ಕೈರಾನ ವಲಸೆ ಒಂದು ವಾಸ್ತವ ವರದಿ
ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ಬಿಜೆಪಿಯ ಇತ್ತೀಚಿನ ಕೋಮು ಪುಕಾರನ್ನು ಬೆತ್ತಲುಗೊಳಿಸಿದೆ. ಕೈರಾನಾ ಸಾಮೂಹಿಕ ವಲಸೆ ಬಗ್ಗೆ ಪರಿಶೀಲನೆ ನಡೆಸಿ ವರದಿ ಬಿಡುಗಡೆ ಮಾಡಿದ್ದು, ಕೋಮು ಸಾಮರಸ್ಯಕ್ಕೆ ಭಂಗ ತರುವ ರೀತಿಯಲ್ಲಿ ಹಿಂದೂಗಳನ್ನು ಪ್ರಚೋದಿಸುವ ರೀತಿಯ ಹೇಳಿಕೆ ನೀಡಿದ ಬಿಜೆಪಿ ಸಂಸದ ಹುಕುಂ ಸಿಂಗ್ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ಉತ್ತರ ಪ್ರದೇಶ ಸರಕಾರವನ್ನು ಒತ್ತಾಯಿಸಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ವಿಷಯವನ್ನು ಚರ್ಚಿಸಿದ ಬಗ್ಗೆ ಪಕ್ಷದ ಅಧ್ಯಕ್ಷರನ್ನೂ ಸಮಿತಿ ಟೀಕಿಸಿದೆ.
ಮಿಲ್ಲಿ ಗೆಜೆಟ್ ನಿಯೋಜಿಸಿದ್ದ ಈ ಸತ್ಯಶೋಧನಾ ತಂಡ, ಹುಕುಂ ಸಿಂಗ್ ಅವರ ಪಟ್ಟಿಯ ದೋಷಗಳನ್ನು ಎತ್ತಿಹಿಡಿದಿದೆ. ಕೈರಾನಾದಿಂದ ವಲಸೆಹೋದವರು ಎಂದು ಹುಕುಂ ಸಿಂಗ್ ನೀಡಿರುವ 346 ಮಂದಿಯ ಪಟ್ಟಿಯ ನಾಲ್ಕು ಮಂದಿ ಈ ಮೊದಲೇ ಮೃತಪಟ್ಟಿದ್ದು, 69 ಕುಟುಂಬಗಳು ಬಹಳಷ್ಟು ಹಿಂದೆಯೇ ಕೈರಾನಾದಿಂದ ವಲಸೆ ಹೋಗಿರುವುದು ತಿಳಿದುಬಂದಿದೆ. ಕೈರಾನಾದಲ್ಲಿ ಈಗಲೂ ವಾಸವಿರುವ 20 ಮಂದಿಯ ಹೆಸರೂ ಪಟ್ಟಿಯಲ್ಲಿದೆ. ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಸಮಾಜವನ್ನು ಧ್ರುವೀಕರಿಸಲು ಬಿಜೆಪಿ ಹೆಣೆದಿರುವ ತಂತ್ರದ ಭಾಗ ಇದಾಗಿದೆ ಎಂದು ವರದಿ ನಿರ್ಧಾರಕ್ಕೆ ಬಂದಿದೆ. 2013ರ ಸೆಪ್ಟಂಬರ್‌ನಲ್ಲಿ ನಡೆದ ಮುಸ್ಲಿಂ ವಿರೋ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಹುಕುಂ ಸಿಂಗ್, ಸತ್ಯಶೋಧನಾ ಸಮಿತಿ ಕೈರಾನಾಗೆ ಭೇಟಿ ನೀಡಿದ ದಿನ ತಮ್ಮ ಹಿಂದಿನ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿ, ಕೈರಾನಾದಿಂದ ಹಿಂದೂಗಳು ವಲಸೆ ಹೋಗಿದ್ದಾರೆ ಎನ್ನುವುದಕ್ಕೆ ಕೋಮುಕಾರಣವಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಹೋಗಿದ್ದಾರೆ ಎಂದು ಸಬೂಬು ನೀಡಿದ್ದಾರೆ. ಇದು ಮತ್ತೆ ಸುಳ್ಳು. ಏಕೆಂದರೆ ಕಾನೂನು- ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿದ್ದರೆ, ಇತರ ಪಟ್ಟಣಗಳಿಂದಲೂ ಜನ ವಲಸೆ ಹೋಗಬೇಕಿತ್ತು ಎಂದು ವರದಿ ವಿವರಿಸಿದೆ.
