×
Ad

ಅಮೆರಿಕ ತಂಡಕ್ಕೆ ಅರ್ಜೆಂಟೀನ ಎದುರಾಳಿ

Update: 2016-06-20 23:07 IST

 ಹೌಸ್ಟನ್, ಜೂ.20: ಶತಕದ ಸಂಭ್ರಮದಲ್ಲಿರುವ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಕನಸು ಈಡೇರಿಸಿಕೊಂಡಿರುವ ಆತಿಥೇಯ ಅಮೆರಿಕ ತಂಡ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.

ಇತ್ತೀಚೆಗೆ ಜರ್ಮನಿ ಹಾಗೂ ಹಾಲೆಂಡ್ ವಿರುದ್ಧ ಸೌಹಾರ್ದ ಪಂದ್ಯದಲ್ಲಿನ ಗೆಲುವು ಹಾಗೂ 2014ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ಅಮೆರಿಕದ ವಿಶ್ವಾಸವನ್ನು ಹೆಚ್ಚಿಸಿದೆ.

‘‘ನಾವು ಕೋಪಾ ಅಮೆರಿಕ ಟೂರ್ನಿಯನ್ನು ಗೆಲ್ಲದೇ ಇರಲು ಕಾರಣವೇ ಇಲ್ಲ. ನಾವು ಕಳೆದ ಕೆಲವು ವರ್ಷಗಳಿಂದ ವಿಶ್ವದೆಲ್ಲೆಡೆ ಪ್ರಯಾಣಿಸಿದ್ದು, ಕಠಿಣವಾದ ಸೌಹಾರ್ದ ಪಂದ್ಯಗಳನ್ನು ಗೆದ್ದುಕೊಂಡಿದ್ದೇವೆ’’ ಎಂದು ಜುರ್ಗನ್ ಕ್ಲಿನ್ಸ್‌ಮನ್ ಅಭಿಪ್ರಾಯಪಟ್ಟರು.

  ‘‘ಎರಡು ವರ್ಷಗಳ ಹಿಂದೆ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅಮೆರಿಕ ತಂಡ ಕಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡವನ್ನು ಹಾಗೂ ಬಲಿಷ್ಠ ಘಾನಾ ತಂಡವನ್ನು ಮಣಿಸಿ, ಜರ್ಮನಿ ತಂಡದೊಂದಿಗೆ ಮುಂದಿನ ಸುತ್ತಿಗೆ ಪ್ರವೇಶ ಪಡೆದಿತ್ತು. ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಮ್ಮ ತಂಡ ಗ್ರೂಪ್ ಹಂತವನ್ನು ದಾಟುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪೋರ್ಚುಗಲ್ ಹಾಗೂ ಘಾನಾ ತಂಡವನ್ನು ಸ್ಪರ್ಧೆಯಲ್ಲಿ ಹಿಂದಕ್ಕೆ ತಳ್ಳಿ ನಾವು ಈ ಸಾಧನೆ ಮಾಡಿದ್ದೆವು. ಪ್ರಸ್ತುತ ಟೂರ್ನಿಯ ನಾಕೌಟ್ ಹಂತದ ಪಂದ್ಯದಲ್ಲಿ ಏನೂ ಕೂಡ ನಡೆಯಬಹುದು. ನಮ್ಮ ವಿರುದ್ಧ ಯಾವುದೇ ತಂಡವಾಗಿದ್ದರೂ ಸಮಬಲದ ಹೋರಾಟ ನೀಡುವೆವು’’ ಎಂದು ಕ್ಲಿನ್ಸ್‌ಮನ್ ಹೇಳಿದ್ದಾರೆ.

  ಮೂವರು ಆಟಗಾರರಾದ ಮಿಡ್‌ಫೀಲ್ಡರ್ ಜೆರ್ಮೈನ್ ಜೋನ್ಸ್, ಅಲೆಜಾಂಡ್ರೊ ಬೆಡೊಯಾ ಹಾಗೂ ಸ್ಟ್ರೈಕರ್ ಬಾಬ್ಬಿವುಡ್ ಅಮಾನತುಗೊಂಡಿರುವುದು ಅಮೆರಿಕದ ಫೈನಲ್‌ಗೇರುವ ಆಸೆಗೆ ಹಿನ್ನಡೆ ಉಂಟು ಮಾಡಿದೆ. ಈ ಮೂವರು ಟೂರ್ನಿಯಲ್ಲಿ ಅಮೆರಿಕದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದರು.

 ಮತ್ತೊಂದೆಡೆ, ಕಳೆದ ನಾಲ್ಕು ಪಂದ್ಯಗಳಲ್ಲಿ 14 ಗೋಲುಗಳನ್ನು ಬಾರಿಸಿರುವ ಅರ್ಜೆಂಟೀನ ಉತ್ತಮ ಫಾರ್ಮ್‌ನಲ್ಲಿದೆ. ಶನಿವಾರ ವೆನೆಝುವೆಲಾ ತಂಡದ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ತಂಡ 4-1 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ 54ನೆ ಗೋಲು ಬಾರಿಸಿದ್ದ ಮೆಸ್ಸಿ ತಮ್ಮದೇ ದೇಶದ ಗಾಬ್ರಿಯೆಲ್ ಬಾಟಿಸ್ಟುಟ ದಾಖಲೆಯನ್ನು ಸರಿಗಟ್ಟಿದ್ದರು.

‘‘ನಾವು ಗೆಲುವಿನ ಹಳಿಯಲ್ಲಿದ್ದೇವೆ. ಅಮೆರಿಕದ ಪ್ರೇಕ್ಷಕರ ಎದುರು ಆಡುವುದು ಅತ್ಯಂತ ಕಷ್ಟಕರ. ದೈಹಿಕವಾಗಿಯೂ ಆ ತಂಡ ತುಂಬಾ ಬಲಿಷ್ಠ. ಅವರಿಗೆ ಆಡಲು ಅವಕಾಶ ನೀಡಿದರೆ ಸಾಕಷ್ಟು ಹಾನಿ ಮಾಡಬಲ್ಲರು’’ ಎಂದು ಮೆಸ್ಸಿ ತನ್ನ ತಂಡದ ಸದಸ್ಯರಿಗೆ ಎಚ್ಚರಿಸಿದರು.

 ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಕಳೆದ ವರ್ಷ ಚಿಲಿಯಲ್ಲಿ ನಡೆದ ಕೋಪಾ ಅಮರಿಕ ಟೂರ್ನಿ ಫೈನಲ್ ಹಾಗೂ 2014ರಲ್ಲಿ ಜರ್ಮನಿಯ ವಿರುದ್ಧ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News