ಬಂದೂಕು ನಿಯಂತ್ರಣ ಇಲ್ಲದಿದ್ದರೆ ಒರ್ಲಾಂಡೊ ಪುನರಾವರ್ತನೆಯಾಗುತ್ತದೆ: ಒಬಾಮ ಎಚ್ಚರಿಕೆ
Update: 2016-06-17 20:09 IST
ವಾಶಿಂಗ್ಟನ್, ಜೂ. 17: ಕಠಿಣ ಬಂದೂಕು ನಿಯಂತ್ರಣ ಕಾಯ್ದೆಗಳು ಜಾರಿಯಾಗದ ಹೊರತು, ಒರ್ಲಾಂಡೊದಲ್ಲಿ ಇತ್ತೀಚೆಗೆ ನಡೆದಂಥ ಭಯಾನಕ ಸಾಮೂಹಿಕ ಹತ್ಯಾಕಾಂಡಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಎಚ್ಚರಿಸಿದ್ದಾರೆ.
‘‘ತನ್ನ ನೆರೆಕರೆಯವರಿಗೆ ಅಥವಾ ಸ್ನೇಹಿತರಿಗೆ ಅಥವಾ ಸಹ ಕೆಲಸಗಾರರಿಗೆ ಅಥವಾ ಅಪರಿಚಿತರಿಗೆ ಹಾನಿಯುಂಟು ಮಾಡಲು ಬಯಸುವ ಪ್ರತಿಯೊಬ್ಬ ಮತಿವಿಕಲ ವ್ಯಕ್ತಿಯನ್ನು ಹಿಡಿಯಲು ನಮಗೆ ಸಾಧ್ಯವಿಲ್ಲ. ಆದರೆ, ಅವರು ಉಂಟು ಮಾಡುವ ಹಾನಿಯ ಪ್ರಮಾಣದಲ್ಲಿ ಏನಾದರೂ ಮಾಡಲು ಸಾಧ್ಯವಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಒಬಾಮ ಹೇಳಿದರು.
‘‘ದುರದೃಷ್ಟವಶಾತ್, ನಮ್ಮ ರಾಜಕೀಯ ವ್ಯವಸ್ಥೆಯು, ಓರ್ವ ಭಯೋತ್ಪಾದಕ ಅಥವಾ ಓರ್ವ ಹತಾಶ ವ್ಯಕ್ತಿ ಅಸಾಧಾರಣ ಸಾಮರ್ಥ್ಯದ ಶಸ್ತ್ರಗಳನ್ನು ಪಡೆಯುವುದನ್ನು ಎಷ್ಟು ಸಾಧ್ಯವೋ ಅಷ್ಟು ಸುಲಭಗೊಳಿಸಿದೆ ಹಾಗೂ ಇದೆಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತದೆ’’ ಎಂದರು.