ಸತ್ಯಶೋಧನಾ ಸಮಿತಿ ಕೈರಾನಾ ತಲುಪಿದಾಗ ಇನ್ನೊಂದು ಸುದ್ದಿ ನಮ್ಮ ಕಿವಿಗೆ ಬಿತ್ತು. ಪಕ್ಕದ ಕಾಂಧ್ಲಾ ಪಟ್ಟಣದಲ್ಲಿ ಕೂಡಾ ಇಂಥದ್ದೇ 163 ಕುಟುಂಬಗಳ ಪಟ್ಟಿಯನ್ನು ಸ್ಥಳೀಯವಾಗಿ ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಕೈರಾನಾ ಆರೋಪವನ್ನೇ ಇಲ್ಲೂ ಮಾಡುತ್ತಿವೆ.
ಹಿಂದೂಸ್ತಾನಿ ಶಾಸೀಯ ಸಂಗೀತ ಪರಂಪರೆಯ ಕಿರಾಣಾ ಘರಾನಾದಿಂದಾಗಿ ವಿಶ್ವಾದ್ಯಂತ ಮನೆಮಾತಾಗಿರುವ ಈ ಪುಟ್ಟ ಪಟ್ಟಣದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 80.74ರಷ್ಟು ಮುಸ್ಲಿಮರು. ಶೇಕಡಾ 18.34ರಷ್ಟು ಹಿಂದೂಗಳು. ಉಳಿದವರು ಇತರ ಸಮುದಾಯಗಳಿಗೆ ಸೇರಿದವರು ಎಂದು 2011ರ ಜನಗಣತಿ ಅಂಕಿ ಅಂಶ ಹೇಳುತ್ತದೆ. ಮುಝಾರ್‌ನಗರ ಹಿಂಸಾಚಾರದ ಸಂದರ್ಭದಲ್ಲಿ ಸಂತ್ರಸ್ತರಾದ ಮುಸ್ಲಿಂ ಕುಟುಂಬಗಳಿಗೆ ತಾತ್ಕಾಲಿಕ ನಿರಾಶ್ರಿತ ಶಿಬಿರಗಳನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.
ಪಟ್ಟಣದಲ್ಲಿ ಬೆಳಕಿಗೆ ಬಾರದ ಅಸಂಖ್ಯಾತ ಕಥೆಗಳು ಹುದುಗಿರುವುದು ನಮ್ಮ ತಂಡಕ್ಕೆ ತಿಳಿದುಬಂದಿದೆ. ಅಂದರೆ ಇಂಥ ಕೋಮು ಉದ್ದೇಶದ ಎಲ್ಲ ಆಟಗಳೂ ನಡೆಯುತ್ತಿರುವುದು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ. ನಾವು ಭೇಟಿ ನೀಡಿದ ದಿನ ರಮಝಾನ್‌ನ ಎಂಟನೆ ದಿನದ ಉಪವಾಸ. ಈ ಮುಸ್ಲಿಂ ಬಾಹುಳ್ಯದ ಗ್ರಾಮದಲ್ಲಿ ಹೊಟೇಲ್‌ಗಳು ತೆರೆದಿರುವುದು ಮತ್ತು ಜನ ಆಹಾರ ಸೇವಿಸುತ್ತಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂತು. ಕೆಲ ಚಾನಲ್‌ಗಳಲ್ಲಿ ವರದಿ ಮಾಡಿದಂತೆ, ರಸ್ತೆ, ಮಹಲ್ ಅಥವಾ ಮಾರುಕಟ್ಟೆಯಲ್ಲಿ ಯಾವ ಉದ್ವಿಗ್ನತೆಯ ವಾತಾವರಣವೂ ಕಾಣಲಿಲ್ಲ. ಜತೆಗೆ ಯಾವ ಮನೆಯ ಮುಂದೆಯೂ, ಮನೆ ಮಾರಾಟಕ್ಕಿದೆ ಎಂಬ ಒಕ್ಕಣೆ ಕಂಡುಬರಲಿಲ್ಲ.
