ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಂಗಕ್ಕರ ಹೊಸ ದಾಖಲೆ
ಲಂಡನ್,ಜೂ.21: ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಬ್ಯಾಟಿಂಗ್ ದಾಖಲೆ ಮುರಿಯುವ ಹವ್ಯಾಸವನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ಎಡಗೈ ಬ್ಯಾಟ್ಸ್‌ಮನ್ ಸಂಗಕ್ಕರ ಸೋಮವಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19,000 ರನ್ ಮೈಲುಗಲ್ಲು ತಲುಪಿ ಹೊಸ ದಾಖಲೆ ಬರೆದರು.
ಈಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ 38ರ ಹರೆಯದ ಸಂಗಕ್ಕರ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಪಂದ್ಯದ ವೇಳೆ ಈ ಮೈಲುಗಲ್ಲು ತಲುಪಿದರು.
ಸಂಗಕ್ಕರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ಸಾವಿರ ರನ್ ಪೂರೈಸಲು 18 ರನ್ ಅವಶ್ಯಕತೆಯಿತ್ತು. 29 ರನ್ ಗಳಿಸಿ ಔಟಾದ ಸಂಗಕ್ಕರ ಗೆಹಾನ್ ಮೆಂಡಿಸ್ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಶ್ರೀಲಂಕಾ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸಂಗಕ್ಕರ ಅವರ ಆತ್ಮೀಯ ಗೆಳೆಯ ಮಹೇಲ ಜಯವರ್ಧನೆ 17,843 ರನ್ ಗಳಿಸಿ ಬಳಿಕದ ಸ್ಥಾನದಲ್ಲಿದ್ದಾರೆ.