×
Ad

ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

Update: 2016-06-18 23:29 IST

ಹೊಸದಿಲ್ಲಿ, ಜೂ.18: ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಭಾರತೀಯ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಕ್ರೀಡಾಪಟುಗಳು, ಇಡೀ ದೇಶದ ಜನತೆ ಶ್ಲಾಘನೆ ವ್ಯಕ್ತಪಡಿಸಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿರುವ ಹಾಕಿ ಇಂಡಿಯಾಕ್ಕೆ ಅಭಿನಂದನೆಗಳು. ಆಟಗಾರರ ಪ್ರಯತ್ನ ಶ್ಲಾಘನೀಯ. ನಮಗೆಲ್ಲರಿಗೂ ತಂಡದ ಮೇಲೆ ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್ ಕೂಡ ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಕಿ ಇಂಡಿಯಾ ಉತ್ತಮ ಪ್ರಯತ್ನಪಟ್ಟಿದೆ. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಎಡವಿದೆ. ಆದಾಗ್ಯೂ ನಮ್ಮೆಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಫೈನಲ್‌ನಲ್ಲಿ ಉತ್ತಮ ಹೋರಾಟ ನೀಡಿರುವ ಭಾರತದ ಹಾಕಿ ತಂಡಕ್ಕೆ ಅಭಿನಂದನೆಗಳು. ಮುಂಬರುವ ಪಂದ್ಯಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲಿ ಎಂಬುದು ನನ್ನ ಹಾರೈಕೆ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದರು.

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತೀಯ ಹಾಕಿ ತಂಡ ಹೋರಾಟಕಾರಿ ಪ್ರದರ್ಶನ ನೀಡಿತ್ತು. ಎಲ್ಲ ಶ್ಲಾಘನೆಗೆ ತಂಡ ಅರ್ಹವಾಗಿದೆ. ಭಾರತಕ್ಕೆ ಗೌರವ ತಂದಿರುವ ತಂಡಕ್ಕೆ ಅಭಿನಂದನೆಗಳು ಎಂದು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಹಾಗು ಕೇಂದ್ರ ಸಚಿವರೂ ಆಗಿರುವ ರಾಜ್ಯವರ್ಧನ್ ಸಿಂಗ್ ಹೇಳಿದ್ದಾರೆ.

ಶಟ್ಲರ್ ಪಿ.ಕಶ್ಯಪ್ ಹಾಗೂ ಶೂಟರ್ ಜೋದೀಪ್ ಕರ್ಮಾಕರ್ ತಂಡದ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರದರ್ಶನಕ್ಕೆ ಹಾಕಿ ಸಮುದಾಯ ಪ್ರಶಂಸೆ ವ್ಯಕ್ತಪಡಿಸಿದೆ. ಹೀರೊ ಹಾಕಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನಮ್ಮ ತಂಡದ ಪ್ರದರ್ಶನ ಶ್ಲಾಘನೀಯ. ಬೆಳ್ಳಿ ಪದಕ ಜಯಿಸಿದ ತಂಡಕ್ಕೆ ಅಭಿನಂದನೆ. ದೇಶ ಹೆಮ್ಮೆಪಡುವಂತಾಗಲು ನಾವು ಮುಂದೆಯೂ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಖಾಯಂ ನಾಯಕ ಸರ್ದಾರ್ ಸಿಂಗ್ ಹೇಳಿದ್ದಾರೆ.

ಹುಡುಗರೇ ನಿಮ್ಮ ಪ್ರಯತ್ನ ನನಗೆ ಹೆವ್ಮೆು ತಂದಿದೆ. ನೀವೆಲ್ಲರೂ ಶಕ್ತಿಮೀರಿ ಆಡಿದ್ದೀರಿ ಎಂದು ರೂಪಿಂದರ್ ಪಾಲ್ ಸಿಂಗ್ ಹೇಳಿದ್ದಾರೆ.