ಇದನ್ನು ಹಿಂದೂ ವಲಸೆ ಎಂದು ಹೇಳಿರುವುದು ಸತ್ಯಕ್ಕೆ ದೂರ ಎಂದು ಕೈರಾನಾ ಠಾಣೆಯ ಮುಖ್ಯಾಕಾರಿ ಎಂ.ಎಸ್.ಗಿಲ್ ಹೇಳಿದರು. ‘‘ಇದು ಈ ದಿನಗಳಲ್ಲಿ ಸಾಮಾನ್ಯ. ಉತ್ತಮ ಭವಿಷ್ಯ ಅರಸಿ ಜನ ಒಂದೆಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವುದು ಈಗ ಸಾಮಾನ್ಯ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲ ಪಕ್ಷಗಳು ಈ ಪುಕಾರು ಹುಟ್ಟಿಸಿವೆ’’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
‘‘ಮಾಧ್ಯಮ ಈ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಿದೆ. ಎರಡೂ ಸಮುದಾಯಗಳ ಮುಖಂಡರು ಜೊತೆಗೇ ನಿಂತು ಸಾಮರಸ್ಯಕ್ಕೆ ಕರೆ ನೀಡಿದ್ದಾರೆ’’ ಎನ್ನುವುದು ಠಾಣೆಯ ಸಬ್ ಇನ್‌ಸ್ಪೆಕ್ಟರ್ ತನ್ವರ್ ವಿವರಣೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಸಿಹಿತಿನಿಸು ಮಾರಾಟ ಮಳಿಗೆಯೊಂದರ ಮಾಲಕರು ವಾಸ್ತವವನ್ನು ತೆಗೆದಿಟ್ಟದ್ದು ಹೀಗೆ: ‘‘ಹೌದು. ಮಕೀಂ ಕಾಳಾ ಗ್ಯಾಂಗ್ ರಕ್ಷಣೆ ಹಣಕ್ಕಾಗಿ ಆಗ್ರಹಿಸುತ್ತಿದೆ. ಸುಲಿಗೆಕೋರರ ಬೆದರಿಕೆಯಿಂದಾಗಿ ನನ್ನ ಅಣ್ಣ ಕೈರಾನಾದಿಂದ ಬೇರೆಡೆಗೆ ಹೋಗಿದ್ದಾರೆ. ಇಂಥ ಸಮಾಜಘಾತುಕ ಶಕ್ತಿಗಳು ಎಲ್ಲ ಸಮುದಾಯಗಳ ಶ್ರೀಮಂತರನ್ನು ಕೂಡಾ ಹಣಕ್ಕಾಗಿ ಪೀಡಿಸುತ್ತವೆ.’’
‘‘ಹುಕುಂ ಸಿಂಗ್ ಅವರು 2013ರಿಂದಲೂ ಇಲ್ಲಿ ಕೋಮು ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಅವರು ಏನು ಸಾಧ್ಯವೋ ಅದನ್ನೆಲ್ಲ ಮಾಡಲಿ; ಇಲ್ಲಿ ಮಾತ್ರ ಎರಡೂ ಸಮುದಾಯಗಳ ನಡುವಿನ ಬಿಗಿಯಾದ ಬಂಧವನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ’’ ಎನ್ನುವುದು 42 ವರ್ಷದ ವಾಸಿಂ ಅಭಿಮತ.
ಬಿಜೆಪಿ ಹಾಗೂ ಆರೆಸ್ಸೆಸ್‌ನ ರಾಜಕೀಯ ಮೇಲಾಟಕ್ಕಾಗಿ ಹಾಗೂ ತಾವು ಚಾಲ್ತಿಯಲ್ಲಿರುವ ಸಲುವಾಗಿ ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸುವ ಆರೋಪಗಳನ್ನು ಮಾಡುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಕಳೆದ ಮೇ 26ರಂದು ಸಹರಾಣಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿ ನಡೆದಾಗಿನಿಂದಲೂ, ಹುಕುಂ ಸಿಂಗ್ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸಚಿವ ಸಂಜೀವ್ ಬಾಲ್ಯನ್ ಹಾಗೂ ಮೀರಠ್ ಶಾಸಕ ಸಂಗೀತ್ ಸೋಮ್ ಅವರು, ಪ್ರಧಾನಿ ಕಾರ್ಯಕ್ರಮದಲ್ಲಿ ಹುಕುಂ ಸಿಂಗ್ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿಲ್ಲ. ಈ ಕಾರಣದಿಂದ ಹುಕುಂ ಸಿಂಗ್ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಅನಿಸಿಕೆ.
ಕೈರಾನಾ ಮೊಹಲ್ಲಾದ ಕಡಿದಾದ ರಸ್ತೆಗಳು ಹಾಗೂ ಮಾರುಕಟ್ಟೆಗಳಿಗೂ ಸತ್ಯಶೋಧನಾ ತಂಡ ಭೇಟಿ ನೀಡಿತ್ತು. ಪೊಲೀಸ್ ಅಕಾರಿಗಳನ್ನೂ ಭೇಟಿ ಮಾಡಿತ್ತು. ಬಿಜೆಪಿಯ ಈ ಸುಳ್ಳು ಅಪಪ್ರಚಾರದಿಂದಾಗಿ 21 ಹಿಂದೂ ವಿವಾಹಗಳು ಮುರಿದು ಬಿದ್ದಿರುವುದು ಸತ್ಯಶೋಧನಾ ತಂಡದ ಗಮನಕ್ಕೆ ಬಂದಿದೆ. ‘‘ಇಂಥ ವದಂತಿ ಹಬ್ಬಿಸಿದರೆ, ಯಾರು ತಾನೇ ತಮ್ಮ ಹೆಣ್ಣುಮಕ್ಕಳನ್ನು ಕೈರಾನಾಗೆ ಕಳುಹಿಸಲು ಇಷ್ಟಪಡುತ್ತಾರೆ?’’ ಎಂದು ಠಾಣಾಕಾರಿ ಎಂ.ಎಸ್.ಗಿಲ್ ಪ್ರಶ್ನಿಸುತ್ತಾರೆ. ತಮ್ಮ ಅಕಾರಾವಯಲ್ಲಿ ಇಲ್ಲಿ ಯಾವ ಕೋಮು ಸಂಘರ್ಷವೂ ಸಂಭವಿಸಿಲ್ಲ ಅಥವಾ ಈ ಬಗೆಗಿನ ದೂರು ಕೂಡಾ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ‘‘2013ರ ಘಟನೆಯ ಅವಯಲ್ಲಿ ಕೂಡಾ ಗ್ರಾಮದಿಂದ ಯಾರೂ ಸಾಮೂಹಿಕ ವಲಸೆ ಹೋಗಿಲ್ಲ ಎಂದು ಅವರು ಹೇಳುತ್ತಾರೆ. ಸುಲಿಗೆಗಾಗಿ ಒಬ್ಬ ವ್ಯಾಪಾರಿಯ ಹತ್ಯೆ ನಡೆದಾಗ ಕೂಡಾ, ಇಂಥ ವಲಸೆ ನಡೆದಿಲ್ಲ. ‘ಪಲಾಯನ’ ಎಂಬ ಶಬ್ದವನ್ನು ಈ ನಗರದಲ್ಲಿ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಇಲ್ಲಿ ರಾಮನವಮಿ ಮತ್ತು ಬಾಲಾಜಿ ಶೋಭಾಯಾತ್ರೆ ಸಂದರ್ಭದಲ್ಲಿ ಕೂಡಾ ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆ. ಆದರೆ ಈ ಬಗ್ಗೆ ಯಾವ ಮಾಧ್ಯಮಗಳಲ್ಲೂ ವರದಿಗಳು ಬಂದಿಲ್ಲ’’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
‘‘ಸ್ಥಳೀಯ ಗೂಂಡಾಗಳಿಂದ ಸುಲಿಗೆ ಪ್ರಕರಣಗಳು ಪದೇ ಪದೇ ನಡೆಯುತ್ತಿರುತ್ತವೆ. ಅದರಲ್ಲೂ ಮುಖ್ಯವಾಗಿ ಮಕೀಂ ಕಾಳಾ ಗ್ಯಾಂಗ್ ಈ ಕೃತ್ಯದಲ್ಲಿ ತೊಡಗಿದೆ. ಆದರೆ ಇವರ ಪ್ರಮುಖ ಗುರಿ ಮುಸ್ಲಿಮರೇ ಹೊರತು ಹಿಂದೂ ಗಳಲ್ಲ. ಸಂರಕ್ಷಣಾ ನಿ ಹೆಸರಿನಲ್ಲಿ ಆತ ಸುಲಿಗೆ ದಂಧೆ ನಡೆಸುತ್ತಿದ್ದಾನೆ. ಈತನನ್ನು ಹಾಗೂ ಶಾರ್ಪ್ ಶೂಟರ್ ಸಬೀರ್‌ನನ್ನು 2015ರಲ್ಲೇ ಜೈಲಿಗೆ ತಳ್ಳಿದ್ದರೂ, ಅಲ್ಲಿಂದಲೇ ಈ ದಂಧೆ ನಡೆಸುತ್ತಿದ್ದಾರೆ’’ ಎಂದು ಹೇಳುತ್ತಾರೆ.
