×
Ad

ಯುರೋ ಕಪ್: ಫ್ರಾನ್ಸ್-ಸ್ವಿಟ್ಝರ್ಲೆಂಡ್ ಪಂದ್ಯ ಗೋಲುರಹಿತ ಡ್ರಾ

Update: 2016-06-20 23:09 IST

ಲಿಲ್ಲ್ಲೆ, ಜೂ.20: ಆತಿಥೇಯ ಫ್ರಾನ್ಸ್ ಹಾಗೂ ಸ್ವಿಟ್ಝರ್ಲೆಂಡ್ ತಂಡಗಳ ನಡುವಿನ ಯುರೋ ಕಪ್‌ನ ಎ ಗುಂಪಿನ ಪಂದ್ಯ ಗೋಲುರಹಿತ ಡ್ರಾಗೊಂಡಿದೆ. ಈ ಫಲಿತಾಂಶದಿಂದಾಗಿ ಸ್ವಿಸ್ ತಂಡ ಯುರೋ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೆ ಪ್ರಯತ್ನದಲ್ಲಿ ಮೊದಲ ಬಾರಿ ಅಂತಿಮ-16ರಲ್ಲಿ ಅರ್ಹತೆ ಪಡೆದಿದೆ.

ಫ್ರಾನ್ಸ್ ತಂಡ ಎ ಗುಂಪಿನಲ್ಲಿ ಏಳಂಕವನ್ನು ಸಂಪಾದಿಸಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಸತತ ಏಳನೆ ಗೆಲುವು ಸಾಧಿಸಲು ವಿಫಲವಾಗಿದೆ.

ಸ್ವಿಸ್ ತಂಡ ಈ ತನಕ ಏಳು ಬಾರಿ ಫ್ರಾನ್ಸ್ ತಂಡವನ್ನು ಮುಖಾಮುಖಿಯಾಗಿದ್ದು, ಒಂದು ಬಾರಿಯೂ ಗೆಲುವು ಸಾಧಿಸಿಲ್ಲ. ನಾವು ಎ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಹೊಂದಿದ್ದೆವು. ಆ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದೇವೆ. ನಮ್ಮ ಗೆಲುವಿನಲ್ಲಿ ಅದೃಷ್ಟವೂ ಪಾತ್ರವಹಿಸಿದೆ ಎಂದು ಫ್ರೆಂಚ್ ತಂಡದ ಕೋಚ್ ಡಿಡಿಯೆರ್ ಡೆಸ್‌ಚಾಂಪ್ಸ್ ಹೇಳಿದ್ದಾರೆ.

ಗ್ರೂಪ್ ವಿನ್ನರ್ ಫ್ರಾನ್ಸ್ ತಂಡ ಜೂ.26 ರಂದು ನಡೆಯಲಿರುವ ಮುಂದಿನ ಸುತ್ತಿನ ಪಂದ್ಯದಲ್ಲಿ ಸಿ, ಡಿ ಅಥವಾ ಇ ಗುಂಪಿನಲ್ಲಿ ಮೂರನೆ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ. ಸ್ವಿಸ್ ತಂಡ ಸಿ ಗುಂಪಿನಲ್ಲಿ ಎರಡನೆ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ.

ಐದು ಬದಲಾವಣೆ ಮಾಡಿದ್ದ ಫ್ರಾನ್ಸ್ ತಂಡ ಪೌಲ್ ಪೊಗ್ಬಾಗೆ ಬುಲಾವ್ ನೀಡಿತ್ತು. ಪೊಗ್ಬಾ ಮೊದಲಾರ್ಧದಲ್ಲಿ ಎರಡು ಬಾರಿ ಗೋಲು ಬಾರಿಸಲು ಯತ್ನಿಸಿದ್ದರು. ಬದಲಿ ಆಟಗಾರ ಡಿಮಿಟ್ರಿ ಪಾಯೆಟ್ ಕೂಡ ಗೋಲು ಬಾರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ಪಿಚ್‌ನ ಗುಣಮಟ್ಟ ಕಳಪೆಯಾಗಿದ್ದ ಹಿನ್ನೆಲೆಯಲ್ಲಿ ಐದು ಬಾರಿ ಸ್ವಿಸ್ ಆಟಗಾರರು ಧರಿಸಿದ್ದ ಶರ್ಟ್‌ಗಳು ಹರಿದುಹೋಗಿತ್ತು. ಹಾಗೂ ಒಂದು ಬಾರಿ ಚೆಂಡು ಒಡೆದುಹೋಗಿತ್ತು.

   ಮಿಡ್‌ಫೀಲ್ಡರ್ ಗ್ರಾನಿಟ್ ಕ್ಸಾಕಾ ಅವರು ಶರ್ಟ್ ಹರಿದುಹೋದ ಕಾರಣ ಮೂರು ಬಾರಿ ಶರ್ಟ್‌ನ್ನು ಬದಲಿಸಬೇಕಾಯಿತು.

ದ್ವಿತೀಯಾರ್ಧದಲ್ಲಿ ವಲನ್ ಬೆಹ್ರಾಮಿ ಹಾಗೂ ಗ್ರೆಝ್‌ಮನ್ ಆಡುತ್ತಿದ್ದಾಗ ಚೆಂಡು ಒಡೆದುಹೋದ ಘಟನೆಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News