ಹಬೆಯಾಡುವ ಬಿಸಿಬಿಸಿ ಕಾಫಿ... ಅಪಾಯ!!

Update: 2016-06-16 18:15 GMT

ಬಿಸಿ ಕಾಫಿ ಅಥವಾ ಇತರ ಪಾನೀಯವನ್ನು ಬಿಸಿಬಿಸಿಯಾಗಿ ಸೇವಿಸುವುದು ಕ್ಯಾನ್ಸರ್ ತರಿಸುತ್ತದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಸಾಮಾನ್ಯ ಉಷ್ಣತೆಯಿರುವ ಬಿಸಿಯಿಂದ ಏನೂ ಪರಿಣಾಮವಾಗುವುದಿಲ್ಲ ಎಂದೂ ಹೇಳಿದೆ.

ಅಲ್ಲದೆ ಕಾಫಿಯಿಂದ ಲಿವರ್, ಸ್ತನ, ಗರ್ಭಾಶಯದ ಕ್ಯಾನ್ಸರ್ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಥವಾ ಐಎಆರ್‌ಸಿ ಹೇಳಿದೆ. ಆದರೆ 65 ಡಿಗ್ರೀ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಯಾಗಿರಬಾರದು.

1,000ಕ್ಕೂ ಅಧಿಕ ಅಧ್ಯಯನಗಳನ್ನು ವಿಶ್ಲೇಷಿಸಿದ ಮೇಲೆ ಪಾನೀಯಗಳನ್ನು ಅತಿ ಬಿಸಿಯಾಗಿ ಸೇವಿಸುವುದು ಮಾನವನಲ್ಲಿ ಕ್ಯಾನ್ಸರ್ ಬರಲು ಕಾರಣವಾಗಲಿದೆ ಎಂದು ಅಧ್ಯಯನ ಹೇಳಿದೆ. ಯಾವ ಪಾನೀಯ ಎನ್ನುವುದು ಮುಖ್ಯವಲ್ಲ. ಎಷ್ಟು ಉಷ್ಣತೆಯಲ್ಲಿ ಸೇವಿಸಲಾಗಿದೆ ಎನ್ನುವುದು ಮುಖ್ಯ ಎಂದು ಅಧ್ಯಯನಕಾರ ಡಾನಾ ಲೂಮಿಸ್ ಹೇಳಿದ್ದಾರೆ. ಚೀನಾ, ಇರಾನ್, ಟರ್ಕಿ ಮತ್ತು ದಕ್ಷಿಣ ಅಮೆರಿಕದಲ್ಲಿ ನಡೆಸಲಾದ ಅಧ್ಯಯನದಲ್ಲಿ ಚಹಾವನ್ನು ಅತೀ ಬಿಸಿಯಾಗಿ ಸೇವಿಸಿದಾಗ ಆಸ್ಪಗಲ್ ಕ್ಯಾನ್ಸರ್ ಸಾಧ್ಯತೆ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಐಎಆರ್‌ಸಿ ಹೇಳಿದೆ. 65-70 ಡಿಗ್ರಿ ಸೆಲ್ಸಿಯಸ್ ಮೀರಿದ ಪಾನೀಯ ಸೇವಿಸಿದ ಇಲಿಗಳಲ್ಲಿ ಆಸ್ಪಗಲ್ ಗಡ್ಡೆಗಳು ಬೆಳೆದಿರುವುದನ್ನು ಪ್ರಾಯೋಗಿಕ ಅಧ್ಯಯನ ಸಾಬೀತು ಮಾಡಿದೆ.

ಆದರೆ ಕಾಫಿ ಇಷ್ಟಪಡುವವರಿಗೆ ಉತ್ತಮ ಸುದ್ದಿಯೂ ಇದೆ. ಸಾಮಾನ್ಯ ಉಷ್ಣತೆಯಲ್ಲಿ ಕಾಫಿ ಸೇವಿಸುವುದರಿಂದ ಗರ್ಭಾಶಯದ, ಲಿವರ್ ಮತ್ತು ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗಲಿದೆ. ಅಧ್ಯಯನಗಳಲ್ಲಿ ಕಾಫಿಯಲ್ಲಿ ಬಲಿಷ್ಠ ಆಂಟಿಆಕ್ಸಿಡಂಟ್ ಪರಿಣಾಮಗಳು ಇರುವುದೂ ಪತ್ತೆಯಾಗಿದೆ. ಹೀಗಾಗಿ ಅಧಿಕ ಉಷ್ಣತೆಯ ಕಾರಣದಿಂದಲೇ ಕಾಫಿಯಿಂದ ಕ್ಯಾನ್ಸರ್ ಬರುವ ಅಪಾಯವಿರುವುದು ಎಂದು ತಿಳಿಯಲಾಗಿದೆ. ಮುಚ್ಚಿದ ಲೋಹದ ಕಂಟೇನರಲ್ಲಿ ನೇರವಾಗಿ ಗಂಟಲಿಗೆ ಬಿಸಿ ಕಾಫಿ ಸುರಿದುಕೊಳ್ಳುವುದು ಅಪಾಯಕಾರಿ. ಹಾಗೆಯೇ ಕ್ಯಾನ್ಸರ್ ಮತ್ತು ಇತರ ಬಿಸಿ ಪಾನೀಯಗಳ ನಡುವೆಯೂ ಸಂಬಂಧವಿರಬಹುದು ಎನ್ನಲಾಗಿದೆ.

ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ ಸೇವಿಸುವ ಹಾಲಿನ ಚಹಾವೂ ಬಿಸಿಯಾಗಿದ್ದಲ್ಲಿ ಅಪಾಯವಿದೆ. ಬಿಸಿ ಚಹಾ ಮತ್ತು ಬಿಸಿ ಪಾನೀಯಗಳನ್ನು ಸೇವಿಸುವುದೂ ಅಪಾಯಕಾರಿ. ಹೀಗಾಗಿ ಅತೀ ಬಿಸಿಯಾದ ಯಾವುದೇ ಪಾನೀಯವು ಮಾನವನಿಗೆ ಕಾರ್ಸಿನೋಜೆನಿಕ್ ಎಂದು ಅಧ್ಯಯನ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ ವರ್ಷ ಆಹಾರದಿಂದ ಬರುವ ಕ್ಯಾನ್ಸರಿಗೆ ವಿಶ್ವದಾದ್ಯಂತ ಬಲಿಯಾಗುವ ಒಟ್ಟು 8 ಲಕ್ಷ ಮಂದಿಯಲ್ಲಿ 4 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News