ಅಪರಾಧದ ಕಾರಣಕ್ಕಾಗಿ ಸಾಮೂಹಿಕ ವಲಸೆ ಹೋಗುತ್ತಿದೆ ಎಂದೂ ಹೇಳುವಂತಿಲ್ಲ. ಮಕೀಂ ಕಾಳಾ ಗ್ಯಾಂಗ್‌ನ ಹೆಸರು ಚರ್ಚೆಗೆ ಬಂದಾಗ, ಅಂಥ ಗ್ಯಾಂಗ್, ಯಾವ ಸಮುದಾಯದವರು ಎಂದು ನೋಡದೆ, ಅಗರ್ಭ ಶ್ರೀಮಂತರ ಬೆನ್ನು ಬಿದ್ದಿರುವುದು ಸ್ಪಷ್ಟ ಎಂದು ಸ್ಥಳೀಯರು ಹೇಳುತ್ತಾರೆ.
ಒಮ್ಮೆ ಮಕೀಂಗೆ ದರೋಡೆ ಪ್ರಕರಣವೊಂದರಲ್ಲಿ ಕೇವಲ 40- 50 ಸಾವಿರ ರೂಪಾಯಿ ಮಾತ್ರ ದೊರಕಿತು. ಆಗ ಸಂತ್ರಸ್ತನತ್ತ ಆ ಹಣವನ್ನು ಆತ ಎಸೆದ ಎಂಬ ಘಟನೆಯನ್ನು ಸ್ಥಳೀಯರು ವಿವರಿಸಿದರು. ಸ್ಥಳೀಯವಾಗಿ ಸೀಮಿತ ಅವಕಾಶಗಳು ಇರುವುದರಿಂದ ಎರಡೂ ಸಮುದಾಯಗಳ ಮಂದಿ ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎನ್ನುವುದು ಸ್ಥಳೀಯ ವ್ಯಾಪಾರಿಗಳ ಹೇಳಿಕೆ. ಅದರಲ್ಲೂ ಮುಖ್ಯವಾಗಿ ಉತ್ತಮ ಅವಕಾಶ ಅರಸಿ, ಮೆಟ್ರೋಗಳಿಗೆ ಹೋಗುತ್ತಾರೆ. ಈ ಪಟ್ಟಿಯಲ್ಲಿ ಹೇಳಿರುವ ಬಹುತೇಕ ಕುಟುಂಬಗಳು ಆರ್ಥಿಕ ಕಾರಣಗಳಿಗಾಗಿ ವಲಸೆ ಹೋಗಿವೆ. ದಿಲ್ಲಿ ಕೇವಲ 98 ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ, ಉತ್ತಮ ಅವಕಾಶಗಳನ್ನು ಅರಸಿ, ಮೆಟ್ರೋದತ್ತ ವೇಗವಾಗಿ ಜನ ಆಕರ್ಷಿತರಾಗುತ್ತಾರೆ ಎಂದು ಸ್ಥಳೀಯರು ವಿವರಿಸುತ್ತಾರೆ.
ಪ್ರಮುಖವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಕೈರಾನಾದಲ್ಲಿ 2014ರಲ್ಲಿ ಒಟ್ಟು 22 ಹತ್ಯೆ ನಡೆದಿದೆ. ಈ ಪೈಕಿ ಏಳು ಮಂದಿ ಹಿಂದೂಗಳು ಹಾಗೂ 14 ಮಂದಿ ಮುಸ್ಲಿಮರು. 2014ರಲ್ಲಿ ಮೂವರು ಹಿಂದೂ ವ್ಯಾಪಾರಿಗಳ ಹತ್ಯೆಯಾದಾಗ, ಮುಸ್ಲಿಂ ಪ್ರಾತಿನಿಧ್ಯ ಅಕ ಇರುವ ಮಾರುಕಟ್ಟೆ ಸಮಿತಿ ಏಳು ದಿನಗಳ ಪ್ರತಿಭಟನೆ ನಡೆಸಿತು.
