×
Ad

ಪಂಡಿತರ ವಾಪಸಾತಿ ಬಗ್ಗೆ ಕಾಶ್ಮೀರದ ಧೋರಣೆಯ ಅವಲೋಕನ

Update: 2016-06-17 22:47 IST

ಪಂಡಿತರ ವಿಷಯವು ನಿಬ್ಬೆರಗಾಗಿಸುವಂಥದ್ದು. ಇದು ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ಕಾರ್ಯಕರ್ತರು ಒಂದೇ ಸಮಯದಲ್ಲಿ ಪರಸ್ಪರ ವಿರೋಧಾಭಾಸದ ಕಾರ್ಯಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ. ಸ್ಥಳಾಂತರಗೊಳಿಸಲ್ಪಟ್ಟಿರುವ ಈ ಅಲ್ಪಸಂಖ್ಯಾತರ ಬಗ್ಗೆ ಕರುಣೆಯನ್ನು ವ್ಯಕ್ತಪಡಿಸುವ ಈ ಮಂದಿ ಅದರ ಜೊತೆಗೆ ಪಂಡಿತರು ತಮ್ಮದೇ ಊರಿಗೆ ಪುನರ್‌ವಾಪಸಾಗಲು ‘ಏನು ಬೇಕು ಏನು ಬೇಡ’ ಗಳನ್ನೂ ನಿರ್ಧರಿಸುತ್ತಾರೆ. ಸುಮಾರು 60 ವರ್ಷಗಳ ಹಿಂದೆ ಜಾರ್ಜ್ ಒರ್ವಲ್ ಎಂಬಾತ ಈ ರೀತಿಯ ವರ್ತನೆಗೆ ಒಂದು ಹೆಸರು ನೀಡಿದ್ದರು: ಇಬ್ಬಗೆ ಧೋರಣೆ. ‘‘ಎಚ್ಚರಿಕೆಯಿಂದ ಯೋಚಿಸಿದ ಸುಳ್ಳನ್ನು ಹೇಳುವಾಗ ಅದರ ಸಂಪೂರ್ಣ ಸತ್ಯತೆಯನ್ನು ಅರಿತಿರಬೇಕು ಎಂದು ತಿಳಿದಿರುವುದು ಅಥವಾ ತಿಳಿಯದೇ ಇರುವುದು’’ ಎಂದು ಒರ್ವಲ್ ತಮ್ಮ 1984ರ ಲೇಖನದಲ್ಲಿ ಉಲ್ಲೇಖಿಸಿದ್ದರು, ‘‘ಎರಡು ಪರಸ್ಪರ ವಿರುದ್ಧವಾಗಿರುವ ಅಭಿಪ್ರಾಯಗಳನ್ನು ಏಕಕಾಲದಲ್ಲಿ ಹೊಂದುವುದು ಮತ್ತು ಆ ಎರಡು ಅಭಿಪ್ರಾಯಗಳನ್ನೂ ಒಪ್ಪುವುದು, ನೈತಿಕತೆಯನ್ನು ತಿರಸ್ಕರಿಸಿ ತರ್ಕದ ವಿರುದ್ಧ ತರ್ಕವನ್ನು ಬಳಸುವುದು’’ ಎಂದು ಒರ್ವಲ್ ಬರೆಯುತ್ತಾರೆ. ಬಹುಶಃ ಹಾಗಾಗಿಯೇ ಅವರ ಮರಳಿಕೆಯ ಬಗ್ಗೆ ಯಾವುದೇ ಆಕ್ರೋಶವಿಲ್ಲ ಮತ್ತು ಅವರನ್ನು ಮುಕ್ತ ಹೃದಯದಿಂದ ಸ್ವಾಗತಿಸಲಾಗುವುದು ಎಂಬ ಹೇಳಿಕೆಗಳನ್ನು ಒಂದರ ಹಿಂದೆ ಒಂದರಂತೆ ನೀಡಿದರೂ ಮತ್ತು ಭದ್ರತೆಯನ್ನು ಮತ್ತಷ್ಟು ಹೆಚ್ಚುಗೊಳಿಸಿದರೂ ಪಂಡಿತರ ತಲೆಯಲ್ಲಿ ಒಂದು ರೀತಿಯ ಅಪನಂಬಿಕೆ, ಸಂಶಯ ಮನೆ ಮಾಡಿತ್ತು.

