×
Ad

ಬ್ರಿಟನ್-ಬೆಲ್ಜಿಯಂ ಪಂದ್ಯ ಡ್ರಾ: ಭಾರತಕ್ಕೆ ಫೈನಲ್ ಭಾಗ್ಯ

Update: 2016-06-17 23:40 IST

ಲಂಡನ್, ಜೂ.17: ಚಾಂಪಿಯನ್ಸ್ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ತಂಡ ಬೆಲ್ಜಿಯಂ ತಂಡದ ವಿರುದ್ಧ 3-3 ಗೋಲುಗಳ ಅಂತರದಿಂದ ಡ್ರಾ ಸಾಧಿಸಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದ ಭಾರತ ತಂಡ ಫೈನಲ್‌ಗೆ ಪ್ರವೇಶಿಸುವ ಭಾಗ್ಯ ಪಡೆದಿದೆ.

ಭಾರತ ಇದೇ ಮೊದಲ ಬಾರಿ 36ನೆ ಆವೃತ್ತಿಯ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

1982ರಲ್ಲಿ ಹಾಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕಂಚಿನ ಪದಕ ಜಯಿಸಿದ್ದು ಈವರೆಗಿನ ಉತ್ತಮ ಸಾಧನೆಯಾಗಿತ್ತು. ಇದೀಗ ಫೈನಲ್ ಭಾಗ್ಯ ಪಡೆದಿರುವ ಭಾರತ ಕನಿಷ್ಠ ಬೆಳ್ಳಿ ಪದಕ ಜಯಿಸುವುದು ಖಾತ್ರಿಯಾಗಿದೆ.

  ಗುರುವಾರ ನಡೆದ ಆಸ್ಟ್ರೇಲಿಯ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ 2-4 ಗೋಲುಗಳ ಅಂತರದಿಂದ ಸೋತ ಕಾರಣ ಫೈನಲ್ ಅವಕಾಶ ಕ್ಷೀಣಿಸಿತ್ತು. ಗುರುವಾರ ತಡರಾತ್ರಿ ನಡೆದ ಬ್ರಿಟನ್ ಹಾಗೂ ಬೆಲ್ಜಿಯಂ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಭಾರತ ಎದುರು ನೋಡುತ್ತಿತ್ತು. ಈ ಪಂದ್ಯದ ಫಲಿತಾಂಶ ಭಾರತದ ಪರವಾಗಿಯೇ ಬಂದಿದ್ದು, ಫೈನಲ್‌ನಲ್ಲಿ ಸೆಣಸಾಡುವ ಅವಕಾಶ ಕಲ್ಪಿಸಿದೆ.

ಚಾಂಪಿಯನ್ಸ್ ಲೀಗ್‌ನಲ್ಲಿ ಭಾರತ 2 ಗೆಲುವು, 2 ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ. ಒಟ್ಟು 7 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದೆ. ಶುಕ್ರವಾರ ತಡರಾತ್ರಿ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದ್ದು, ಅಂತಿಮ ಲೀಗ್ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದೆ.

ಚಾಂಪಿಯನ್ಸ್ ಲೀಗ್‌ನಲ್ಲಿ ಚೊಚ್ಚಲ ಫೈನಲ್ ಪಂದ್ಯ ಆಡುತ್ತಿರುವ ಭಾರತದ ಆಟಗಾರರು ಟ್ರೋಫಿ ಎತ್ತಬೇಕಾದರೆ ಬಲಿಷ್ಠ ಆಸ್ಟ್ರೇಲಿಯದ ವಿರುದ್ಧ ಶಕ್ತಿಮೀರಿ ಪ್ರದರ್ಶನ ನೀಡಬೇಕಾಗಿದೆ.

 ಭಾರತ ತಂಡ ಆಸ್ಟ್ರೇಲಿಯದ ವಿರುದ್ಧ 2-4 ಅಂತರದಿಂದ ಸೋತ ಕಾರಣ ಬ್ರಿಟನ್‌ಗೆ ಫೈನಲ್ ತಲುಪಲು ಬೆಲ್ಜಿಯಂ ವಿರುದ್ಧ ಗೆಲ್ಲಲೇಬೇಕಾಗಿತ್ತು. ಬೆಲ್ಜಿಯಂ ಆತಿಥೇಯ ಬ್ರಿಟನ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸಿದರೆ ಮಾತ್ರ ಫೈನಲ್ ತಲುಪುವ ಅವಕಾಶ ಲಭಿಸುತ್ತಿತ್ತು. ಆದರೆ, ಈ ಎರಡೂ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಕೊನೆಗೊಂಡ ಕಾರಣ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್‌ಗೆ ತಲುಪಿತು.

ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿರುವ ಬ್ರಿಟನ್ 1 ಗೆಲುವು, ಎರಡು ಡ್ರಾ ಸಾಧಿಸಿ ಒಟ್ಟು 5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೆ ಸ್ಥಾನದಲ್ಲಿದೆ. ನಾಲ್ಕಂಕವನ್ನು ಗಳಿಸಿರುವ ಬೆಲ್ಜಿಯಂ ನಾಲ್ಕನೆ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಅಜೇಯವಾಗುಳಿದಿರುವ ಆಸ್ಟ್ರೇಲಿಯ 4 ಲೀಗ್ ಪಂದ್ಯಗಳಲ್ಲಿ 3ರಲ್ಲಿ ಜಯ, ಒಂದರಲ್ಲಿ ಡ್ರಾ ಸಾಧಿಸಿ ಒಟ್ಟು 10 ಅಂಕ ಗಳಿಸಿದೆ. ಬ್ರಿಟನ್ ತಂಡ ಕಂಚಿನ ಪದಕಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದೆ.

*ಭಾರತ 1978ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಆರಂಭಿಸಿದ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ತಲುಪಿದೆ.

*1982ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಜಯಿಸಿತ್ತು.

* ಫೈನಲ್‌ಗೆ ತಲುಪಿರುವ ಭಾರತ ಬೆಳ್ಳಿ ಪದಕವನ್ನು ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News