ಇಡೀ ಘಟನಾವಳಿಗಳನ್ನು ಅವಲೋಕಿಸಿದಾಗ ಕಂಡುಬಂದ ಮತ್ತೊಂದು ಕುತೂಹಲಕರ ವಿಚಾರವೆಂದರೆ, ಮಾಧ್ಯಮಗಳು ಗ್ರಾಮದ ಮೇಲೆ ಸದಾ ಗಮನ ಹರಿಸುವುದನ್ನು ಸ್ಥಳೀಯರು ಇಚ್ಛಿಸುತ್ತಾರೆ. ಏಕೆಂದರೆ, ಇಲ್ಲಿನ ತೀರಾ ಪ್ರತಿಕೂಲ ಪರಿಸ್ಥಿತಿಗಳ ಬಗ್ಗೆ ಮಾಧ್ಯಮಗಳು ಗಮನ ಹರಿಸುವುದರಿಂದ ಒಂದಷ್ಟು ಮಟ್ಟಿಗಾದರೂ ಪ್ರಯೋಜನವಾಗಬಹುದು ಎಂಬ ನಂಬಿಕೆ ಅವರದ್ದು.
ಈ ವಲಸೆಗೆ (ಸಾಮೂಹಿಕ ವಲಸೆ ಅಲ್ಲ) ಮುಖ್ಯ ಕಾರಣ ಆರ್ಥಿಕ ಅಂಶ ಹಾಗೂ ಜಾಗತೀಕರಣ ಪರಿಸ್ಥಿತಿಯಲ್ಲಿ ಹೊಸ ಪೀಳಿಗೆಯ ಬದಲಾಗುತ್ತಿರುವ ಆಕಾಂಕ್ಷೆಗಳು ಎಂದು ಸ್ಥಳೀಯರು ಪದೇ ಪದೇ ಒತ್ತಿ ಹೇಳಿದರು. ಕೈರಾನಾದಲ್ಲಿ ನಾಗರಿಕ ಸೌಲಭ್ಯಗಳು ಅಕ್ಷರಶಃ ಅಸ್ತಿತ್ವದಲ್ಲಿಲ್ಲ. ಆರೋಗ್ಯ ಸೌಲಭ್ಯ ಅಥವಾ ಶಾಪಿಂಗ್‌ಗೆ ಪಾಣಿಪತ್ ಅಥವಾ ಮೀರಠ್‌ಗೆ ಹೋಗಬೇಕು. ಉದ್ಯೋಗಾವಕಾಶಗಳೂ ಸೀಮಿತ. ಈ ಕಾರಣದಿಂದಾಗಿ, ಪ್ರತೀ ದಿನ ಆರರಿಂದ ಏಳು ಸಾವಿರ ಮಂದಿ ಪಾಣಿಪತ್ ಪಟ್ಟಣಕ್ಕೆ ದಿನಗೂಲಿಗೆ ತೆರಳುತ್ತಾರೆ.
ಆರೆಸ್ಸೆಸ್‌ನ ಮುಖವಾಣಿ ಹಾಗೂ ಬಿಜೆಪಿ- ಆರೆಸ್ಸೆಸ್ ಬಗ್ಗೆ ಒಲವು ಇರುವ ಮಾಧ್ಯಮಗಳು ಕೂಡಾ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂಥ ವದಂತಿ ಹಬ್ಬಿಸುವಲ್ಲಿ ಮತ್ತು ಕೋಮು ವಿಭಜನೆ ಸೃಷ್ಟಿಸುತ್ತವೆ. ಉದಾಹರಣೆಗೆ ಆರೆಸ್ಸೆಸ್ ಮುಖವಾಣಿಯಾದ ‘ಆರ್ಗನೈಸರ್’ ಮತ್ತು ಪಾಂಚಜನ್ಯ, ಕೈರಾನಾ ಬಗ್ಗೆ ಮುಖಪುಟ ಲೇಖನ ಪ್ರಕಟಿಸಿವೆ ಹಾಗೂ ಇಲ್ಲಿನ ವಲಸೆಯನ್ನು ಕಾಶ್ಮೀರಿ ಪಂಡಿತರ ವಲಸೆಗೆ ಹೋಲಿಸಿವೆ. ಈ ಆರೋಪಗಳನ್ನು ಪ್ರಚುರಪಡಿಸುವಲ್ಲಿ ಕೆಲ ಪತ್ರಕರ್ತರು ಮತ್ತು ಮಾಧ್ಯಮಗಳು ವಹಿಸಿದ ಪಾತ್ರ ಕೂಡಾ ಆಕ್ಷೇಪಾರ್ಹ. ಹಿಂದಿ ದೈನಿಕ ‘ದೈನಿಕ್ ಜಾಗರಣ್’, ಕೈರಾನಾ ವಿಷಯದ ಬಗ್ಗೆ ಒಂದು ವಾರ ಕಾಲ ಸರಣಿ ಲೇಖನಗಳನ್ನು ಪ್ರಕಟಿಸಿತ್ತು. ಬಳಿಕ ಝೀ ನ್ಯೂಸ್ ಈ ವಿಷಯವನ್ನು ಆಯ್ದುಕೊಂಡಿತು. ಸ್ಥಳೀಯವಾಗಿ ಖಚಿತಪಡಿಸಿಕೊಳ್ಳದೆ, ಕೈರಾನಾ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಲೇ ಇವೆ ಎನ್ನುವುದನ್ನೂ ವರದಿ ಸ್ಪಷ್ಟಪಡಿಸಿದೆ.
