ಮುಹಮ್ಮದ್ ಮುರ್ಸಿಗೆ ಮತ್ತೊಂದು ಗಲ್ಲು ಶಿಕ್ಷೆ

Update: 2016-06-18 13:28 GMT

ಕೈರೋ, ಜೂ. 18: ಈಜಿಪ್ಟ್‌ನ ಅಧ್ಯಕ್ಷರಾಗಿದ್ದ ಅಲ್ಪಾವಧಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ಕತಾರ್ ಮತ್ತು ದೋಹಾದ ಅಲ್-ಜಝೀರ ಟಿವಿ ಜಾಲಕ್ಕೆ ಪೂರೈಸಿದ ಆರೋಪದಲ್ಲಿ ದೇಶದ ನ್ಯಾಯಾಲಯವೊಂದು ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿ ಮತ್ತು ಇತರ ಐವರಿಗೆ ಮರಣ ದಂಡನೆ ವಿಧಿಸಿದೆ.

ಇದು ಅವರ ಎರಡನೆ ಮರಣ ದಂಡನೆಯಾಗಿದೆ. 2011ರ ಬಂಡಾಯದ ವೇಳೆ ಜೈಲಿನಿಂದ ತಪ್ಪಿಸಿ ಪೊಲೀಸರ ಮೇಲೆ ಆಕ್ರಮಣ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ 2015ರ ಜೂನ್‌ನಲ್ಲಿ ಅವರಿಗೆ ಈಗಾಗಲೇ ಒಂದು ಮರಣ ದಂಡನೆಯನ್ನು ವಿಧಿಸಲಾಗಿದೆ.

ಫೆಲೆಸ್ತೀನ್‌ನ ಹಮಾಸ್ ಚಳವಳಿ, ಲೆಬನಾನ್‌ನ ಶಿಯಾ ಹಿಝ್ಬುಲ್ಲ ಮತ್ತು ಇರಾನ್ ಪರವಾಗಿ ಗೂಢಚಾರಿಕೆ ನಡೆಸಿದ ಆರೋಪದಲ್ಲೂ ಅವರಿಗೆ ಕಳೆದ ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ತನಗೆ ವಿಧಿಸಲಾಗಿರುವ ಎರಡನೆ ಮರಣ ದಂಡನೆ ಶಿಕ್ಷೆಯ ವಿರುದ್ಧ ಮುರ್ಸಿ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಇಬ್ಬರು ಅಲ್-ಜಝೀರ ಉದ್ಯೋಗಿಗಳು ಮತ್ತು ಮುರ್ಸಿಯ ಮುಸ್ಲಿಂ ಬ್ರದರ್‌ಹುಡ್ ಜೊತೆಗೆ ನಂಟು ಇದೆ ಎಂಬುದಾಗಿ ಶಂಕಿಸಲಾದ ಮಾಧ್ಯಮ ಜಾಲ ‘ರಾಸ್ದ್’ನ ಮಾಜಿ ಉದ್ಯೋಗಿ ಆಸ್ಮಾ ಅಲ್-ಖತೀಬ್ ಮರಣ ದಂಡನೆಗೆ ಗುರಿಯಾದ ಇತರರು.

ಅಲ್-ಜಝೀರ ಉದ್ಯೋಗಿಗಳಾದ ಸುದ್ದಿ ನಿರ್ಮಾಪಕಿ ಅಲಾ ಉಮರ್ ಮುಹಮ್ಮದ್ ಮತ್ತು ಸುದ್ದಿ ಸಂಪಾದಕ ಇಬ್ರಾಹೀಂ ಮುಹಮ್ಮದ್ ಹಿಲಾಲ್‌ರ ಅನುಪಸ್ಥಿತಿಯಲ್ಲಿ ಶಿಕ್ಷೆಯನ್ನು ಘೋಷಿಸಲಾಗಿದೆ.

ಮುರ್ಸಿ ಈಜಿಪ್ಟ್‌ನ ಐದನೆ ಹಾಗೂ 2012ರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದಾರೆ. ಆದರೆ, ಅವರು ಅಧಿಕಾರದಲ್ಲಿದ್ದದ್ದು 2012 ಜೂನ್ 30ರಿಂದ 2013 ಜುಲೈ 3ರವರೆಗೆ ಮಾತ್ರ.

ಮುರ್ಸಿಯ ಆಡಳಿತದಲ್ಲಿ ದೇಶ ಮೂಲಭೂತವಾದದತ್ತ ವಾಲುತ್ತಿದೆ ಎಂದು ಆರೋಪಿಸಿದ ಸೇನೆ ಅವರನ್ನು ಉಚ್ಚಾಟಿಸಿ ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್-ಸಿಸಿಯನ್ನು ಅಧಿಕಾರಕ್ಕೆ ತಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News