ಕೊನೆಗೂ ಅವರು ಈ ಪ್ರಹಸನದ ಆಚೆಗೆ ನೋಡಲು ಶಕ್ತರಾದರು. ಪಂಡಿತರು ತಾವು ಹೆಚ್ಚು ಮೊಂಡುತನ ಅಥವಾ ಸಂಶಯವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಅವರೇ ಯೋಚಿಸಿದ ಸಂದರ್ಭಗಳೂ ಇವೆ. ಆದರೆ ಇನ್ನು ಮುಂದೆ ಖಂಡಿತವಾಗಿಯೂ ಹಾಗಾಗುವುದಿಲ್ಲ. ಕಳೆದ ವಾರ ಒಬ್ಬ ಪ್ರತಿಷ್ಠಿತ ಸೇನಾ ನಾಯಕ ‘‘ಪಂಡಿತರು ನಾವು ಸೂಚಿಸಿದಂತೆ ಬದುಕಲು ಬಯಸದೆ ತಮ್ಮದೇ ಇಚ್ಛೆಯಂತೆ ಬದುಕಲು ಮುಂದಾದರೆ ಅವರ ಮೇಲೆ ದಾಳಿ ನಡೆಸಲಾಗುವುದು’’ ಎಂದು ಆಜ್ಞೆ ಹೊರಡಿಸಿದರು. ಹೌದು ನೀವು ಓದಿದ್ದು ಸರಿ, ದಾಳಿ ನಡೆಸಲಾಗುವುದು ಎಂದು ಆಜ್ಞೆ ಹೊರಡಿಸಿದ್ದರು!

ಆರು ನಿಮಿಷಗಳ ಈ ವೀಡಿಯೊದಲ್ಲಿ ಬುರ್ಹನ್ ವಾನಿ ಎಂಬ ಯುವ ಸೈನಿಕ, ಕಾಶ್ಮೀರಿ ಪಂಡಿತರು ಇಸ್ರೇಲ್ ಮಾದರಿಯ ಕಾಲನಿಗಳಲ್ಲಿ ಬದುಕಲು ಮುಂದಾದರೆ ಅವರ ಮೇಲೆ ನೇರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದ. ಈ ರೀತಿಯ ಸಂಯುಕ್ತ ಕಟ್ಟಡ ಸಂಕೀರ್ಣಗಳನ್ನು ಸರಕಾರವು ಎರಡು ದಶಕಗಳ ಹಿಂದೆ ಕಣಿವೆಯಲ್ಲಿ ಗಲಭೆಗಳು ಆರಂಭವಾದ ಸಮಯದಲ್ಲಿ ಸ್ಥಳಾಂತರಿಸಲ್ಪಟ್ಟಿದ್ದ ಪಂಡಿತರ ಪುನರ್‌ವಸತಿಗಾಗಿ ನಿರ್ಮಿಸಿದೆ. 24ರ ಹರೆಯದ ವಾನಿ ಕೊನೆಯುಸಿರೆಳೆಯುತ್ತಿರುವ ದಂಗೆಗೆ ಹೊಸ ಜೀವವನ್ನು ತುಂಬಿದ್ದಾನೆ. ಆತನ ಅಂತರ್ಜಾಲ ವ್ಯಕ್ತಿತ್ವವು ಸ್ವಾತಂತ್ರ್ಯದ ಕಲ್ಪನೆಗೆ ಮುಖ್ಯವಾಗಿ ಕಾಶ್ಮೀರದ ಪ್ರತ್ಯೇಕಿಸಲ್ಪಟ್ಟ ಜನರ ಮಧ್ಯೆ ನವಚೇತನವನ್ನು ನೀಡಿದೆ. ಈತ ತನ್ನ ಗುಂಪಿಗೆ ಜನರನ್ನು ಸೇರಿಸುತ್ತಿದ್ದಾನೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಆತ ದಂಗೆಯ ಬಗ್ಗೆ ಒಂದು ರೀತಿಯ ಮೃದು ಧೋರಣೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಹೊಸ ವೀಡಿಯೊ ತುಣುಕಿನಲ್ಲಿ ವಾನಿ ಇತರರ ಮಾತನ್ನು ಪುನರುಚ್ಛರಿಸಿದಂತೆ ಭಾಸವಾಗುತ್ತದೆ. ರಾಜಕೀಯ ಲಾಭಕ್ಕಾಗಿ ಹತ್ಯೆ ಮಾಡುವ ಹೇಳಿಕೆಯನ್ನು ನೀಡುವ ವೇಳೆ ಆತನ ಧ್ವನಿಯಲ್ಲಿ ಸಮಾನತೆಯಿಲ್ಲದೆ ನಡುಕ ಮತ್ತು ತಡವರಿಕೆಯಿತ್ತು.

