×
Ad

ವಿಶ್ವಸಂಸ್ಥೆಯ ಮೇಲೆ ಪರ್ವತಾಸನ!

Update: 2016-06-20 18:53 IST

ವಿಶ್ವಸಂಸ್ಥೆ, ಜೂ.20: ವಿಶ್ವಸಂಸ್ಥೆಯು ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧವಾಗಿರುವಂತೆಯೇ, ಜಾಗತಿಕ ಸಂಸ್ಥೆಯ ಮುಖ್ಯಾಲಯದ ಮೇಲೆ ಯೋಗಾಸನವೊಂದರ ಚಿತ್ರವನ್ನು ಬಿಂಬಿಸಲಾಗಿದೆ.
ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಸಹ ಈ ಕುರಿತು ಟ್ವೀಟಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಯೋಗವು ಪ್ರಜ್ವಲಿಸಲು ಸಿದ್ಧವಾಗಿದೆ. 2016ರ ಅಂತಾರಾಷ್ಟ್ರೀಯ ಯೋಗ ದಿನಕ್ಕಾಗಿ ಚಾರಿತ್ರಿಕ ವಿಶ್ವಸಂಸ್ಥೆಯ ಮುಖ್ಯಾಲಯದ ಮೇಲೆ ಯೋಗ ಭಂಗಿಯನ್ನು ಬಿಂಬಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮೇಲೆ ಹಾಕಲಾಗಿರುವ ಚಿತ್ರವು ಮಹಿಳೆಯೊಬ್ಬಳು ‘ಪರ್ವತಾಸನ’ ಮಾಡುತ್ತಿರುವುದನ್ನು ತೋರಿಸುತ್ತಿದೆ. ಅದು ತಲೆ ಕೆಳಗಾದ ಇಂಗ್ಲಿಷ್‌ನ ‘ವಿ’ ಅಕ್ಷರದಂತಿದೆ. ಅದರ ಅಡಿಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಬರೆಯಲಾಗಿದೆ.
ವಿಶ್ವಸಂಸ್ಥೆಯ ಭಾರತದ ಕಾಯಂ ನಿಯೋಗವು ವಿಶ್ವಸಂಸ್ಥೆಯ ಸಾರ್ವಜನಿಕ ಮಾಹಿತಿ ಇಲಾಖೆಯ ಸಹಯೋಗದಲ್ಲಿ ವಿಶ್ವಸಂಸ್ಥೆಯ ಮುಖ್ಯಾಲಯದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತದೆ. ಕಾರ್ಯಕ್ರಮದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷ ಮೋರ್ಗನ್ಸ್ ಲಿಕೆಟೋಫ್, ಸಂಪರ್ಕ ಹಾಗೂ ಸಾರ್ವಜನಿಕ ಮಾಹಿತಿಯ ಅಧೀನ ಮಹಾಕಾರ್ಯದರ್ಶಿ ಕ್ರಿಸ್ಟಿನಾ ಗಲ್ಲಾಚ್ ಹಾಗೂ ಈಶ ಫೌಂಡೇಶನ್‌ನ ಸ್ಥಾಪಕ ಹಾಗೂ ಆಧ್ಯಾತ್ಮಿಕ ನಾಯಕ ಜಗ್ಗಿ ಸದ್ಗುರು ಭಾಗವಹಿಸಲಿದ್ದಾರೆ. ಜಗ್ಗಿ ಸದ್ಗುರು ಸರಳ ಯೋಗಾಭ್ಯಾಸದ ನೇತೃತ್ವ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯೋಗದ ಕುರಿತು ಮಂತ್ರ ಗಾಯನ ನಡೆಯಲಿದೆ. ಖ್ಯಾತ ಬ್ರಿಟಿಶ್ ಗಾಯಕಿ ತಾನ್ಯಾ ವೆಲ್ಸ್ ಸಂಸ್ಕೃತ ಶ್ಲೋಕಗಳನ್ನು ಪಠಿಸಲಿದ್ದಾರೆ.
ಈ ವರ್ಷದ ಯೋಗ ಸಮಾರಂಭವು, ಯೋಗವೊಂದು ಪರಿಪೂರ್ಣ ಕ್ರಮವೇ ಹೊರತು ಕೇವಲ ದೈಹಿಕ ಚಟುವಟಿಕೆಯಲ್ಲ ಹಾಗೂ ಅದು ತಾಳಿಕೆಯ ಅಭಿವೃದ್ಧಿ ಗುರಿಯನ್ನು ಸಾಧಿಸಲು ಹೇಗೆ ಸಹಾಯ ಮಾಡಬಲ್ಲುದು ಎಂಬ ಕುರಿತು ಹೆಚ್ಚುತ್ತಿರುವ ಜಾಗೃತಿಯ ಬಗ್ಗೆ ವಿಶೇಷ ಒತ್ತು ನೀಡಲಿದೆಯೆಂದು ಅಕ್ಬರುದ್ದೀನ್ ಈ ವಾರಾರಂಭದಲ್ಲಿ ತಿಳಿಸಿದ್ದರು.
ಯೋಗ ದಿನಕ್ಕಾಗಿ ವಿಭಿನ್ನ ದೇಶಗಳ ಭಾರೀ ಸಂಖ್ಯೆಯ ಜನರ ಆಗಮನವನ್ನು ನಿರೀಕ್ಷಿಸಲಾಗಿದೆ. ವಿಶ್ವಸಂಸ್ಥೆಯ ಕಾರ್ಯಾಲಯ ವೃತ್ತದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇದುವರೆಗೆ 100 ದೇಶಗಳ ಜನರು ನೋಂದಣಿ ಮಾಡಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಂತ್ರಜ್ಞರು, ಯೋಗವು ತಮ್ಮ ಜೀವನ ಕ್ರಮಗಳ ಮೇಲೆ ಹೇಗೆ ಪ್ರಭಾವ ಬೀರಿದೆಯೆಂಬ ಕುರಿತು ಸ್ವ-ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಯೋಗ ದಿನಕ್ಕೆ ಪೂರ್ವಭಾವಿಯಾಗಿ, ಭಾರತೀಯ ನಿಯೋಗವು ‘ಯೋಗಗುರುಗಳೊಂದಿಗೆ ಸಂಭಾಷಣೆ’ಯನ್ನು ಆಯೋಜಿಸಲಾಗಿದೆ. ಅದು ಯೋಗದ ವಿಶೇಷತೆ ಹಾಗೂ ತಾಳಿಕೆಯ ಅಭಿವೃದ್ಧಿ ಗುರಿಯನ್ನು ಸಾಧಿಸುವಲ್ಲಿ ಅದರ ಪಾತ್ರದ ಕುರಿತು ನಮ್ಮ ಒಟ್ಟು ತಿಳುವಳಿಕೆಯನ್ನು ಶ್ರೀಮಂತಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಜಗ್ಗಿ ಸದ್ಗುರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News