ಕೇಂದ್ರ ಸಂಪುಟಕ್ಕೆ ಆದಿತ್ಯನಾಥ್, ಸಿದ್ದು ?

Update: 2016-06-17 11:34 GMT

ನವದೆಹಲಿ,ಜೂ. 17: ಕೇಂದ್ರ ಸಚಿವ ಸಂಪುಟದ ಪುನರ್ರಚನೆ ಈ ತಿಂಗಳಲ್ಲಿ ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನದ ನಂತರ ಮಾಡುವ ಸಂಭವವಿದ್ದು ಈ ಬಾರಿ ಯೋಗಿ ಆದಿತ್ಯನಾಥ್ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ಸಿದ್ಧು ಅವರಿಗೆ ಸಚಿವರಾಗುವ ಅವಕಾಶಗಳು ಹೆಚ್ಚಿವೆ ಎನ್ನಲಾಗಿದೆ. ಅತ್ತ ಹಿರಿಯ ಸಚಿವರಾದ ನಜ್ಮಾ ಹೆಫ್ತುಲ್ಲಾ ಹಾಗೂ ಗಿರಿರಾಜ್ ಸಿಂಗ್ ಅವರನ್ನು ಕೈಬಿಡುವ ಸಾಧ್ಯತೆಗಳಿವೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಿಂದ ಹೆಚ್ಚು ಸಂಸದರು ಸಚಿವ ಸಂಪುಟ ಸೇರಲಿದ್ದಾರೆಂದು ಮೂಲಗಳು ತಿಳಿಸಿವೆ. ಅಂತೆಯೇ ರಾಜಸ್ಥಾನ ಮತ್ತು ಛತ್ತೀಸಗಢ ಸಂಸದರಿಗೂ ಅವಕಾಶಗಳು ದೊರೆಯು ಸಂಭವವಿದ್ದು ಸರಕಾರವುಎಲ್ಲಾ ಜಾತಿ ಹಾಗೂ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡಲು ಸರಕಾರ ಯೋಚಿಸುತ್ತಿದೆ.

ಪ್ರಸಕ್ತ ರಾಜ್ಯಸಭಾ ಸದಸ್ಯರಾಗಿರುವ ಸಿದ್ದು ಈ ಹಿಂದೆ ಅಮೃತಸರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಕಳೆದ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ ಅರುಣ್ ಜೇಟ್ಲಿಯವರನ್ನು ಕಣಕ್ಕಿಳಿಸಲಾಗಿತ್ತಾದರೂ ಅವರು ಸೋತಿದ್ದರು.

ಬೆಂಕಿಚೆಂಡು ಎಂದೇ ಖ್ಯಾತರಾದ ಯೋಗಿ ಆದಿತ್ಯನಾಥ್ ಗೋರಖಪುರ ಕ್ಷೇತ್ರದ ಸಂಸದರಾಗಿದ್ದು ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಮಂತ್ರಿ ಪದವಿ ನೀಡುವ ಸಾಧ್ಯತೆಯಿದೆಯೆನ್ನಲಾಗಿದ್ದರೂ ಆದಿತ್ಯನಾಥ್ ಅವರ ಬೆಂಬಲಿಗರು ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಬೇಕೆಂಬ ಬೇಡಿಕೆಯಿಟ್ಟಿದ್ದಾರೆ.
ಇವರ ಹೊರತಾಗಿ ಮಿರ್ಜಾಪುರ ಸಂಸದೆ ಅಪ್ನಾ ದಲ್ ಪಕ್ಷದ ಅನುಪ್ರಿಯಾ ಪಟೇಲ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದೆಂದು ಮೂಲಗಳು ತಿಳಿಸಿವೆ. ಅಪ್ನಾ ದಲ್ ಎನ್ ಡಿ ಎ ಸರಕಾರದ ಭಾಗವಾಗಿದ್ದರೂ ಇದುವರೆಗೆ ಆ ಪಕ್ಷದ ಯಾವುದೇ ಸಂಸದರನ್ನು ಸಚಿವ ಸಂಪುಟಕ್ಕೆ ಸೇರಿಸಲಾಗಿಲ್ಲ.