ಆತನ ಮಾತಿನಲ್ಲಿ ಒಂದು ರೀತಿಯ ವ್ಯಂಗ್ಯ ಕೂಡಾ ಇತ್ತು: ಈ ವಸತಿ ಸಮುಚ್ಚಯಗಳು ಒಂದು ಪ್ರತ್ಯೇಕಿತ ಪ್ರದೇಶದಲ್ಲಿ ನಿರ್ಮಿಸಲು ಯೋಚಿಸಲಾಗಿದೆಯೋ ಇಲ್ಲವೋ ತಿಳಿಯದು. ಆದರೆ ಆತನ ಬೆದರಿಕೆಯ ನಂತರ ಅದು ಹಾಗೆ ನಿರ್ಮಿಸಲ್ಪಡುವುದು ನಿಶ್ಚಿತ. ‘‘ಆತ, ಭಾರತೀಯರು ಎಂದು ಹೇಳಿಕೊಳ್ಳುವ ಎಲ್ಲರ ಮೇಲೂ ಆಕ್ರೋಶ ವ್ಯಕ್ತಪಡಿಸುತ್ತಾನೆ’’ ಎಂದು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ (ಕೆಪಿಎಸ್‌ಎಸ್)ಯ ಸಂಜಯ್ ಟಿಕ್ಕೂ ಈ ವೀಡಿಯೊ ಕಂಡ ನಂತರ ಹೇಳುತ್ತಾರೆ. ದಂಗೆಯ ನಂತರ ಕಾಶ್ಮೀರವನ್ನು ತೊರೆಯದ ಕೆಲವೇ ಪಂಡಿತರ ಪೈಕಿ ಸಂಜಯ್ ಕೂಡಾ ಒಬ್ಬರು. ‘‘ನಾನು ಹೇಳುತ್ತೇನೆ ನಾನೊಬ್ಬ ಭಾರತೀಯ ಮತ್ತು ಅದನ್ನು ನಾನು ಬಹಿರಂಗವಾಗಿ ಹೇಳುತ್ತೇನೆ. ಸಮವಸ್ತ್ರ ಧರಿಸಿ ಭಾರತೀಯ ಕಾನೂನನ್ನು ಎತ್ತಿಹಿಡಿಯುವ ಒಬ್ಬ ಪೊಲೀಸ್ ಸಿಬ್ಬಂದಿ ಹೃದಯದಿಂದ ಒಬ್ಬ ಭಾರತೀಯ ಆಗಿರಲೂ ಅಥವಾ ಆಗದೇ ಇರಲೂ ಬಹುದು. ಆತ ತನ್ನ ಕರ್ತವ್ಯವನ್ನು ಮಾಡುತ್ತಿದ್ದಾನೆ. ಆದರೆ ನಾನು ಖಂಡಿತವಾಗಿಯೂ ಒಬ್ಬ ಭಾರತೀಯ. ಹಾಗಾಗಿ ಈ ಬೆದರಿಕೆ ಯಾರನ್ನು ಗುರಿಯಿಟ್ಟು ಹಾಕಲಾಗಿದೆ? ಈ ಪರಿಸ್ಥಿತಿಯಲ್ಲಿ ಅತ್ಯಲ್ಪಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರನ್ನು ಮರಳಿ ಕರೆಯುವ ಮೂಲಕ ಇರುವಂತಹ ಪ್ರಕ್ಷುಬ್ಧತೆಯನ್ನು ಕಡಿಮೆ ಮಾಡಬಹುದು ಎಂದು ನನಗನಿಸುವುದಿಲ್ಲ’’ ಎಂದು ಹೇಳುತ್ತಾರೆ ಸಂಜಯ್. ವಾನಿಯ ಹೇಳಿಕೆಯ ವಿರುದ್ಧ ಯಾರೊಬ್ಬರೂ ಮರು ಹೇಳಿಕೆ ನೀಡಿಲ್ಲ ಎಂಬ ಬಗ್ಗೆ ಸಂಜಯ್ ಆಕ್ರೋಶಿತರಾಗಿರುವುದು ಸ್ಪಷ್ಟವಾಗಿತ್ತು. ಪಂಡಿತರು ತಂಡಗಳಲ್ಲಿ ಕಣಿವೆಗೆ ಮರಳಲು ಪ್ರತ್ಯೇಕವಾದಿಗಳಿಂದ ಕೇವಲ ಒಂದು ಅರ್ಥಪೂರ್ಣ ಹೇಳಿಕೆಯನ್ನು ನಾನು ಬಯಸುತ್ತೇನೆ ಎಂದು ಹೇಳುತ್ತಾರೆ ಸಂಜಯ್. ಅಂಥಾ ಹೇಳಿಕೆಯಲ್ಲಿ ಯಾವ ಅಂಶ ಇರಬೇಕು ಎಂದು ಸಂಜಯ್ ತಿಳಿಸಲಿಲ್ಲ ಮತ್ತು ಅವನ ಹೇಳಿಕೆಯ ಬಗ್ಗೆ ನಾನು ಯೋಚಿಸುತ್ತಿರುವಂತೆಯೇ, ಸಂಜಯ್ ಏಕೀಕರಣವಾದಿಗಳು ಪಂಡಿತರು ಕಣಿವೆಗೆ ಮರಳಲು ನೀಡಿರುವ ಕೊಡುಗೆಗಳ ಪಟ್ಟಿಯನ್ನು ನನ್ನ ಗಮನಕ್ಕೆ ತಂದರು. ಹೀಗೆಲ್ಲಾ ಮಾಡುವುದನ್ನು ಅವರು ನಿಲ್ಲಿಸಬೇಕೆಂಬುದು ಸಂಜಯ್ ಅಭಿಪ್ರಾಯ. ದೊಡ್ಡ ಆಟ

