ಉಡ್ತಾ ಕರಾವಳಿ ಚಿತ್ರದ ನಿರೀಕ್ಷೆಯಲ್ಲಿ...
ಮಾನ್ಯರೆ,
ಉಡ್ತಾ ಪಂಜಾಬ್ ಹಿಂದಿ ಚಲನಚಿತ್ರದ ಸೆನ್ಸಾರ್ ವಿವಾದ ಪ್ರಸಿದ್ದಿ ಪಡೆದ ಮೇಲೆ ಪಂಜಾಬಿನ ಡ್ರಗ್ಸ್ ಹಾವಳಿ ಬಗ್ಗೆ ಈಗ ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ. ಪಂಜಾಬಿನಂತೆ ನಮ್ಮ ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲೂ ಡ್ರಗ್ ಹಾವಳಿ ಘೋರವಾಗಿದೆ. ಕರಾವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ವೃತ್ತಿಪರ ಖಾಸಗಿ ಕಾಲೇಜುಗಳ ಆಧುನಿಕ ವಿದ್ಯಾರ್ಥಿಗಳಿಗೆ ಮೊದಲನೆಯ ಸೆಮಿಸ್ಟರಿನಲ್ಲಿಯೇ ಡ್ರಗ್ ಅಭ್ಯಾಸ ಮಾಡಿಸುವ ವ್ಯವಸ್ಥಿತ ಜಾಲವೇ ಮಂಗಳೂರು-ಮಣಿಪಾಲಗಳಲ್ಲಿವೆಯಂತೆ. ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲ ವಿದ್ಯಾರ್ಥಿನಿಯರೂ ಲೈಫ್-ಸ್ಟೈಲ್-ಡ್ರಗ್ಸ್ ಎಂಬ ಮಾದಕ ದ್ರವ್ಯದ ದಾಸರಾಗಿದ್ದಾರೆ. ಕೆಲವು ಮೆಡಿಕಲ್ ಅಂಗಡಿಗಳು ಹೆಸರಿಗೆ ಮಾತ್ರ ಔಷಧ ಅಂಗಡಿ ಎಂಬ ಬೋರ್ಡ್ ಹಾಕಿಕೊಂಡು ಕೇವಲ ಲೈಫ್-ಸ್ಟೈಲ್-ಡ್ರಗ್ಸ್ ಮಾರುತ್ತವೆ. ಪಾನ್-ಬೀಡಿ ಗೂಡಂಗಡಿಗಳೂ ಗಾಂಜಾ ಡ್ರಗ್ಸ್ ಮಾರುತ್ತವೆ. ಡ್ರಗ್ ಮಾಫಿಯಾಗಳ ರಕ್ಷಣೆಗೆ ರಾಜಕಾರಣಿಗಳು ಹಾಗೂ ಪೊಲೀಸರೂ ಇದ್ದಾರಂತೆ. ಇದರ ವಿತರಣೆಗೆ ಧಾರ್ಮಿಕ ಮುಖವಾಡದ ದಳ-ಸೇನೆಗಳು ಇವೆ. ಕರಾವಳಿಯಲ್ಲಿ ಅನೈತಿಕ ಪೊಲೀಸ್ ಗಿರಿ ಮಾಡುವ ಪುಂಡರ ಗುಂಪುಗಳೆಲ್ಲಾ ಗಾಂಜಾದ ದಾಸರೇ ಆಗಿದ್ದಾರೆ. ಹಿಂದೂ ಮಾಫಿಯಾ ಮತ್ತು ಮುಸ್ಲಿಂ ಮಾಫಿಯಾಗಳ ನಡುವೆ ಡ್ರಗ್ಸ್ ಮಾರುವ ಏರಿಯಾದ ಬಗ್ಗೆ ವಿವಾದ ಹುಟ್ಟಿ ಹೊಡೆದಾಟ-ಕೊಲೆ ಆದರೆ ಆಗ ಅದಕ್ಕೆ ಕೋಮು ಬಣ್ಣ ಬಳಿಯಲಾಗುತ್ತದೆ. ಉಡ್ತಾ ಪಂಜಾಬ್ ಎಂಬ ಹಿಂದಿ ಚಿತ್ರದಂತೆ ತೇಲುವ ತುಳುನಾಡು ಅಥವಾ ಹಾರುವ ಕರಾಳ-ವಳಿ (ಕರಾವಳಿ) ಎಂಬ ತುಳು-ಕನ್ನಡ ಚಲಚಿತ್ರ ನಿರ್ಮಿಸಿದರೆ ನಿರ್ಮಾಪಕರಿಗೆ ಒಳ್ಳೆಯ ಲಾಭ ಸಿಗಬಹುದು .