‘ಉಡ್ತಾ ಪಂಜಾಬ್’ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ನಕಾರ
ಹೊಸದಿಲ್ಲಿ, ಜೂ.16: ಬಾಲಿವುಡ್ ಚಿತ್ರ ‘ಉಡ್ತಾ ಪಂಜಾಬ್’ನ ಬಿಡುಗಡೆಗೆ ಅವಕಾಶ ನೀಡಿರುವ ಬಾಂಬೆ ಹೈಕೋರ್ಟ್‌ನ ಆದೇಶವೊಂದರಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಹೈಕೋರ್ಟ್ ತೀರ್ಪಿನ ಅನುಪಸ್ಥಿತಿಯಲ್ಲಿ ತಾನು ಈ ವಿಷಯದ ಅರ್ಹತೆಯ ಬಗ್ಗೆ ಪರಿಶೀಲಿಸಲು ಹೋಗುವುದಿಲ್ಲವೆಂದು ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯಲ್ ಹಾಗೂ ಎಲ್. ಗಗಸ್ವರ ರಾವ್ ಅವರನ್ನೊಳಗೊಂಡ ರಜಾಕಾಲದ ಪೀಠವೊಂದು ಹೇಳಿದೆ.
ಆದಾಗ್ಯೂ, ಚಿತ್ರ ಬಿಡುಗಡೆ ತಡೆಯಲು ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶವನ್ನು ಕೋರಿದ್ದ ಪಂಜಾಬ್‌ನ ಸರಕಾರೇತರ ಸಂಘಟನೆ ‘ಹ್ಯೂಮನ್ ರೈಟ್ಸ್ ಅವೇರ್‌ನೆಸ್ ಅಸೋಸಿಯೇಶನ್’ಗೆ ಮತ್ತೊಮ್ಮೆ ಸುಪ್ರೀಂ ಕೋರ್ಟನ್ನು ಸಮೀಪಿಸಲು ಅದು ಅನುಮತಿ ನೀಡಿದೆ.
ಬಾಂಬ್ ಹೈಕೋರ್ಟ್‌ನ ಆದೇಶದಂತೆ ‘ಉಡ್ತಾ ಪಂಜಾಬ್’ ಚಿತ್ರಕ್ಕೆ ನಿನ್ನೆ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು(ಸಿಬಿಎಫ್‌ಸಿ) ಹೊಸದಾಗಿ ಬಿಡುಗಡೆಯ ಪ್ರಮಾಣಪತ್ರ ನೀಡಿದೆ.
ಚಿತ್ರವು ಪ್ರದರ್ಶನಕ್ಕೆ ಯೋಗ್ಯವಾದುದು. ಆದರೆ ವಯಸ್ಕರಿಗೆ ಮಾತ್ರವೆಂದು ತೀರ್ಮಾನಿಸಿದ ಸೆನ್ಸಾರ್ ಮಂಡಳಿ ಅದಕ್ಕೆ ‘ಎ’ ಸರ್ಟಿಫಿಕೇಟ್ ಕೊಟ್ಟಿದೆ. ಚಿತ್ರವು ಶುಕ್ರವಾರ ಬಿಡುಗಡೆಯಾಗಲಿದೆ.