ಸರ್ದಾರ್ ಸಿಂಗ್ ಅನುಪಸ್ಥಿತಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಪಿ.ಆರ್.ಶ್ರೀಜೇಶ್ ಪ್ರತಿಕ್ರಿಯಿಸುತ್ತಾ, ‘‘ನಾವು ಪಂದ್ಯವನ್ನು ಸೋತಿರಬಹುದು. ಆದರೆ. ಮಿಲಿಯನ್ ಜನರ ಹೃದಯವನ್ನು ಗೆದ್ದಿದ್ದೇವೆ. ಬೆಳ್ಳಿ ಜಯಿಸಿದ ಹುಡುಗರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಹಾಕಿ ಇಂಡಿಯಾದಿಂದ ಬಹುಮಾನ ಘೋಷಣೆ

ಲಂಡನ್, ಜೂ.18: ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿ ಬೆಳ್ಳಿ ಪದಕವನ್ನು ಜಯಿಸಿ ಮಹತ್ತರ ಸಾಧನೆ ಮಾಡಿರುವ ಆಟಗಾರರು ಹಾಗೂ ತಂಡದ ಅಧಿಕಾರಿಗಳಿಗೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಪದಕ ಪ್ರದಾನ ಸಮಾರಂಭ ಕೊನೆಗೊಂಡ ತಕ್ಷಣ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಹಾಕಿ ಇಂಡಿಯಾದ ಅಧ್ಯಕ್ಷ ನರೇಂದ್ರ ಬಾತ್ರಾ, ಬಹುಮಾನವನ್ನು ಘೋಷಿಸಿದರು.

‘‘ಆಸ್ಟ್ರೇಲಿಯ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಜಯಿಸಿದೆ. ಆದರೆ, ನನ್ನ ಪ್ರಕಾರ ಭಾರತ ಕೂಡ ವಿಜೇತ ತಂಡವಾಗಿದೆ ಎಂದು ವಿವಾದಾತ್ಮಕ ಶೂಟೌಟ್‌ನಲ್ಲಿ ಭಾರತದ ಮೇಲ್ಮನವಿಯನ್ನು ತೀರ್ಪುಗಾರರು ತಿರಸ್ಕರಿಸಿದ ಬಳಿಕ ಸುದ್ದಿಗಾರರಿಗೆ ಬಾತ್ರಾ ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ತಂಡ ನಿಗದಿತ ಸಮಯದಲ್ಲಿ ಗೋಲು ಬಾರಿಸಲು ವಿಫಲವಾದವು. ಈ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್‌ನ್ನು ಮೊರೆ ಹೋಗಲಾಯಿತು. ಪೆನಾಲ್ಟಿಯಲ್ಲಿ ಭಾರತ 1-3 ಗೋಲುಗಳ ಅಂತರದಿಂದ ಸೋಲುಂಡಿತು.

ಪ್ರತಿ ಆಟಗಾರರು ಹಾಗೂ ಮುಖ್ಯ ಕೋಚ್ ತಲಾ 2 ಲಕ್ಷ ರೂ. ಹಾಗೂ ಉಳಿದ ಸಿಬ್ಬಂದಿ ವರ್ಗ 1 ಲಕ್ಷ ರೂ. ಸ್ವೀಕರಿಸಲಿದ್ದಾರೆ ಎಂದು ಹಾಕಿ ಇಂಡಿಯಾದ ಮುಖ್ಯಸ್ಥರು ತಿಳಿಸಿದ್ದಾರೆ.

ಟೂರ್ನಮೆಂಟ್‌ನಲ್ಲಿ ಯುವ ಆಟಗಾರ ಪ್ರಶಸ್ತಿ ಗೆದ್ದುಕೊಂಡಿರುವ ಯುವ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್‌ಗೆ ಹೆಚ್ಚುವರಿ 1 ಲಕ್ಷ ರೂ. ಪ್ರಶಸ್ತಿ ನೀಡಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News