ಹಳೆಯ ಎಫ್-16 ಖರೀದಿಸಿದರೂ ಅಮೆರಿಕದ ಅನುಮೋದನೆ ಅಗತ್ಯ
Update: 2016-06-16 23:41 IST
ವಾಶಿಂಗ್ಟನ್, ಜೂ. 16: ಜೋರ್ಡಾನ್‌ನಿಂದ ಬಳಸಿದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸುವ ಪಾಕಿಸ್ತಾನದ ಹಾದಿ ಸುಗಮವಾಗಿಲ್ಲ. ಯಾಕೆಂದರೆ, ಅದಕ್ಕೆ ಅಮೆರಿಕದ ಅನುಮೋದನೆ ಅಗತ್ಯವಾಗಿದೆ ಹಾಗೂ ಅಂತಿಮ-ಬಳಕೆದಾರನ ಮೇಲೆ ನಿಗಾ ನಿಯಮಾವಳಿಗೆ ಪಾಕಿಸ್ತಾನ ಒಳಪಡಬೇಕಿದೆ.
‘‘ಪಾಕಿಸ್ತಾನ ಬೇರೆಲ್ಲಿಂದಾದರೂ ಬಳಸಿದ ಎಫ್-16 ವಿಮಾನಗಳನ್ನು ಖರೀದಿಸಬಹುದು ಎನ್ನುವ ವರದಿಗಳ ಬಗ್ಗೆ ನಾವು ಊಹಾಪೋಹ ನಡೆಸುವುದಿಲ್ಲ. ಆದರೆ ಅಮೆರಿಕದ ಕಾನೂನಿನ ಪ್ರಕಾರ, ಯಾವುದೇ ಮೂರನೆ ದೇಶವೊಂದಕ್ಕೆ ಅಮೆರಿಕ ಮೂಲದ ರಕ್ಷಣಾ ಸಾಮಗ್ರಿಗಳ ಯಾವುದೇ ಮರು ಹಸ್ತಾಂತರಕ್ಕೆ ಅಮೆರಿಕ ಸರಕಾರದ ಅನುಮೋದನೆ ಅಗತ್ಯವಾಗಿದೆ. ಅದಕ್ಕೆ ಕಾಂಗ್ರೆಸ್‌ನ ಅಧಿಸೂಚನೆಯೂ ಬೇಕಾಗಬಹುದು ಹಾಗೂ ಅದು ಅಂತಿಮ ಬಳಕೆದಾರನ ಮೇಲೆ ನಿಗಾ ಇಡುವ ನಿಯಮಾವಳಿಗೂ ಒಳಪಡುತ್ತದೆ’’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.