ಉತ್ತರ ಪ್ರದೇಶದ ಭಾಗ್‌ಪತ್ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಗೊಂಡಿರುವ ಸತ್ಯಪಾಲ್ ಸಿಂಹಹಾಗೂ ಸತತ ಎರಡನೇ ಬಾರಿ ಆಯ್ಕೆಯಾಗಿರುವ ರಾಜಸ್ಥಾನದ ಬಿಕಾನೇರ್ ಕ್ಷೇತ್ರದ ಎಂಪಿ ಹಾಗೂ ಲೋಕಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ಅರ್ಜುನ್ ರಾಮ್ ಮೇಧ್ವಾಲ್ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಬಹುದೆಂದು ಮೂಲಗಳು ತಿಳಿಸುತ್ತವೆ.

ಕೇಂದ್ರ ಸಂಪುಟದಲ್ಲಿ ಕೃಷಿ ರಾಜ್ಯ ಸಚಿವರಾಗಿರುವ ಉತ್ತರಪ್ರದೇಶದ ಮುಝಫರ್ ನಗರ ಸಂಸದಸಂಜೀವ್ಬಾಲ್ ಯಾನ್ ಅವರನ್ನು ರಾಜ್ಯದಲ್ಲಿ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ಮೇಲ್ದರ್ಜೆಗೇರಿಸುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

ಅಲ್ಪಸಂಖ್ಯಾತರ ಕಲ್ಯಾಣ ಸಚಿವೆಯಾಗಿರುವ ನಜ್ಮಾ ಹೆಫ್ತುಲ್ಲಾ ಮೋದಿ ಸರಕಾರದ ಹಿರಿಯ ಸಚಿವೆಯಾಗಿದ್ದರೂ ಅವರಿಗೀಗ 76 ವರ್ಷ ವಯಸ್ಸಾಗಿರುವುದರಿಂದಸರಕಾರದ ನೀತಿಯಂತೆ ಅವರಿಗೆ ನಿವೃತ್ತಿ ನೀಡಿ ಅವರ ಸಹಾಯಕ ಸಚಿವ ಅಬ್ಬಾಸ್ ನಖ್ವಿಯವರನ್ನು ಅವರ ಸ್ಥಾನಕ್ಕೆ ತರುವ ಸಂಭವವಿದೆಯೆಂದು ಕೆಲ ಮೂಲಗಳು ಬಹಿರಂಗಪಡಿಸಿವೆ.

ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ವಿಜಯ್ ಸಂಪಲ ಅವರನ್ನುಪಂಜಾಬ್ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿಸಿರುವ ಹಿನ್ನೆಲೆಯಲ್ಲಿ ಒಂದು ವ್ಯಕ್ತಿಗೆ ಒಂದು ಹುದ್ದೆ ನಿಯಮದಡಿ ಅವರನ್ನು ಸಂಪುಟದಿಂದ ಕೈಬಿಡುವ ನಿರೀಕ್ಷೆಯಿದೆ.

ಪ್ರಸಕ್ತ ಮಂತ್ರಿ ಮಂಡಲದದಲ್ಲಿ ಉತ್ತರಾಖಂಡಕ್ಕೆ ಯಾವುದೇ ಪ್ರಾತಿನಿಧ್ಯವಿಲ್ಲವಾಗಿದ್ದುಅಲ್ಲಿನ ಹಿರಿಯ ಬಿಜೆಪಿ ನೇತಾರರಾಗಿರುವ ಭಗತ್ ಸಿಂಗ್ ಕೋಶ್ಯರಿ ಅವರಿಗೆಈ ಬಾರಿ ಸಚಿವರಾಗುವ ಅವಕಾಶ ದೊರೆಯಬಹುದು ಎಂದು ಹೇಳಲಾಗುತ್ತಿದೆ.

ರಾಜಸ್ಥಾನದ ಶ್ರೀಗಂಗಾನಗರದ ಸಂಸದ ನಿಹಾಲ್ ಚಂದ್ ಪ್ರಸಕ್ತ ಆಹಾರ ಖಾತೆಯ ರಾಜ್ಯ ಸಚಿವರಾಗಿದ್ದು ಅವರ ಕಾರ್ಯವೈಖರಿಯಿಂದ ಪ್ರಧಾನಿ ತೃಪ್ತರಾಗದ ಕಾರಣ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಎಂಎಸ್‌ಎಂಇ ಸಚಿವ ಗಿರಿರಾಜ್ ಸಿಂಗ್ ಅವರಿಗೂ ಕೊಕ್ ನೀಡುವ ಸಂಭವವಿದೆಯೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News