ಈ ರೀತಿಯ ಸಂಯೋಜಿತ ಉಪನಗರಗಳನ್ನು ವಿರೋಧಿಸುವವರು ತಮ್ಮ ನಡೆಯನ್ನು ಸಮರ್ಥಿಸಲು ಮುಂದಿಡುವ ವಾದ ಬಹಳ ಕುತೂಹಲಕಾರಿಯಾಗಿದೆ. ಮುಸ್ಲಿಂ, ಪಂಡಿತರು ಮತ್ತು ಇತರ ಎಲ್ಲ ಧರ್ಮ, ಜಾತಿಗಳ ವಲಸಿಗರಿಗೆ ವಾಸಸ್ಥಾನವಾಗಲಿರುವ ಈ ಉಪನಗರಗಳು ಕಣಿವೆಯನ್ನು ವಿಸ್ತರಿಸುವ ಭಾರತ ಸರಕಾರದ ಭಾಗವಾಗಿದ್ದು ನಿಧಾನವಾಗಿ ಕಾಶ್ಮೀರದ ಮುಸ್ಲಿಮರ ಗುರುತನ್ನೇ ನಿರಾಕರಿಸುತ್ತದೆ ಎಂದು ಇವರು ವಾದಿಸುತ್ತಾರೆ. ಈ ಉಪನಗರಗಳಿಗೆ ನಾವು ಪಂಜರ, ಗೋಡೆ, ಸಂಕೀರ್ಣ ಇತ್ಯಾದಿ ಹೆಸರುಗಳನ್ನು ಕೇಳುತ್ತಿದ್ದರೂ ಒಂದು ಅರ್ಥಪೂರ್ಣ ವಾದ ಮಂಡಿಸುವಾಗ ಈ ಶಬ್ಧಗಳು ಸಮಂಜಸವೆನಿಸುವುದಿಲ್ಲ. ಪಂಡಿತರ ಸ್ಥಳಾಂತರದ ಬಗ್ಗೆ ಬರೆದಿರುವ ರಾಹುಲ್ ಪಂಡಿತಾ ಅವರು ಇತ್ತೀಚೆಗೆ ಬರೆಯುತ್ತಾರೆ: ‘‘ಪಂಡಿತರು ವಾಸಿಸುತ್ತಿದ್ದ ಬಹುತೇಕ ಮನೆಗಳು ಒಂದೋ ಮಾರಲ್ಪಟ್ಟಿವೆ ಅಥವಾ ಅವುಗಳನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಅಥವಾ ನಾಶಮಾಡಲಾಗಿದೆ. ಹಾಗಾಗಿ ಅವರು ತಮ್ಮ ಬೀದಿಗಳಿಗೆ ಮರಳಲು ಬಯಸಿದರೂ ಅವರು ಜೀವಿಸುವುದಾದರೂ ಎಲ್ಲಿ?’’ ಪಂಡಿತರಿಗೆ ಕಣಿವೆಗೆ ಮರಳಲು ಒಂದು ಅವಕಾಶ ಬೇಕಿದೆ. ತಾವು ಹೇಗೆ ಮರಳಬೇಕೆಂಬುದನ್ನು ನಿರ್ಧರಿಸುವುದು ಕೂಡಾ ಅವರಿಗೇ ಬಿಟ್ಟಿದ್ದು. ಪ್ರಸ್ತಾಪಿಸಲಾಗಿರುವ ಕಾಲನಿಗಳು ಅವರ ಪಾಲಿಗೆ ಪಂಜರವಾಗಿರುವುದಿಲ್ಲ, ಅದು ಅವರ ಪಾಲಿಗೆ ಹೆಗ್ಗುರುತು. ಅದುವೇ ಅಂತಿಮ ಪರಿಹಾರವಲ್ಲ; ಈ ಕಾಲನಿಗಳು ಅವರ ನೂತನ ಜೆರುಸಲೇಮ್ ಕೂಡಾ ಆಗಿರುವುದಿಲ್ಲ. ಆದರೆ ಅಲ್ಲಿಂದ ಮುಂದೊಂದು ದಿನ ಅವರು ತಮ್ಮ ಆಯ್ಕೆಯ ಕಿಟಕಿ ಗಾಜುಗಳನ್ನು ಅಳವಡಿಸಬಹುದಾದ ಸ್ವಂತ ಮನೆಗಳಿಗೆ ಮರಳಬಹುದು.

