಂದ್ರ ಸರಕಾರವು ಸಲ್ಲಿಸಿರುವ ಎರಡು ಪ್ರಮಾಣಪತ್ರಗಳ ಕುರಿತಂತೆ ಎನ್‌ಡಿಎ ಸರಕಾರವು ಸೃಷ್ಟಿಸಿರುವ ‘ನಕಲಿ ವಿವಾದ’ವನ್ನು ಮಾಧ್ಯಮ ವರದಿಯು ಬಯಲುಗೊಳಿಸಿದೆ ಎಂದು ತಿಳಿಸಿದ್ದಾರೆ.
ವಿಚಾರಣಾಧಿಕಾರಿಯ ಸುಳ್ಳು ವರದಿಯೂ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ ಎನ್ನುವುದು ಒಟ್ಟಾರೆಯಾಗಿ ಈ ಕಟ್ಟುಕಥೆಯ ನೈತಿಕ ಪಾಠವಾಗಿದೆ. ಇಷ್ರತ್ ಜಹಾನ್ ಮತ್ತು ಇತರ ಮೂವರು ನಿಜವಾದ ಎನ್‌ಕೌಂಟರ್‌ಲ್ಲಿ ಕೊಲ್ಲಲ್ಪಟ್ಟರೋ ನಕಲಿ ಎನಕೌಂಟರ್‌ನಲ್ಲೋ ಎನ್ನುವುದು ಇಲ್ಲಿ ಮುಖ್ಯ ವಿಷಯವಾಗಿದೆ ಮತ್ತು 2013,ಜುಲೈನಿಂದ ವಿಚಾರಣೆ ಬಾಕಿಯಾಗಿರುವ ಪ್ರಕರಣದ ವಿಚಾರಣೆಯು ಮಾತ್ರ ಸತ್ಯವನ್ನು ಬೆಳಕಿಗೆ ತರುತ್ತದೆ ಎಂದಿದ್ದಾರೆ.
ನಾಪತ್ತೆಯಾಗಿರುವ ಐದು ದಾಖಲೆಗಳಲ್ಲಿ ನಾಲ್ಕನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಗೃಹ ಕಾರ್ಯದರ್ಶಿ ಬಿ.ಕೆ.ಪ್ರಸಾದ್ ನೇತೃತ್ವದ ಏಕಸದಸ್ಯ ವಿಚಾರಣಾ ಸಮಿತಿಯು ಬುಧವಾರ ಸಲ್ಲಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಎರಡು ಪ್ರಮಾಣಪತ್ರಗಳ ಕುರಿತು ತನ್ನ ನಿಲುವನ್ನು ಮಾಧ್ಯಮ ವರದಿಯು ಎತ್ತಿ ಹಿಡಿದಿದೆ ಎಂದು ಚಿದಂಬಂರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News