ಶಹಜಹಾನ್‌ಪುರ ವಲಯದ ಡಿಐಜಿ ಎ.ಕೆ.ರಾಘವ್ ಸರಕಾರಕ್ಕೆ ನೀಡಿರುವ ವರದಿಯಲ್ಲೂ ಈ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸ್ಥಳೀಯ ಸಂಸದರು, ಪಟ್ಟಣ ಹಾಗೂ ಸುತ್ತಮುತ್ತಲ ವಾತಾವರಣವನ್ನು ಧ್ರುವೀಕರಣಗೊಳಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರಿಗೆ ಸ್ಪರ್ಸುವ ವಾತಾವರಣ ಸೃಷ್ಟಿಸುತ್ತಿದ್ದಾರೆ. ಸದ್ಯೋಭವಿಷ್ಯದಲ್ಲೇ ಗಂಭೀರ ಪ್ರಮಾಣದ ಕೋಮುಗಲಭೆ ನಡೆಸುವ ಸಾಧ್ಯತೆಯನ್ನೂ ಅವರು ವಿವರಿಸಿದ್ದಾರೆ. ಈ ಗುಂಪುಗಳು ಸಣ್ಣ ವಿಷಯವನ್ನು ಕೂಡಾ ಕೋಮು ದೃಷ್ಟಿಕೋನದಿಂದ ನೋಡುತ್ತವೆ. ಒಂದು ಘಟನೆಯಲ್ಲಿ, ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಇಬ್ಬರು ಹಿಂದೂ ಮುಖಂಡರ ಹೆಸರು ಕೇಳಿಬಂದಿತ್ತು. ಆದರೆ ರಾಜಕೀಯ ಒತ್ತಡದಿಂದಾಗಿ ಅವರ ಹೆಸರನ್ನು ಕೈಬಿಟ್ಟು, ಇಬ್ಬರು ಮುಸ್ಲಿಮರನ್ನು ಆ ಸಂಬಂಧ ಬಂಸಲಾಯಿತು ಎಂದು ವರದಿ ಉಲ್ಲೇಖಿಸಿದೆ.
ಇನ್ನೊಂದು ಕಡೆ, ಪಟ್ಟಣದಿಂದ ಹಿಂದೂಗಳು ವಲಸೆ ಹೋಗುತ್ತಿರುವುದರ ಹಿಂದೆ ಜಿಹಾದಿ ಅಂಶ ಕೆಲಸ ಮಾಡಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಶಾಮಲಿ ಜಿಲ್ಲಾಕಾರಿ, ಎಸ್‌ಡಿಎಂ ಹಾಗೂ ಕೈರಾನಾ ವೃತ್ತಾಕಾರಿಗೆ ಸೂಚಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಜೂನ್ 13ರಂದು ಹೇಳಿಕೆ ನೀಡಿ, ಜಿಹಾದಿಗಳು ತಮ್ಮ ಕೃತ್ಯ ಎಸಗಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆಪಾದಿಸಿದ ಬಳಿಕ ಈ ತನಿಖೆಗೆ ಆದೇಶ ನೀಡಲಾಗಿದೆ.
