ಶಿಕ್ಷೆ ವಿಧಿಸಲಾದ ವಿದ್ಯಾರ್ಥಿಗಳ ಮೇಲ್ಮನವಿ ಆಲಿಸಲು ಸಮಿತಿ ರಚನೆ

Update: 2016-06-17 18:25 GMT

ಹೊಸದಿಲ್ಲಿ, ಜೂ.17: ಫೆಬ್ರವರಿ 9ರ ವಿವಾದಿತ ಕಾರ್ಯಕ್ರಮದ ಸಂಬಂಧ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವಿಧಿಸಿದ್ದ ಶಿಕ್ಷೆಗೆ ದಿಲ್ಲಿ ಹೈಕೋರ್ಟ್ ತಡೆ ನೀಡಿದ ಒಂದು ತಿಂಗಳ ಬಳಿಕ, ತನ್ನ ತನಿಖೆ ತಂಡದಿಂದ, ತಪ್ಪಿತಸ್ಥರೆಂದು ಶಿಫಾರಸು ಮಾಡಲ್ಪಟ್ಟಿದ್ದ ವಿದ್ಯಾರ್ಥಿಗಳ ಮೇಲ್ಮನವಿಯನ್ನು ಆಲಿಸುವುದಕ್ಕಾಗಿ ವಿಶ್ವವಿದ್ಯಾನಿಲಯವಿಂದು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಫೆ.9ರ ವಿವಾದಿತ ಕಾರ್ಯಕ್ರಮದ ವೇಳೆ, ವಿಶ್ವವಿದ್ಯಾನಿಲಯದ ಅನೇಕ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಉನ್ನತ ಮಟ್ಟದ ತನಿಖೆ ಸಮಿತಿಯು(ಎಚ್‌ಎಲ್‌ಇಸಿ) ದೋಷ ಹೊರಿಸಿರುವ ವಿದ್ಯಾರ್ಥಿಗಳ ಮೇಲ್ಮನವಿಯನ್ನು ಆಲಿಸಲು, ಮೇಲ್ಮನವಿ ಪ್ರಾಧಿಕಾರದ ತನ್ನ ಅಧಿಕಾರದ ನೆಲೆಯಲ್ಲಿ ಉಪಕುಲಪತಿ ತನಗೆ ಸಹಕರಿಸಲು ಸಮಿತಿಯೊಂದನ್ನು ರಚಿಸಿದ್ದಾರೆಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಈ ವರ್ಷ ಫೆಬ್ರವರಿಯಲ್ಲಿ ಜೆಎನ್‌ಯು ಆವರಣದಲ್ಲಿ ಸಂಸದ್ಭವನ ದಾಳಿ ಅಪರಾಧಿ ಅಫ್ಝಲ್‌ಗುರುವನ್ನು ಬೆಂಬಲಿಸಿ ನಡೆಸಿದ್ದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಬಳಿಕ, ವಿವಿಯು ವಿವಾದದ ಕೇಂದ್ರ ಬಿಂದುವಾಗಿತ್ತು.
ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾಕುಮಾರ್ ಸಹಿತ ಮೂವರು ವಿದ್ಯಾರ್ಥಿಗಳನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಎಚ್‌ಎಲ್‌ಇಸಿಯ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ 21 ಮಂದಿ ವಿದ್ಯಾರ್ಥಿಗಳಿಗೆ ಅಮಾನತು, ಹಾಸ್ಟೆಲ್‌ನಿಂದ ಉಚ್ಚಾಟನೆ, ದಂಡ ಇತ್ಯಾದಿ ಶಿಕ್ಷೆಗಳನ್ನು ವಿಧಿಸಲಾಗಿತ್ತು.
ಇದರ ವಿರುದ್ಧ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಿ ದ್ದರು. ವಿವಿ ಅದಕ್ಕೆ ಸೊಪ್ಪುಹಾಕದ ಕಾರಣ ಕೆಲವು ವಿದ್ಯಾರ್ಥಿಗಳು ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ನ ಮೆಟ್ಟಲೇರಿದ್ದರು.
ಈ ಹಿನ್ನೆಲೆಯಲ್ಲಿ ಉಪವಾಸ ಮುಷ್ಕರ ನಿಲ್ಲಿಸುವಂತೆ ಹಾಗೂ ಹೊಸದಾಗಿ ಯಾವುದೇ ಚಳವಳಿ ನಡೆಸದಂತೆ ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಮೇಲ್ಮನವಿ ಪ್ರಾಧಿಕಾರವು ವಿದ್ಯಾರ್ಥಿಗಳ ಮೇಲ್ಮನವಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ವಿವಿ ವಿಧಿಸಿದ್ದ ಶಿಕ್ಷೆಗೆ ಅದು ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News