ಲಂಡನ್: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಲ್ಯ ಪ್ರತ್ಯಕ್ಷ
ಲಂಡನ್, ಜೂ. 18: ಸಾರ್ವಜನಿಕ ರಂಗದ ಹಲವಾರು ಬ್ಯಾಂಕ್‌ಗಳಿಗೆ ಸುಮಾರು 9,000 ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ಗೆ ಪಲಾಯನಗೈದಿರುವ ಉದ್ಯಮಿ ವಿಜಯ ಮಲ್ಯ ಲಂಡನ್‌ನಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದೇ ಸಮಾರಂಭದಲ್ಲಿ ಬ್ರಿಟನ್‌ಗೆ ಭಾರತದ ರಾಯಭಾರಿ ನವತೇಜ್ ಸರ್ನ ಕೂಡ ಪಾಲ್ಗೊಂಡಿದ್ದರು.
ಲೇಖಕ ಸುರೇಲ್ ಸೇಠ್ ಮತ್ತು ಸನ್ನಿ ಸೇನ್ ಬರೆದ ‘ಮಂತ್ರಾಸ್ ಫಾರ್ ಸಕ್ಸೆಸ್: ಇಂಡಿಯಾಸ್ ಗ್ರೇಟೆಸ್ಟ್ ಸಿಇಒಸ್ ಟೆಲ್ ಯು ಹೌ ಟು ವಿನ್’ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಅದಾಗಿತ್ತು.
ಆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾರ್ವಜನಿಕ ಆಹ್ವಾನ ನೀಡಲಾಗಿತ್ತು ಹಾಗೂ ಯಾರೂ ಕೂಡ ಅದರಲ್ಲಿ ಭಾಗವಹಿಸಬಹುದಾಗಿತ್ತು ಎಂದು ಸುಹೇಲ್ ಸೇಠ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಸಭಾಂಗಣದಲ್ಲಿ ಮಲ್ಯ ಇದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಭಾರತೀಯ ಹೈಕಮಿಶನರ್ ಅಸಮಾಧಾನ ವ್ಯಕ್ತಪಡಿಸಿ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಮುಂಚೆಯೇ ಅಲ್ಲಿಂದ ನಿರ್ಗಮಿಸಿದರು ಎಂದರು.
ಪುಸ್ತಕ ಬಿಡುಗಡೆಯ ಬಳಿಕ, ಹೈಕಮಿಶನರ್ ಏರ್ಪಡಿಸಿದ ಸತ್ಕಾರ ಕೂಟಕ್ಕೆ ಮಲ್ಯರನ್ನು ಆಹ್ವಾನಿಸಲಾಗಿಲ್ಲ ಹಾಗೂ ಅವರು ಭಾಗವಹಿಸಲೂ ಇಲ್ಲ ಎಂದು ಸುಹೇಲ್ ಟ್ವೀಟ್ ಮಾಡಿದರು.
ಅನುಷ್ಠಾನ ನಿರ್ದೇಶನಾಲಯದ ಕೋರಿಕೆಯಂತೆ, ಮುಂಬೈಯ ವಿಶೇಷ ನ್ಯಾಯಾಲಯವೊಂದು ಮಲ್ಯರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದ ಬಳಿಕ ಈ ಬೆಳವಣಿಗೆ ಸಂಬಂಧಿಸಿದೆ.
ಸಿಆರ್‌ಪಿಸಿ ವಿಧಿಗಳಂತೆ, ಘೋಷಿತ ಅಪರಾಧಿಯೆಂಬ ತನ್ನ ಹಣೆಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಹಾಜರಾಗಲು ಮಲ್ಯಗೆ 30 ದಿನಗಳ ಸಮಯಾವಕಾಶವಿದೆ.