ಮುಖ್ಯವಾಗಿ, ಇಂಥಾ ಶಿಬಿರಗಳಿಗೆ ಅವರನ್ನು ಆಹ್ವಾನಿಸುವ ಮೂಲಕ ಪಂಡಿತರನ್ನು ಕಣಿವೆಗೆ ಬರುವಂತೆ ಮಾಡಬಹುದಲ್ಲದೇ ಇತರ ಯಾವುದೇ ದಾರಿ ಕಾಣುವುದಿಲ್ಲ. ಒಮ್ಮೆ ಅಲ್ಲಿಗೆ ತೆರಳಿದ ನಂತರ ಮುಂದೆ ಅವರು ತಮ್ಮ ಖಾಯಂ ವಿಳಾಸಗಳಿಗೆ ತೆರಳುವ ಬಗ್ಗೆ ನಿರ್ಧರಿಸಬಹುದು. ಕಣಿವೆಯಲ್ಲಿ ವಲಸಿಗರ ಪುನರಾಗಮನದ ಬಗ್ಗೆ ಇನ್ನೊಂದು ಕೆಟ್ಟ ವಾದವನ್ನು ಮಂಡಿಸಲಾಗುತ್ತಿದೆ: ಪ್ರಸ್ತುತ ವಸತಿ ಸಮುಚ್ಚಯಗಳನ್ನು ಪಶ್ಚಿಮದ ಇಸ್ರೇಲ್‌ನ ಅನಧಿಕೃತ ಉದ್ಯೋಗದ ಜೊತೆ ಹೋಲಿಸಲಾಗುತ್ತಿದೆ. ಈ ವಾದದಲ್ಲಿ ಇಸ್ರೇಲ್-ಫೆಲೆಸ್ತೀನ್‌ನ ವಿಷಯಗಳನ್ನು ಪ್ರಸ್ತಾಪಿಸಿರುವುದು ನಿಜವಾಗಿಯೂ ಹಾಸ್ಯಾಸ್ಪದ. ಇದು ಪಂಡಿತರು ಫೆಲೆಸ್ತೀನಿಯರಂತೆ ಸ್ಥಳಾಂತರಿಸಲ್ಪಟ್ಟಿದ್ದರೂ ಅವರನ್ನೇ ತಪ್ಪಿತಸ್ಥರನ್ನಾಗಿ ಬಿಂಬಿಸುತ್ತದೆ, ಅದಲ್ಲದೆ ಕಾಶ್ಮೀರಿ ಪಂಡಿತರಿಗೂ ಕೂಡಾ ಕಣಿವೆಯಲ್ಲಿ ಕಾಶ್ಮೀರಿ ಮುಸ್ಲಿಮರಷ್ಟೇ ಹಕ್ಕಿದೆ ಎಂಬುದನ್ನೂ ಅಲ್ಲಗಳೆಯುತ್ತದೆ. ಪ್ರತ್ಯೇಕತಾವಾದಿಗಳು ‘ಆಕ್ರಮಿತ ಕಾಶ್ಮೀರ’ವನ್ನು ಪರಿಗಣಿಸಲು ಬಯಸಿದರೂ, ತಮಗೆ ಹಕ್ಕೇ ಇಲ್ಲದ ಫೆಲೆಸ್ತೀನ್ ಭೂಮಿಯಲ್ಲಿ ನೆಲೆಸಿರುವ ಇಸ್ರೇಲಿಗರ ಜೊತೆ ಪಂಡಿತರನ್ನು ಹೋಲಿಸುವುದು ಎಷ್ಟು ಸರಿ? ಸಂಯುಕ್ತ ಕಾಲನಿಗಳ ಬಗ್ಗೆ ವಿರೋಧಿಗಳ ಪೊಳ್ಳುವಾದ ಇತರ ಕೆಲವು ಅಂಶಗಳನ್ನು ಪರಿಗಣಿಸುವಾಗ ಸ್ಪಷ್ಟವಾಗುತ್ತದೆ. ಶ್ರೀನಗರದ ಹವಲ್ ಪ್ರದೇಶದಲ್ಲಿ ಈಗಾಗಲೇ ಪ್ರತ್ಯೇಕ ಟಿಬೆಟಿಯನ್ ಕಾಲನಿ ಅಸ್ತಿತ್ವದಲ್ಲಿದೆ. ಈ ಪ್ರದೇಶವು ಸ್ಥಳಾಂತರಿಸಲ್ಪಟ್ಟ ಟಿಬೆಟಿಯನ್ ಮುಸ್ಲಿಮರಿಂದ ತುಂಬಿದೆ ಮತ್ತು ಸ್ಥಳೀಯ ಕಾಶ್ಮೀರಿಗಳು ಇಲ್ಲಿನ ಹೊಟೇಲ್‌ಗಳಲ್ಲಿ ಸಿಗುವ ಖಾದ್ಯಗಳ ರುಚಿ ಸವಿಯಲು ಇಲ್ಲಿಗೆ ಆಗಮಿಸುತ್ತಲೇ ಇರುತ್ತಾರೆ. ಇಲ್ಲಿ ಒಂದು ಶಾಲೆ ಕೂಡಾ ಇದ್ದು, ಅದರಲ್ಲಿ ಈ ಕಾಲನಿಯ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ.

