×
Ad

ರಾಜನ್ ವಿರುದ್ಧ ಆರೆಸ್ಸೆಸ್, ಬಿಜೆಪಿ ಸಚಿವರ ಲಾಬಿ

Update: 2016-06-19 23:20 IST

ಹೊಸದಿಲ್ಲಿ, ಜೂ.19: ಆರ್‌ಬಿಐ ಗವರ್ನರ್ ರಘುರಾಮ ರಾಜನ್ ವಿರುದ್ಧ ಆರೆಸ್ಸೆಸ್ ಮತ್ತು ಕೆಲವು ಬಿಜೆಪಿ ಸದಸ್ಯರು ಲಾಬಿ ನಡೆಸುತ್ತಿದ್ದಾರೆ ಎಂದು ರವಿವಾರ ಆರೋಪಿಸಿದ ಕಾಂಗ್ರೆಸ್, ಎರಡನೆ ಅವಧಿಯನ್ನು ಬಯಸದಿರುವ ರಾಜನ್ ನಿರ್ಧಾರವು ದೇಶದ ಪಾಲಿಗೆ ಅತ್ಯಂತ ಅಹಿತಕರ ಸಂಗತಿಯಾಗಿದೆ ಎಂದು ಹೇಳಿದೆ.

 ರಾಜನ್ ಅವರ ಮಟ್ಟದ ವ್ಯಕ್ತಿ ಈಗಿನ ಸರಕಾರಕ್ಕೆ ಬೇಕಾಗಿಲ್ಲ ಎಂದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು, ಕಾರಣ ತನಗೆ ಗೊತ್ತಿಲ್ಲ. ಆದರೆ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ಕೆಲವು ಬಿಜೆಪಿ ವಕ್ತಾರರು, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಇವರೆಲ್ಲ ಮಾತನಾಡುತ್ತಿರುವ ರೀತಿಯನ್ನು ಗಮನಿಸಿದರೆ ಆರೆಸ್ಸೆಸ್ ಸೇರಿದಂತೆ ಇವರಲ್ಲಿ ಕೆಲವರು ರಾಜನ್ ವಿರುದ್ಧ ಲಾಬಿ ಮಾಡುತ್ತಿದ್ದಾರೆ ಎಂದರು. ರಾಜನ್ ಎರಡನೆ ಅವಧಿಗೆ ಮುಂದುವರಿಯದಿರಲು ನಿರ್ಧರಿಸಿರುವುದು ಹಿತಕರ ಸುದ್ದಿಯಲ್ಲ ಎಂದು ಅವರು ಹೇಳಿದರು.
ಇಂತಹುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಆರ್‌ಜೆಡಿ ವಕ್ತಾರ ಮನೋಜ್ ಝಾ ಅವರು, ರಾಜನ್ ಕೈಗೊಂಡಿದ್ದ ಕ್ರಮಗಳು ಅತ್ಯಂತ ಸುರಕ್ಷಿತ ಮತ್ತು ಸುಭದ್ರ ಎನ್ನುವ ಭಾವನೆ ಜನರಲ್ಲಿದೆ ಎಂದರು.
ಆದರೆ ಇತ್ತೀಚಿನ ಕೆಲವು ದಿನಗಳಿಂದ ರಾಜನ್ ಅವರ ಸಾಧನೆ ಮತ್ತು ಕಾರ್ಯ ನಿರ್ವಹಣೆಯ ಕುರಿತು ಬೆಟ್ಟು ಮಾಡಲಾಗುತ್ತಿದೆ. ಅವರ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಹೀಗಿರುವಾಗ ನೈತಿಕ ನೆಲೆಗಟ್ಟು ಹೊಂದಿರುವ,ತನ್ನ ವೌಲ್ಯಗಳಿಗೆ ಬದ್ಧರಾಗಿರುವ ರಾಜನ್‌ರಂತಹ ವ್ಯಕ್ತಿ ಬೇರೇನು ಮಾಡಲು ಸಾಧ್ಯ? ಎರಡನೆ ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲು ಅವರು ಬಯಸಿದ್ದರೆ, ಅವರು ಸ್ವಾಮಿಯವರಂತಹ ವ್ಯಕ್ತಿಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತಿತ್ತು ಎಂದರು.
ರಾಜನ್ ವಿರುದ್ಧ ನಿರಂತರ ದಾಳಿಯನ್ನು ನಡೆಸುತ್ತಿದ್ದ ಸ್ವಾಮಿ ಮುಂದಿನ ಅವಧಿಗೆ ಮುಂದುವರಿಯದಿರುವ ಅವರ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ವಾಸ್ತವವನ್ನು ಮರೆಮಾಚಲು ಅವರು ಯಾವುದೇ ಮಾರ್ಗ ಅನುಸರಿಸಲಿ..ಜನರು ಅದನ್ನು ಮರೆತು ಅವರಿಗೆ ಶುಭವಿದಾಯವನ್ನು ಕೋರಬೇಕು ಎಂದಿದ್ದಾರೆ.
ರಾಜನ್ ನಿರ್ಧಾರವು ತನಗೆ ನಿರಾಶೆಯ ಜೊತೆಗೆ ಗಾಢನೋವನ್ನುಂಟು ಮಾಡಿದೆ. ಆದರೆ ಇದು ತನಗೆ ಅಚ್ಚರಿಯನುಂಟು ಮಾಡಿಲ್ಲ. ಈಗಿನ ಸರಕಾರಕ್ಕೆ ರಾಜನ್‌ರಂತಹ ವ್ಯಕ್ತಿಗಳು ಬೇಕಾಗಿಲ್ಲ ಎಂದು ಮಾಜಿ ವಿತ್ತಸಚಿವ ಪಿ.ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News