ಹಾಲೆ ಓಪನ್: ಫೆಡರರ್‌ಗೆ ಅಲೆಕ್ಸಾಂಡರ್ ಆಘಾತ
Update: 2016-06-18 23:21 IST
ಬರ್ಲಿನ್, ಜೂ.18: ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ 9ನೆ ಬಾರಿ ಹಾಲೆ ಓಪನ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದ್ದ ರೋಜರ್ ಫೆಡರರ್‌ಗೆ ಶಾಕ್ ನೀಡಿದ್ದಾರೆ.
ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಅವರು ಜರ್ಮನಿಯ ಯುವ ಆಟಗಾರನಿಗೆ 7-6(4), 5-7, 6-3 ಸೆಟ್‌ಗಳ ಅಂತರದಿಂದ ಶರಣಾದರು.
ಸ್ವಿಸ್‌ನ ವಿಶ್ವದ ನಂ.3ನೆ ಆಟಗಾರ ಫೆಡರರ್ 10 ವರ್ಷಗಳ ಬಳಿಕ ಕಿರಿಯ ಆಟಗಾರನ ವಿರುದ್ಧ ಸೋತಿದ್ದಾರೆ. 2006ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆಗೆ ಫೆಡರರ್ ಸೋತಿದ್ದರು.
ಬೆನ್ನುನೋವಿನಿಂದಾಗಿ ಫ್ರೆಂಚ್ ಓಪನ್‌ನಿಂದ ದೂರವೇ ಉಳಿದಿದ್ದ ಫೆಡರರ್ ಇದೀಗ ಚೇತರಿಸಿಕೊಂಡಿದ್ದಾರೆ. ಅವರಿಗೆ ಮುಂಬರುವ ವಿಂಬಲ್ಡನ್ ಟೂರ್ನಿಗೆ ಹಾಲೆ ಓಪನ್ ಪೂರ್ವ ತಾಲೀಮು ಎನಿಸಿಕೊಂಡಿತ್ತು.