ಇದಲ್ಲದೆ ನಗರದ ಹೊರವಲಯದ ರಖ್-ಇ-ಅರ್ತ್ ಎಂಬಲ್ಲಿ ಸ್ಥಳಾಂತರಿಸಲ್ಪಟ್ಟ ದಾಲ್ ವಾಸಿಗಳಿಗಾಗಿ ವಿಸ್ತಾರವಾದ ಭೂಪ್ರದೇಶವನ್ನು ಒದಗಿಸಿದೆ. ದಾಲ್ ಸರೋವರದ ಆಸುಪಾಸಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಿ, ಅವರು ಈ ಕಾಲನಿಗಳಲ್ಲಿ ವಾಸಿಸುತ್ತಿದ್ದಾರೆ. ಉಚ್ಚನ್ಯಾಯಾಲಯ ದಾಲ್ ಸರೋವರದ 200 ಮೀಟರ್ ವ್ಯಾಪ್ತಿಯಲ್ಲಿ ಜನರ ವಾಸವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಇವರನ್ನು ಒಕ್ಕಲೆಬ್ಬಿಸಲಾಗಿತ್ತು. ಈ ಎಲ್ಲಾ ಕಾಲನಿಗಳು ಯಾವುದೇ ರೀತಿಯ ರಾಜಕೀಯ ಅಲೆಯನ್ನು ಎಬ್ಬಿಸಲಿಲ್ಲ. ಅಥವಾ ವಲಸಿಗರಿಗೆ ಕಾಲನಿಗಳನ್ನು ನಿರ್ಮಿಸುವುದನ್ನು ವಿರೋಧಿಸುವ ಜನರ ಆತ್ಮಸಾಕ್ಷಿಯನ್ನು ಇದು ಕೆದಕಲಿಲ್ಲ. ನಿಖರವಾಗಿ ಈ ವಿರೋಧಿಗಳನ್ನು ಯಾವ ಅಂಶ ಕಾತರರನ್ನಾಗಿಸುತ್ತಿದೆ ಎಂಬುವುದು ಅಸ್ಪಷ್ಟ. ಇನ್ನು ಒರ್ವಲ್‌ನತ್ತ ಮರಳುವುದಾದರೆ ನಮ್ಮ ಸಮಾಜದಲ್ಲಿ ನಮ್ಮ ಸುತ್ತ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಉತ್ತಮ ಜ್ಞಾನ ಹೊಂದಿರುವವರೇ ಜಗತ್ತನ್ನು ಅದು ಇರುವ ಹಾಗೆಯೇ ನೋಡುವಲ್ಲಿ ಸೋಲುತ್ತಾರೆ. ಸರಳವಾಗಿ ಹೇಳುವುದಾದರೆ ಹೆಚ್ಚು ಅರ್ಥಮಾಡಿಕೊಂಡಾಗ ಭ್ರಮೆಯು ಹೆಚ್ಚಾಗುತ್ತದೆ ಮತ್ತು ಹೆಚ್ಚು ಬುದ್ಧಿವಂತರಾದಾಗ ವಿವೇಕವು ಕಡಿಮೆಯಾಗುತ್ತದೆ.

ಕೃಪೆ: hewire.in  

Writer - ಶಾಕಿರ್ ಮಿರ್

contributor

Editor - ಶಾಕಿರ್ ಮಿರ್

contributor

Similar News