ಬಿಜೆಪಿ ಸಂಸದ ಮಹೇಶ್ ಗಿರಿ ಬಂಧನಕ್ಕೆ ಕೇಜ್ರಿ ಒತ್ತಾಯ
ಹೊಸದಿಲ್ಲಿ, ಜೂ.20: ಎನ್‌ಡಿಎಂಸಿಯ ಕಾನೂನು ಸಲಹೆಗಾರರೊಬ್ಬರ ಹತ್ಯೆಗೆ ಸಂಬಂಧಿಸಿ, ತನ್ನ ಮನೆಯ ಹೊರಗೆ ಉಪವಾಸ ಮುಷ್ಕರ ನಡೆಸುತ್ತಿರುವ ಬಿಜೆಪಿ ಸಂಸದ ಮಹೇಶ್ ಗಿರಿಯವರನ್ನು ಬಂಧಿಸುವಂತೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗ್ರಹಿಸುವುದರೊಂದಿಗೆ ಸೋಮವಾರ ಮುಂಜಾನೆ ಬಿಜೆಪಿ ಹಾಗು ಎಎಪಿಗಳ ನಡುವೆ ಇನ್ನೊಂದು ಸುತ್ತಿನ ಸಮರ ಆರಂಭವಾಗಿದೆ.
ಎಂ.ಎಂ. ಖಾನ್‌ರ ಕೊಲೆ ಪ್ರಕರಣದ ಸಂಬಂಧ ಮೋದಿ ಪೊಲೀಸರು ಗಿರಿಯವರನ್ನು ಬಂಧಿಸಿ ವಿಚಾರಣೆಗೊಳಪಡಿಸ ಬೇಕು. ಮೋದಿ ಪೊಲೀಸರು ಅವರನ್ನು ರಕ್ಷಿಸುತ್ತಿದ್ದಾರೆಂದು ಕೇಜ್ರಿವಾಲ್ ನಸುಕಿನ ವೇಳೆ ಟ್ವೀಟಿಸಿದ್ದರು.
ಪೂರ್ವ ದಿಲ್ಲಿಯ ಬಿಜೆಪಿ ಸಂಸದ ಗಿರಿ, ನಿನ್ನೆ ಆರಂಭಿಸಿದ್ದ ಉಪವಾಸ ಧರಣಿಯನ್ನು ಇಂದು ಕೂಡ ಮುಂದುವರಿಸಿದ್ದು, ದಿಲ್ಲಿಯ ಮುಖ್ಯಮಂತ್ರಿ ಮನೆಯಿಂದ ಹೊರಬಂದು ಆರೋಪವನ್ನು ಬೆಂಬಲಿಸುವ ಪುರಾವೆ ನೀಡಲಿ ಅಥವಾ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ. ಆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ‘ಬಾಹರ್ ಆವೋ ಕೇಜ್ರಿವಾಲ್’ (ಕೇಜ್ರಿವಾಲರೇ ಹೊರಗೆ ಬನ್ನಿ) ಎಂಬ ಘೋಷಣೆಗಳು ಹರಿದಾಡುತ್ತಲೇ ಇವೆ.
ಇತ್ತೀಚೆಗೆ ಆರ್‌ಬಿಐ ಗವರ್ನರ್ ರಘುರಾಮ ರಾಜನ್‌ರ ವಿರುದ್ಧ ವಾಗ್ದಾಳಿ ನಡೆಸಿ ಸುದ್ದಿಯಲ್ಲಿದ್ದ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಮಧ್ಯ ದಿಲ್ಲಿಯ ಸಿವಿಲ್ ಲೈನ್‌ನ 6 ಫ್ಲಾಗ್ ಸ್ಟಾಫ್ ರಸ್ತೆಯ ಕೇಜ್ರಿವಾಲ್‌ರ ನಿವಾಸದ ಹೊರಗೆ ಉಪವಾಸ ಮುಷ್ಕರ ನಡೆಸುತ್ತಿರುವ ಗಿರಿಯವರನ್ನು ಸೇರಿಕೊಂಡಿದ್ದಾರೆ. ಕೇಜ್ರಿವಾಲ್ ಒಬ್ಬ ನಕ್ಸಲರಾಗಿದ್ದರು. ಅವರಿಗೆ ಆಧಾರರಹಿತ ಆರೋಪಗಳನ್ನು ಹೊರಿಸುವುದೇ ಅಭಾಸವಾಗಿದೆಯೆಂದು ಕಿಡಿಕಾರಿರುವ ಸ್ವಾಮಿ, ಕೇಜ್ರಿವಾಲ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಝೀಬ್ ಜಂಗ್‌ರ ಉಚ್ಚಾಟನೆಗೂ ಅವರು ಒತ್ತಾಯಿಸಿದ್ದಾರೆಂದು ಎನ್‌ಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.