ಅಲೆಪ್ಪೊದಲ್ಲಿ 48 ಗಂಟೆಗಳ ಯುದ್ಧವಿರಾಮ: ರಶ್ಯ
Update: 2016-06-16 23:42 IST
ಬೆರೂತ್, ಜೂ. 16: ಸಿರಿಯದ ಉತ್ತರದ ನಗರ ಅಲೆಪ್ಪೊದಲ್ಲಿ 48 ಗಂಟೆಗಳ ಯುದ್ಧ ವಿರಾಮವನ್ನು ಘೋಷಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.
ಕಳೆದ ಹಲವಾರು ತಿಂಗಳುಗಳಲ್ಲಿ ಅಲೆಪ್ಪೊದಲ್ಲಿ ಭೀಕರ ಕಾಳಗ ಮತ್ತು ಬಾಂಬ್ ದಾಳಿ ನಡೆಯುತ್ತಿದೆ. ಉಭಯ ಬಣಗಳಲ್ಲೂ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ ಕಳೆದ ಆನಂತರ ಯುದ್ಧವಿರಾಮ ಜಾರಿಗೆ ಬಂದಿದೆ ಎಂದು ರಶ್ಯ ಹೇಳಿದೆ.
ಆದಾಗ್ಯೂ, ಗುರುವಾರ ಮುಂಜಾನೆ ನಗರದಲ್ಲಿ ಅಲ್ಲಲ್ಲಿ ಶೆಲ್ ದಾಳಿಗಳು ನಡೆದವು ಎಂದು ಪ್ರತಿಪಕ್ಷ ಕಾರ್ಯಕರ್ತರು ವರದಿ ಮಾಡಿದ್ದಾರೆ. ಅಧ್ಯಕ್ಷ ಬಶರ್ ಅಸಾದ್‌ಗೆ ನಿಷ್ಠೆ ಹೊಂದಿರುವ ಪಡೆಗಳಿಂದ ಅಲೆಪ್ಪೊದ ಹಲವು ಭಾಗಗಳನ್ನು ಬಂಡುಕೋರರು 2012ರಲ್ಲಿ ವಶಪಡಿಸಿಕೊಂಡಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ರಶ್ಯದ ವಾಯದಾಳಿಯ ಬೆಂಬಲದಿಂದ ಅಸಾದ್ ಪಡೆಗಳು ನಗರದ ಬಂಡುಕೋರರ ನಿಯಂತ್ರಣದ ಪ್ರದೇಶಗಳನ್ನು ಬಹುತೇಕ ಸುತ್ತುವರಿದಿವೆ.