×
Ad

ಮುಖ್ಯ ಆರೋಪಿ ಅಸ್ಸಾಂ ವಲಸೆ ಕಾರ್ಮಿಕ ಬಂಧನ

Update: 2016-06-17 23:50 IST

ಕೊಚ್ಚಿ, ಜೂ.17: ದಲಿತ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಘಟನೆ ನಡೆದು 49 ದಿನಗಳ ಬಳಿಕ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಲಸೆ ಕಾರ್ಮಿಕ ಅಮೀರುಲ್ ಇಸ್ಲಾಂ ಬಂಧಿತ ಆರೋಪಿ.

ದಿಲ್ಲಿಯ ನಿರ್ಭಯಾ ಪ್ರಕರಣದ ರೀತಿಯಲ್ಲೇ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಸಂತ್ರಸ್ತೆಯ ದೇಹದಲ್ಲಿ 38 ಗಾಯಗಳು ಕಂಡುಬಂದಿದ್ದವು. ಪೆರಂಬವೂರು ಗ್ರಾಮದ ತನ್ನ ಮನೆಯ ಎದುರೇ ಎಪ್ರಿಲ್ 28ರಂದು ಮೃತದೇಹ ಪತ್ತೆಯಾಗಿತ್ತು. ಎರಡು ಬಾರಿ ಪುನಾರಚನೆಗೊಂಡ ವಿಶೇಷ ತನಿಖಾ ತಂಡ ಒಂದೇ ತಾಲೂಕಿನಲ್ಲಿ 1500ಕ್ಕೂ ಹೆಚ್ಚು ಮಂದಿ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿತ್ತು ಹಾಗೂ 5 ಸಾವಿರ ಮಂದಿಯ ಬೆರಳಚ್ಚು ಪರಿಶೀಲನೆ ನಡೆಸಿತ್ತು. ಬಳಿಕ ಸುಮಾರು 20 ಲಕ್ಷ ಮೊಬೈಲ್ ಸಂಖ್ಯೆಗಳ ಕರೆಗಳ ಪರೀಶೀಲನೆ ನಡೆಸಿತ್ತು.
ತಮಿಳುನಾಡಿನ ಕಾಂಚೀಪುರಂನಲ್ಲಿ ಕೆಲ ದಿನಗಳ ಹಿಂದೆಯೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ತ್ರಿಶ್ಶೂರಿನ ರಹಸ್ಯ ಸ್ಥಳದಲ್ಲಿ ವಿಚಾರಣೆಗೆ ಗುರಿಪಡಿಸಿ, ಗುರುವಾರ ಬಂಧನವನ್ನು ಘೋಷಿಸಿದರು. ಆರೋಪಿ, ಅಸ್ಸಾಂ ನಲಗಾಂ ಜಿಲ್ಲೆಯ ವಲಸೆ ಕಾರ್ಮಿಕ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿ, ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣ ಎಂದು ಹೇಳಿದ್ದಾನೆ. ಸಂತ್ರಸ್ತೆಯ ಮನೆ ಸಮೀಪ ನಿರ್ಮಾಣ ಕಂಪನಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ.
ಪೊಲೀಸ್ ಹೇಳಿಕೆಯ ಪ್ರಕಾರ, ಘಟನೆ ನಡೆದ ದಿನ ಕ್ಯಾನಲ್‌ಬಂಡ್ ರಸ್ತೆಯಲ್ಲಿದ್ದ ತನ್ನ ಮನೆಯ ಎದುರು ಸಂತ್ರಸ್ತೆ ನಿಂತಿದ್ದಳು. ಆಗ, ಆರೋಪಿ ಅದೇ ಮಾರ್ಗದಿಂದ ಹೋಗುತ್ತಿದ್ದ. ಹಿಂದಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆವರಿಬ್ಬರ ನಡುವೆ ಜಗಳ ನಡೆಯಿತು. ಆದರೆ ಇಸ್ಲಾಂ ವಾಪಸಾದ. ಸಂಜೆ ಕಂಠಪೂರ್ತಿ ಕುಡಿದು ಆಕೆಯನ್ನು ಎಳೆದಾಡಿ, ತಲೆ ಮೇಲೆ ಕಬ್ಬಿಣದ ಸಲಾಕೆಯಿಂದ ಹೊಡೆದ. ಅಂತಿಮವಾಗಿ ಆಕೆ ಪ್ರಜ್ಞೆ ತಪ್ಪಿಬಿದ್ದಾಗ, ಅತ್ಯಾಚಾರಕ್ಕೂ ಯತ್ನಿಸಿದ. ಘಟನೆ ಬಳಿಕ ಅಸ್ಸಾಂಗೆ ರೈಲಿನಲ್ಲಿ ಹೋದ ಇಸ್ಲಾಂ, ಸಿಮ್‌ಕಾರ್ಡ್ ನಾಶಮಾಡಿದ. ಬಳಿಕ ತಮಿಳುನಾಡಿನ ತಂಜಾವೂರಿಗೆ ಹೊಸ ಕೆಲಸಕ್ಕೆ ಬಂದ. ಆದರೆ ಹೊಸ ಮೊಬೈಲ್‌ನಿಂದ ಸ್ನೇಹಿತನಿಗೆ ಕರೆ ಮಾಡಿದ. ಸುಳಿವಿನ ಜಾಡು ಹಿಡಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News