×
Ad

ಸರ್ದಾರ್ ಸಾರಥ್ಯದ ಭಾರತ ತಂಡ ಪ್ರಕಟ

Update: 2016-06-20 23:14 IST

ಹೊಸದಿಲ್ಲಿ, ಜೂ.20: ಸ್ಪೇನ್‌ನ ವೆಲೆನ್ಸಿಯಾದಲ್ಲಿ ಜೂ.27 ರಿಂದ ಆರಂಭವಾಗಲಿರುವ ಆರು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್‌ಗೆ ಭಾರತೀಯ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. 18 ಸದಸ್ಯರನ್ನು ಒಳಗೊಂಡ ತಂಡವನ್ನು ಸರ್ದಾರ್ ಸಿಂಗ್ ನಾಯಕನಾಗಿ ಮುಂದುವರಿಸಲಿದ್ದಾರೆ.

ಸರ್ದಾರ್ ಅವರೊಂದಿಗೆ ಡ್ರಾಗ್ ಫ್ಲಿಕರ್ ರೂಪಿಂದರ್‌ಪಾಲ್ ಸಿಂಗ್ ಹಾಗೂ ಬಿರೇಂದರ್ ಲಾಕ್ರಾ ತಂಡಕ್ಕೆ ವಾಪಸಾಗಿದ್ದಾರೆ.

ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ನಾಯಕತ್ವದ ಭಾರತ ತಂಡ ಮೊದಲ ಬಾರಿ ಬೆಳ್ಳಿಪದಕವನ್ನು ಜಯಿಸಿ ಇತಿಹಾಸ ಬರೆದಿತ್ತು.

 ಹಿರಿಯ ಆಟಗಾರರಾದ ವಿಆರ್ ರಘುನಾಥ್ ಹಾಗೂ ಕೊಥಜಿತ್ ಸಿಂಗ್ ಅವರೊಂದಿಗೆ ಲಾಕ್ರ ಹಾಗೂ ರೂಪಿಂದರ್‌ಪಾಲ್ ಸೇರ್ಪಡೆಯಾಗುವುದರೊಂದಿಗೆ ಭಾರತದ ಡಿಫೆನ್ಸ್ ಸರದಿ ಇದೀಗ ಮತ್ತಷ್ಟು ಬಲಿಷ್ಠವಾಗಿದೆ.ವಿಕಾಸ್ ದಾಹಿಯಾ ಗೋಲ್‌ಕೀಪರ್ ಶ್ರೀಜೇಶ್‌ಗೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭಾರತವಲ್ಲದೆ ಅರ್ಜೆಂಟೀನ, ಜರ್ಮನಿ, ನ್ಯೂಝಿಲೆಂಡ್, ಐರ್ಲೆಂಡ್ ಹಾಗೂ ಆತಿಥೇಯ ಸ್ಪೇನ್ ತಂಡ ಭಾಗವಹಿಸಲಿದೆ. ಕಳೆದ ವಾರಾಂತ್ಯದಲ್ಲಿ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ್ನು ಮೊದಲ ಬಾರಿ ಜಯಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದ್ದು, ಆರು ರಾಷ್ಟ್ರಗಳು ಭಾಗವಹಿಸಲಿರುವ ಟೂರ್ನಮೆಂಟ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಟೂರ್ನಿಯ ಎಲ್ಲ ಪಂದ್ಯಗಳು ಮುಂಬರುವ ರಿಯೋ ಗೇಮ್ಸ್‌ಗೆ ಇರುವ ಮೆಟ್ಟಿಲುಗಳಾಗಿವೆ ಎಂದು ಸರ್ದಾರ್ ಸಿಂಗ್ ಹೇಳಿದ್ದಾರೆ.

ಭಾರತ ತಂಡ ಜೂ.27 ರಂದು ಜರ್ಮನಿಯನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಹೋರಾಟ ಆರಂಭಿಸಲಿದೆ.

ಭಾರತ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಪಿ.ಆರ್.ಶ್ರೀಜೇಶ್(ಉಪನಾಯಕ), ವಿಕಾಸ್ ದಾಹಿಯಾ.

ಡಿಫೆಂಡರ್‌ಗಳು: ರೂಪಿಂದರ್‌ಪಾಲ್ ಸಿಂಗ್,ವಿಆರ್ ರಘುನಾಥ್, ಕೊಥಜಿತ್ ಸಿಂಗ್, ಸುರೇಂದರ್‌ಕುಮಾರ್, ಹರ್ಮನ್‌ಪ್ರೀತ್ ಸಿಂಗ್,ಬಿರೇಂದ್ರ ಲಾಕ್ರ.

ಮಿಡ್‌ಫೀಲ್ಡರ್‌ಗಳು: ದನೀಶ್ ಮುಜ್ತಬಾ, ಚಿಂಗ್ಲೆನ್‌ಸನಾ ಸಿಂಗ್, ಮನ್‌ಪ್ರೀತ್ ಸಿಂಗ್, ಸರ್ದಾರ್ ಸಿಂಗ್(ನಾಯಕ), ಎಸ್‌ಕೆ ಉತ್ತಪ್ಪ, ದೇವೇಂದ್ರ ಸುನಿಲ್ ವಾಲ್ಮೀಕಿ, ಹರ್ಜೀತ್ ಸಿಂಗ್.

ಫಾರ್ವರ್ಡ್‌ಗಳು: ತಲ್ವಿಂದರ್ ಸಿಂಗ್, ಎಸ್‌ವಿ ಸುನೀಲ್, ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News