×
Ad

ಕೇರಳದಲ್ಲಿ ಭುಗಿಲೆದ್ದ ದಲಿತ ಸೋದರಿಯರ ಬಂಧನ ವಿವಾದ

Update: 2016-06-18 23:50 IST

ತಲಶ್ಶೇರಿ(ಕೇರಳ), ಜೂ.18: ಇಲ್ಲಿನ ಸಿಪಿಎಂ ಕಾರ್ಯಕರ್ತನೊಬ್ಬನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನೊಬ್ಬನ ಪುತ್ರಿಯರಾದ ಇಬ್ಬರುದಲಿತ ಸೋದರಿಯರ ಬಂಧನವು ಕೇರಳದಲ್ಲಿ ವಿವಾದವೊಂದಕ್ಕೆ ಚಾಲನೆ ನೀಡಿದೆ. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ.

ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ(ಇಂಟಕ್) ನಾಯಕ ಎನ್. ರಾಜನ್ ಎಂಬವರ ಪುತ್ರಿಯರಾಗಿರುವ ಅಖಿಲಾ(30) ಹಾಗೂ ಅಂಜನಾ(25) ಎಂಬವರಿಗೆ ನಿನ್ನೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಲಾಗಿತ್ತು. ಅಲ್ಲಿ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಯುವತಿಯರ ಮೇಲೆ ಜಾಮೀನು ರಹಿತ ಆರೋಪ ಹೊರಿಸಿದ ಬಳಿಕ, ಅವರನ್ನು ಮಹಿಳಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಅಖಿಲಾ ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಕಾರಾಗೃಹ ಸೇರಿದ್ದಾಳೆಂದು ಕುಟುಂಬದ ಮೂಲಗಳೂ ತಿಳಿಸಿವೆ.

ಈ ಯುವತಿಯರು ಇಲ್ಲಿನ ಸಿಪಿಎಂ ಕಚೇರಿಗೆ ನುಗ್ಗಿ, ಎಂ. ಶಿಜಿನ್ ಎಂಬ ಕಾರ್ಯಕರ್ತರ ಮೇಲೆ ಕೆಲವು ದಿನಗಳ ಹಿಂದೆ ಹಲ್ಲೆ ನಡೆಸಿದ್ದರೆಂಬ ಪಕ್ಷದ ದೂರಿನ ಮೇಲೆ ಅವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ಹೇಳುತ್ತಿದ್ದಾರೆ.

ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ರಾಜನ್, ಪ್ರಕರಣವು ‘ರಾಜಕೀಯ ಪ್ರೇರಿತ’ವೆಂದು ಆರೋಪಿಸಿದ್ದಾರೆ.

ಸಿಪಿಎಂ ಕಚೇರಿಯ ಮುಂದೆ ತನ್ನ ಪುತ್ರಿಯರು ಹಾದು ಹೋಗುತ್ತಿದ್ದಾಗ ಶಿಜಿನ್ ಅವರನ್ನು ಜಾತಿಯ ಹೆಸರಲ್ಲಿ ಕರೆದು ಗೇಲಿ ಮಾಡಿದ್ದನು. ಅದನ್ನು ಅವರು ಕೇವಲ ಪ್ರಶ್ನಿಸಿದ್ದರೆಂದು ಕಳೆದ ಸ್ಥಳೀಐ ಸಂಸ್ಥೆಯ ಚುನಾವಣೆಯಲ್ಲಿ ಸಿಪಿಎಂ ವಿರುದ್ಧ ಸ್ಪರ್ಧಿಸಿದ್ದ ರಾಜನ್ ಹೇಳಿದ್ದಾರೆ.

ತನ್ನ ಪುತ್ರಿಯರು ಸಿಪಿಎಂ ಕಚೇರಿ ಪ್ರವೇಶಿಸಿದಾಗ ಕಾರ್ಯಕರ್ತರು ಅವರ ಮೇಲೆ ಕೈ ಮಾಡಿದ್ದರು. ಅದೇ ದಿನ ಅವರು ತಮ್ಮ ಮನೆಯ ಮೇಲೂ ದಾಳಿ ನಡೆಸಿದ್ದರೆಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ, ತಾವು ಪ್ರಕರಣದಲ್ಲಿ ಮಧ್ಯಪ್ರವೇಶಿಸುತ್ತೇವೆಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪಿ.ಎಲ್. ಪುನಿಯಾ ದಿಲ್ಲಿಯಲ್ಲಿ ಮಲಯಾಳ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News