ಹಿಂದೂಗಳ ಸಾಮೂಹಿಕ ವಲಸೆ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಮುಸ್ಲಿಮರು ಈ ಅವಯಲ್ಲಿ ಪಟ್ಟಣದಿಂದ ವಲಸೆ ಹೋದ ಮುಸ್ಲಿಮರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಉತ್ತಮ ಜೀವನಾಧಾರ ಅರಸಿ ವಲಸೆ ಹೋಗಿದ್ದಾರೆ ಎಂದು ನಿರೂಪಿಸುವುದು ಇದರ ಉದ್ದೇಶ. ಆದರೆ ಈ ಧ್ವನಿಗಳಿಗೆ ದಿಲ್ಲಿ ಅಥವಾ ಲಕ್ನೋದಲ್ಲಿ ಅಕಾರದಲ್ಲಿರುವವರು ಕಿವಿಗೊಡುತ್ತಿಲ್ಲ. ಅವರು ಈ ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸುವ ಬದಲು, ಧ್ರುವೀಕರಣ ಆಟದಲ್ಲಿ ನಿರತರಾಗಿದ್ದಾರೆ. ಅಭಿವೃದ್ಧಿಯ ಆಶ್ವಾಸನೆ ನೀಡುವ ಅವರು, ಅಭಿವೃದ್ಧಿಯ ಬದಲಾಗಿ, ದ್ವೇಷ ಹಾಗೂ ಭೀತಿಯನ್ನು ಹರಡುತ್ತಾರೆ. ಸಮಾಜದ ಅನಕ್ಷರತೆ ಹಾಗೂ ವಿಶ್ವಾಸದ ಕೊರತೆ ಎದುರಿಸುತ್ತಿರುವ ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸಿವೆ. ಬಲಪಂಥೀಯ ಉಗ್ರರು ಮತ ಸೆಳೆದು ಅಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.
ಇಷ್ಟಾಗಿಯೂ ಉತ್ತರ ಪ್ರದೇಶ ಪೊಲೀಸರು, ಯಾವ ಆಧಾರ ಅಥವಾ ತಾರ್ಕಿಕತೆಯೂ ಇಲ್ಲದ ವದಂತಿ ಹುಟ್ಟಿಸಿದ ಸಂಸದರ ವಿರುದ್ಧ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳು ಇಂಥ ವದಂತಿಗಳನ್ನು ಹಬ್ಬಿಸುವುದು, ಸಮಾಜದ ಧ್ರುವೀಕರಣ ಮತ್ತು ಗಲಭೆ ಸೃಷ್ಟಿಸುವ ಪ್ರಯತ್ನದಲ್ಲಿರುವುದರಿಂದ ಇಡೀ ಉತ್ತರ ಪ್ರದೇಶ ಪೊಲೀಸರು ಜಾಗರೂಕರಾಗಿರಬೇಕು ಎನ್ನುವುದೂ ಸೇರಿದಂತೆ ಹಲವು ಶಿಪಾರಸ್ಸುಗಳನ್ನು ವರದಿಯಲ್ಲಿ ಮಾಡಲಾಗಿದೆ. ಮಾಧ್ಯಮ ಕ್ಷೇತ್ರ, ಅದರಲ್ಲೂ ಮುಖ್ಯವಾಗಿ ಹಿಂದಿ ಮುದ್ರಣ ಮಾಧ್ಯಮ ಹಾಗೂ ಸುದ್ದಿವಾಹಿನಿಗಳು ಹೆಚ್ಚು ಹೊಣೆಗಾರಿಕೆ ಪ್ರದರ್ಶಿಸಿ, ಆಧಾರ ರಹಿತ ವದಂತಿಗಳನ್ನು ನಿಜಾಂಶ ಎಂದು ಬಿಂಬಿಸುವ ಮೊದಲು ವಾಸ್ತವವನ್ನು ಪರಿಶೀಲಿಸಬೇಕು ಎಂದು ವರದಿ ಸಲಹೆ ಮಾಡಿದೆ.
ಈ ಸತ್ಯಶೋಧನಾ ಸಮಿತಿಯಲ್ಲಿ, ಸಾಮಾಜಿಕ ಕಾರ್ಯಕರ್ತ ಉವೈಸ್ ಸುಲ್ತಾನ್ ಖಾನ್, ಪತ್ರಕರ್ತರಾದ ಪುಷ್ಪಶರ್ಮಾ, ಮಝೀನ್ ಖಾನ್, ಕೌಸರ್ ಉಸ್ಮಾನ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಹ್ಮದ್ ಅನ್ವರ್ ಇದ್ದರು.