ಥಿಯೇಟರ್ ನಲ್ಲಿ ಹಾರರ್ ಸಿನಿಮಾ ನೋಡುತ್ತಿದ್ದ ವ್ಯಕ್ತಿ ಸಾವು
ತಿರುವನ್ನಮಲೈ, ಜೂ.17: ನಗರದ ಥಿಯೇಟರ್ ಒಂದರಲ್ಲಿ ಹಾರರ್ ಸಿನಿಮಾ ವೀಕ್ಷಿಸುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಹೊಸದಾಗಿ ಬಿಡುಗಡೆಯಾಗಿದ್ದ ಹಾರರ್ ಸಿನಿಮಾ ‘ದಿ ಕಂಜ್ಯೂರಿಂಗ್ 2’ ನೋಡಲು ಬಾಲಸುಬ್ರಹ್ಮಣ್ಯರ್ ಸಿನೆಮಾಸ್‌ಗೆ ಇಬ್ಬರು ಆಂಧ್ರ ಪ್ರದೇಶದ ವ್ಯಕ್ತಿಗಳು ಹೋಗಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ವೀಕ್ಷಿಸುತ್ತಿದ್ದಾಗ ಅವರಲ್ಲೊಬ್ಬ ವ್ಯಕ್ತಿ ಎದೆ ನೋವೆಂದು ಹೇಳಿ ಅಲ್ಲಿಯೇ ಕುಸಿದು ಬಿದ್ದ. ಆತನನ್ನು ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಅದಾಗಲೇ ಮೃತ ಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.
ಪೋಸ್ಟ್ ಮಾರ್ಟಂ ನಡೆಸಲು ಮೃತದೇಹವನ್ನು ತಿರುವನ್ನಮಲೈನಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲು ಇನ್ನೊಬ್ಬ ಆಂಧ್ರ ವ್ಯಕ್ತಿಗೆ ಹೇಳಲಾಯಿತಾದರೂ, ಆತ ಮೃತ ದೇಹವನ್ನು ತೆಗೆದುಕೊಂಡು ನಾಪತ್ತೆಯಾಗಿಬಿಟ್ಟಿದ್ದಾನೆ. ಪೊಲೀಸರು ನಗರದ ಆಟೋ ಚಾಲಕರು ಮತ್ತು ಲಾಡ್ಜ್ ಗಳಲ್ಲಿ ಆತನ ಬಗ್ಗೆ ಹಾಗೂ ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ವಿಚಾರಿಸುತ್ತಿದ್ದಾರೆ.